ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ನಮ್ಮೆಲ್ಲರಿಗೂ ಆದರ್ಶಪ್ರಾಯರು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.ಇಲ್ಲಿನ ಶ್ರೀರಾಮನಗರದ ಗಾಂಧಿ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಚರಕವನ್ನು ನೇಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಾಂಧೀಜಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ ಸಂದರ್ಭದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ಭಾರತಕ್ಕೆ ಹಿಂದಿರುಗಿದಾಗ ರೈತರಿಗಾಗುತ್ತಿದ್ದ ಶೋಷಣೆ ವಿರುದ್ಧವಾಗಿ ನಡೆಯುತ್ತಿದ್ದ ಚಂಪಾರಣ್ಯ ಚಳವಳಿಯಲ್ಲಿ ಪಾಲ್ಗೊಂಡು ರೈತರ ಶೋಷಣೆ ವಿರುದ್ಧ ಹೋರಾಟ ಆರಂಭಿಸಿದರು. ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಆದಾಯ ಸಿಗುತ್ತಿರಲಿಲ್ಲ, ಆಗ ರೈತರ ಪರ ನಿಂತು ಹೋರಾಟ ನಡೆಸುತ್ತಾರೆ. ನಂತರ ಬಡವರಿಗೆ ಮತ್ತು ರೈತರಿಗೆ ಬ್ರಿಟೀಷರು ವಿಧಿಸುತ್ತಿದ್ದ ತೆರಿಗೆ ಶೋಷಣೆಯನ್ನು ವಿರೋದಿಸಿ ತೆರಿಗೆ ಸಮರವನ್ನು ಸಾರುತ್ತಾರೆ. ನಮ್ಮ ಭಾರತವನ್ನು ನಾವೇ ಆಳಬೇಕು ಎಂದು ಸ್ವರಾಜ್ ನಮ್ಮ ಜನ್ಮ ಸಿದ್ದ ಹಕ್ಕು ಎಂದು ಹೋರಾಟವನ್ನು ಪ್ರಾರಂಭಿಸುತ್ತಾರೆ ಎಂದು ಹೇಳಿದರು.ಗಾಂಧೀಜಿ ತಮ್ಮ ಜೀವನದುದ್ದಕ್ಕೂ ನಡೆ ನುಡಿ, ಆಚಾರ ವಿಚಾರ ಸಮಾನತೆಯನ್ನು ಅಳವಡಿಸಿಕೊಂಡಿದ್ದರು. ಅವರ ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಸರ್ವೋದಯ ಮತ್ತು ಗ್ರಾಮ ಸ್ವರಾಜ್ ಅಭಿವೃದ್ಧಿಯನ್ನು ನಾವು ಅಳವಡಿಸಿಕೊಳ್ಳುತ್ತಿದ್ದೇವೆ, ರೈತರು ನಮ್ಮ ದೇಶದ ಬೆನ್ನಲುಬು, ನಮ್ಮ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಭಾರತ ಅಭಿವೃದ್ಧಿ ಹೊಂದುತ್ತದೆ ಎಂದರು.
ಸ್ವಾತಂತ್ರ‍್ಯ ನಂತರದಲ್ಲಿ ದೇಶ ಆಹಾರದ ಕೊರತೆ ಎದುರಿಸುತ್ತಿತ್ತು, ಇದಕ್ಕಾಗಿ ವಿದೇಶಗಳಿಂದ ಆಹಾರಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವು. ಇದನ್ನು ಮನಗಂಡ ಶಾಸ್ತ್ರೀಜಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ನಡೆಸಿದರು. ರಕ್ಷಣಾ ಮತ್ತು ಗೃಹ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಶಾಸ್ತ್ರಿಗಳು ‘ಜೈ ಜವಾನ್ ಜೈ ಕಿಸಾನ್’ ಎಂಬ ಕರೆ ನೀಡಿ ಕೃಷಿ ಉತ್ಪಾದಕತೆ ಹೆಚ್ಚಿಸಲು ಕ್ರಮ ಕೈಗೊಂಡರು ಎಂದು ತಿಳಿಸಿದರು.ವಿದ್ಯಾರ್ಥಿನಿ ಐಶ್ವರ್ಯ ಮತ್ತು ವಿಶಾಲ್ ಗಾಂಧಿ ಮತ್ತು ಶಾಸ್ತ್ರೀಜಿ ಕುರಿತು ಮಾತನಾಡಿದರು.
ಅಜಯ್ ನಾರಾಯಣ್ ಮತ್ತು ಸಿದ್ದಗಂಗಾ ಶಾಲೆಯ ಮಕ್ಕಳು ಭಜನಾ ಗೀತೆಗಳಾದ ವೈಷ್ಣವ ಜನತೋ ಮತ್ತು ರಘುಪತಿ ರಾಘವ ರಾಜರಾಂ ಹಾಡಿದರು. ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಸಂದೇಶಗಳನ್ನು ವಿದ್ಯಾರ್ಥಿಗಳು ನುಡಿದರು. ಮಹಾತ್ಮ ಗಾಂಧೀಜಿಯವರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ದೂಡಾ ಅದ್ಯಕ್ಷ ದಿನೇಶ್ ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ತಹಸೀಲ್ದಾರ್ ಡಾ.ಎಂ.ಬಿ.ಅಶ್ವಥ್, ಮುಖಂಡರುಗಳಾದ ರವಿಕುಮಾರ, ಅವರೆಗೆರೆ ರುದ್ರಮುನಿ ಎ.ನಾಗರಾಜ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇತರರು ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ನಿರೂಪಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ವಂದಿಸಿದರು.