ಕರ್ನಾಟಕ ಭೂಕಬಳಿಕೆ ನಿಷೇಧ ನ್ಯಾಯಾಲಯದ ಆದೇಶ । ಜಿಲ್ಲಾಡಳಿತ ಪಪಂ ನಡುವಿನ ಸಂಘರ್ಷಕ್ಕೆ ತೆರೆ
ಕನ್ನಡಪ್ರಭ ವಾರ್ತೆ, ಶೃಂಗೇರಿಅಂಗಡಿ ಮುಂಗಟ್ಟುಗಳೂ ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳಿಂದ ಪಟ್ಟಣದ ಆದಾಯದ ಮೂಲವಾಗಿದ್ದ ಗಾಂಧಿ ಮೈದಾನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡಬೇಕೆಂದು ಕರ್ನಾಟಕ ಭೂ ಕಬಳಿಕೆ ನಿಷೇದ ನ್ಯಾಯಾಲಯ ಆದೇಶಿಸಿದೆ.
ಕಳೆದ ಕೆಲ ಸಮಯಗಳಿಂದ ಈ ಗಾಂದಿ ಮೈದಾನ ನದಿ ಕರಾಬು ಪ್ರದೇಶವೆಂಬ ಕಾರಣಕ್ಕೆ ಜಿಲ್ಲಾಡಳಿತ ಹಾಗೂ ಪಪಂ ನಡುವೆ ಗೊಂದಲ ಉಂಟಾಗಿ ವಿವಾದ ಹುಟ್ಟಿಕೊಂಡಿತ್ತು.ಈ ಪ್ರಕರಣ ವಿಶೇಷ ನ್ಯಾಯಾಲಯದಲ್ಲಿದೆ ಎಂಬ ಕಾರಣಕ್ಕೆ ಈ ಹಿಂದಿನ ಜಿಲ್ಲಾಧಿಕಾರಿ ಮೈದಾನದ ಪ್ರವಾಸಿ ವಾಹನ ನಿಲುಗಡೆ ಶುಲ್ಕ ಹರಾಜು ಪ್ರಕಿಯೆ ತಡೆಹಿಡಿದಿದ್ದರು. ಇದರಿಂದ ಪಟ್ಟಣಪಂಚಾಯಿತಿಗೆ ಸುಮಾರು 1 ಕೋಟಿ ಆದಾಯ ನಿಂತು, ಆದಾಯಕ್ಕೆ ಹೊಡೆತ ನೀಡಿತ್ತು. ನದಿ ಕರಾಬು ಪ್ರದೇಶ ಎಂಬ ಕಾರಣದಿಂದ ಉಚ್ಚನ್ಯಾಯಾಲಯದ ಆದೇಶದಂತೆ ಕಂದಾಯ ಇಲಾಖೆ ಸುಮಾರು 34 ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿತ್ತು. ಇದರಿಂದ ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿದ್ದ ಅನೇಕ ಕುಟುಂಬಗಳು ಸಂಕಷ್ಟ ಅನುಭವಿಸುವಂತಾಯಿತು.
ಗಾಂಧಿ ಮೈದಾನ ಮನೋರಂಜನೆ, ಕ್ರೀಡಾ ಚಟುವಟಿಕೆಗಳ ಕೇಂದ್ರ ಬಿಂದು ಆಗಿತ್ತು. ಈ ಹಿಂದೆ ಟೆಂಟ್ ಸಿನೆಮಾ ಕೇಂದ್ರ, ರಂಗಭೂಮಿ, ಕಲೆ, ಯಕ್ಷಗಾನ ಬಯಲಾಟಗಳು, ಜಾನುವಾರು ಜಾತ್ರೆಗಳು, ಹೀಗೆ ಹಲವು ಕಾರ್ಯಕ್ರಮ ನಡೆಯುತ್ತಾ ಸಾಂಸ್ಕೃತಿಕ ಕೇಂದ್ರವೂ ಅಗಿತ್ತು. ನವರಾತ್ರಿ, ದಸರೆ ಸಂದರ್ಭದಲ್ಲಿ ಸರ್ಕಸ್ ಸಹಿತ ವಿವಿಧ ಚಟುವಟಿಕೆಗಳು ನಡೆಯುತ್ತಿದ್ದವು. ಈ ಎಲ್ಲಾ ಅಂಶಗಳ ಬಗ್ಗೆ ಭೂ ಕಬಳಿಕೆ ನಿಷೇದ ನ್ಯಾಯಾಲಯ ಪಪಂ ವಿಸ್ತೃತ ವರದಿ ನೀಡಿತ್ತು. ಇದನ್ನು ಪರಿಶೀಲಿಸಿ ಪಟ್ಟಣ ಪಂಚಾಯ್ತಿ ಸುಪರ್ದಿಗೆ ಗಾಂಧಿಮೈದಾನ ಸೇರಬೇಕೆಂದು ತಿಳಿಸಿದೆ.
