ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮ ಗಾಂಧೀಜಿಯವರ ಬೃಹತ್ ಪುತ್ಥಳಿಯನ್ನು ಚರಕ ತಿರುಗಿಸುವ ಮೂಲಕ ಮಂಗಳವಾರ ಅನಾವರಣಗೊಳಿಸಿದರು.ಪುತ್ಥಳಿ ಅನಾವರಣ ನಂತರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಗಾಂಧೀಜಿಯವರ ಪುತ್ಥಳಿ ಸ್ಥಾಪನೆಯಿಂದ ಈ ಭಾಗಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಗೌರವ ತಂದಿದೆ. ಸಂವಿಧಾನ ಹಾಗೂ ಪ್ರಜಾತಂತ್ರ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು. ಗಾಂಧೀಜಿವರು ದೇಶಕ್ಕೆ ನೀಡಿದ ಕೊಡುಗೆಯನ್ನು ಈಗ ಎಲ್ಲರೂ ಸ್ಮರಿಸುತ್ತಿದ್ದಾರೆ ಎಂದು ಹೇಳಿದರು.1924ರಲ್ಲಿ ಜರುಗಿದ ಅಧಿವೇಶನದಲ್ಲಿ ಗಾಂಧೀಜಿಯವರು ಅಸ್ಪೃಶ್ಯತೆ ನಿವಾರಣೆಗೆ ಕರೆ ನೀಡಿದರು. ಆದ್ದರಿಂದ ಈ ನೆಲವು ಐತಿಹಾಸಿಕ ಮಹತ್ವ ಹೊಂದಿದೆ. 1924ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳದಲ್ಲಿಯೇ ನೂರು ವರ್ಷದ ಬಳಿಕ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಿರುವುದು ಅತ್ಯಂತ ಮಹತ್ವದ್ದಾಗಿದೆ. ಗುಲ್ಬರ್ಗದಲ್ಲೂ ಮಹಾತ್ಮ ಗಾಂಧೀಜಿಯವರ ವಿಶೇಷ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಸಂವಿಧಾನ ಇಲ್ಲದೇ ಇದ್ದಿದ್ದರೆ ಅರಾಜಕತೆ ಸೃಷ್ಟಿಯಾಗುತ್ತಿತ್ತು. ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ದೇಶ ಕಟ್ಟುವ ಘೋಷ ಮೊಳಗಿತ್ತು. ಗಾಂಧೀಜಿ ಪ್ರತಿಮೆ ಅನಾವರಣ ನನ್ನ ಕೈಯಲ್ಲಿ ಮಾಡಿಸಿದ್ದು ನನ್ನ ಪುಣ್ಯ. ಬೆಳಗಾವಿಯಲ್ಲಿ ಎಐಸಿಸಿ ವರ್ಕಿಂಗ್ ಕಮಿಟಿ ಮೀಟಿಂಗ್ ಮಾಡಿದ್ದು ಇದೆ ಮೊದಲು. ಮತ್ತೊಮ್ಮೆ ಇಂತಹದೊಂದು ಮೀಟಿಂಗ್ ಮಾಡುತ್ತೇವೋ, ಇಲ್ವೋ ಗೊತ್ತಿಲ್ಲ ಮಾರ್ಮಿಕವಾಗಿ ನುಡಿದರು.ಮಹಾತ್ಮ ಗಾಂಧಿ ಹಿಂದೂತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಮ ಭಕ್ತರಾಗಿ ಅತ್ಯುತ್ತಮ ಹಿಂದೂ ಆಗಿದ್ದ ಮಹಾತ್ಮ ಗಾಂಧಿಯನ್ನು ಬಿಜೆಪಿ ಪರಿವಾರದ ಗೋಡ್ಸೆ ಹತ್ಯೆ ಮಾಡಿದ. ನಾವು ಮಹಾತ್ಮಗಾಂಧಿ ಅವರ ಹಿಂದೂತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಿಜೆಪಿ ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತ ಪಾಲಿಸುತ್ತಿದೆ ಎಂದು ಜರಿದರು.ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ, ಸಂವಿಧಾನ ವಿರೋಧಿ-ಅಂಬೇಡ್ಕರ್ ದ್ವೇಷಿಯೂ ಆಗಿದೆ. ನಾವು ಮಹಾತ್ಮಗಾಂಧಿಯವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಇನ್ನಷ್ಟು ಅರ್ಥಪೂರ್ಣವಾಗಿ ತಲುಪಿಸುವ, ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಗುರಿಯೊಂದಿಗೆ ಜೈ ಭಾಪು-ಜೈ ಭೀಮ್-ಜೈ ಸಂವಿಧಾನ ಅಭಿಯಾನವನ್ನು ಮುನ್ನಡೆಸುತ್ತೇವೆ ಎಂದು ಘೋಷಿಸಿದರು. ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮ. ಇದು ಕೇವಲ ಪುತ್ಥಳಿ ಅನಾವರಣ ಕಾರ್ಯಕ್ರಮ ಮಾತ್ರವಲ್ಲ. ಸ್ವಾತಂತ್ರ್ಯ ಯೋಧರಿಗೆ ಗೌರವಿಸುವ ಮತ್ತು ಸಂವಿಧಾನದ ಘನತೆ ಎತ್ತಿ ಹಿಡಿಯುವ ಪವಿತ್ರ ಕಾರ್ಯಕ್ರಮವಾಗಿದೆ ಎಂದರು.ಏಕೀಕರಣ ಕೂಡ ಗಾಂಧಿಜಿಯವರ ಪ್ರೇರಣೆ ದೊರೆತಿದೆ. ಏಕತೆ, ಸಮಾನತೆ ಕಾಪಾಡಿಕೊಂಡು ಗಾಂಧೀಜಿಯವರ ತತ್ವಾದರ್ಶಗಳನ್ನು ಪುನರ್ ಮನನ ಮಾಡಲು ಇದು ಸ್ಫೂರ್ತಿದಾಯಕವಾಗಿದೆ. ಗಾಂಧೀಜಿಯವರ ತತ್ವಗಳನ್ನು ಬದಿಗಿಟ್ಟು ಸದೃಢ ಭಾರತ ನಿರ್ಮಾಣ ಅಸಾಧ್ಯ. ಆದ್ದರಿಂದ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಎಲ್ಲರೂ ಒಗ್ಗೂಡಿಕೊಂಡು ಮುನ್ನಡೆಯಬೇಕಿದೆ. ರಾಮರಾಜ್ಯ ಮತ್ತು ಗ್ರಾಮರಾಜ್ಯ ಗಾಂಧೀಜಿಯವರ ಕನಸಾಗಿತ್ತು. ಪರಸ್ಪರ ಸಹೋದರತೆ, ತ್ಯಾಗ, ಪತ್ನಿಯ ತ್ಯಾಗವು ರಾಮರಾಜ್ಯದ ನೈಜ ಪರಿಕಲ್ಪನೆಯಾಗಿದೆ ಎಂದು ಹೇಳಿದರು.ಸಚಿವ ಎಚ್.ಕೆ.ಪಾಟೀಲ ಸ್ವಾಗತಿಸಿದರು. ಸಚಿವ ಸತೀಶಜಾರಕಿಹೊಳಿ ವಂದಿಸಿದರು. ಸಂಸದೆ ಪ್ರಿಯಾಂಕಾ ಗಾಂಧಿ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಜೈರಾಮ್ ರಮೇಶ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಗ್ರಾಮೀಣ ವಿವಿಗೆ ಮಹಾತ್ಮ ಗಾಂಧೀಜಿ ನಾಮಕರಣ:
ಗದಗಿನ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಮಹಾತ್ಮ ಗಾಂಧೀಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವುದರ ಜತೆಗೆ ನೂತನ ಲಾಂಛನವನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಗಾಂಧೀ ಭಾರತ ವಿಶೇಷ ಅಂಚೆ ಲಕೋಟೆಯನ್ನು ಕೂಡ ಬಿಡುಗಡೆಗೊಳಿಸಲಾಯಿತು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಹೊರತರಲಾದ ಗಾಂಧಿ ಭಾರತ-ಮರುನಿರ್ಮಾಣ ಹಾಗೂ ಉದಯ ಕಾಲ ಸಮೂಹದ ಗಾಂಧಿ ಬಿತ್ತಿದ ಬೆಳಕು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಏಕೀಕರಣ ಚಳವಳಿಗೆ ಪ್ರೇರಣೆಯಾಗಿದ್ದ ಹುಯಿಲಗೋಳ ನಾರಾಯಣರಾವ್ ಅವರು ರಚಿಸಿದ ಉದಯವಾಗಲಿ ನಮ್ಮ ಚೆಲುವು ಕನ್ನಡ ನಾಡು ಗೀತೆಯನ್ನು ಸಾದ್ವಿನಿ ಕೊಪ್ಪ ಅವರು ಪ್ರಸ್ತುತಪಡಿಸಿದರು.ಬಾನಂಗಳಕ್ಕೆ ಚಿಮ್ಮಿದ ರಂಗು:
ಚರಕವನ್ನು ತಿರುಗಿಸುವ ಮೂಲಕ ಮಹಾತ್ಮಾಗಾಂಧೀಜಿಯವರ ಪ್ರತಿಮೆ ಅನಾವರಣಗೊಳಿಸಿದ ಕೂಡಲೇ ಬಾನಂಗಳಕ್ಕೆ ಚಿಮ್ಮಿದ ಬಣ್ಣದ ಚಿತ್ತಾರ ಮೂಡಿಸಿ, ಚಿತ್ತಾಕರ್ಷಕ ಕಾಮನಬಿಲ್ಲಿನ ವರ್ಣಗಳನ್ನು ಅರಳಿಸಿ, ಪಟಾಕಿ ಹಾರಿಸಿದ್ದು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.