ಗಾಂಧಿ ಮೈದಾನ ಅನೇಕ ದಶಕಗಳಿಂದ ಪಪಂ ವ್ಯಾಪ್ತಿಯಲ್ಲೇ ಇತ್ತು. 1960-61 ರಿಂದ 2024 ರವರೆಗೂ ಕಂದಾಯ ಅಸೆಸ್ ಮೆಂಟ್ ರಿಜಿಸ್ಟರ್ ನಲ್ಲಿ ಗಾಂಧಿ ಮೈದಾನ ವೆಂದೇ ನಮೂದಿಸಿದೆ. ಶೃಂಗೇರಿಗೆ ಬರುವ ಪ್ರವಾಸಿಗರು ಗಾಂಧಿ ಮೈದಾನ ದಲ್ಲಿ ಪ್ರವಾಸಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದರಿಂದ ಟ್ರಾಫಿಕ್ ಸಮಸ್ಯೆ ಉದ್ಭವಿಸಿತ್ತು. ಕಳೆದ 6 ದಶಕಗಳಿಂದ ಗಾಂಧಿ ಮೈದಾನ ದಲ್ಲಿ ಪ್ರವಾಸಿ ವಾಹನ ನಿಲುಗಡೆ ಶುಲ್ಕಸಂಗ್ರಹಕ್ಕೆ ಹರಾಜು ಪ್ರಕಿಯೆ ಸಹ ನಡೆಯುತ್ತಿತ್ತು.
ಇದೀಗ ಮತ್ತೆ ಪಂಪಂ ಸುಪರ್ದಿಗೆ ಗಾಂಧಿ ಮೈದಾನ ಬಂದಿದ್ದು ಇದನ್ನು ಹೇಗೆ ನಿರ್ವಹಿಸಲಿದೆ ಎಂದು ಕಾದು ನೋಡಬೇಕಿದೆ.-- ಬಾಕ್ಸ್--
ಪಟ್ಟಣ ಪಂಚಯ್ತಿಗೆ ಸಂಪೂರ್ಣ ಅಭಿವೃದ್ಧಿ ರಕ್ಷಣೆ ಜವಾಬ್ದಾರಿನದಿ ತೀರದಲ್ಲಿದ್ದ ಗಾಂಧಿ ಮೈದಾನ ಕಂದಾಯ ಇಲಾಖೆ ದಾಖಲೆ ಪ್ರಕಾರ ನದಿ ಕರಾಬು ಪ್ರದೇಶ. ಇಂತಹ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿ ವಾಣಿಜ್ಯ ವ್ಯಾಪಾರ ನಡೆಸುತ್ತಿರುವುದರಿಂದ ತುಂಗಾ ನದಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇದ ನ್ಯಾಯಾಲಯದಲ್ಲಿ ಜನವರಿ 23, 2024 ರಂದು ಸುಮೋಟೊ ( ಸ್ವಯಂಪ್ರೇರಿತ)ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿ ಗಾಂಧಿ ಮೈದಾನ ಪ್ರದೇಶ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಇದರ ಸಂಪೂರ್ಣ ಅಭಿವೃದ್ಧಿ ಹಾಗೂ ರಕ್ಷಣೆ ಜವಾಬ್ದಾರಿ ಪಪಂ ನಿರ್ವಹಿಸಬೇಕು ಎಂದು ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.
20 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿರುವ ಗಾಂಧಿ ಮೈದಾನ ಪ್ರದೇಶ