ಗಾಂಧಿ ವಿಚಾರಧಾರೆಗಳು ಸರ್ಕಾರ ಮತ್ತು ಆಡಳಿತದ ಮೂಲ ತತ್ವಗಳು: ಲಾಡ್

| Published : Apr 22 2025, 01:50 AM IST

ಗಾಂಧಿ ವಿಚಾರಧಾರೆಗಳು ಸರ್ಕಾರ ಮತ್ತು ಆಡಳಿತದ ಮೂಲ ತತ್ವಗಳು: ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀಜಿ ಅವರನ್ನು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಯುವ ಸಮೂಹಕ್ಕೆ ಪರಿಣಾಮಕಾರಿಗೆ ಪರಿಚಯಿಸಲು, ಅವರ ಜೀವನ ಸಂದೇಶಗಳನ್ನು ತಲುಪಿಸುವ ಉದ್ದೇಶದಿಂದ ರಾಜ್ಯ ಪ್ರತಿ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸುತ್ತಿದೆ. ಈ ಭವನದಲ್ಲಿ ಗಾಂಧಿ ತತ್ವಗಳ ಪ್ರಚಾರ ಕೇಂದ್ರವಾಗಿ ರೂಪಿಸಲು ಕ್ರಮವಹಿಸಲಾಗುವುದು.

ಧಾರವಾಡ: ಮಹಾತ್ಮ ಗಾಂಧೀಜಿ ಬದುಕಿದ ರೀತಿ, ಹೋರಾಟದ ಗತಿ ಮತ್ತು ಅವರು ಬೋಧಿಸಿ, ಪಾಲಿಸಿದ ತತ್ವ, ಜೀವನ ಸಂದೇಶಗಳು ಇಂದಿನ ಸರ್ಕಾರಗಳ ಮತ್ತು ಆಡಳಿತದ ಮೂಲ ತತ್ವಗಳಾಗಿವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿಯ ಕುಮಾರೇಶ್ವರ ನಗರದ ವ್ಯಾಪ್ತಿಯ ಹೊಸ ಕೇಂದ್ರ ಬಸ್ ನಿಲ್ದಾಣ ಬಳಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನೂತನವಾಗಿ ನಿರ್ಮಿಸಿರುವ ಗಾಂಧಿ ಭವನವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗಾಂಧೀಜಿ ಅವರನ್ನು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಯುವ ಸಮೂಹಕ್ಕೆ ಪರಿಣಾಮಕಾರಿಯಾಗಿ ಪರಿಚಯಿಸಲು, ಅವರ ಜೀವನ ಸಂದೇಶಗಳನ್ನು ತಲುಪಿಸುವ ಉದ್ದೇಶದಿಂದ ರಾಜ್ಯ ಪ್ರತಿ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಿಸುತ್ತಿದೆ. ಈ ಭವನದಲ್ಲಿ ಗಾಂಧಿ ತತ್ವಗಳ ಪ್ರಚಾರ ಕೇಂದ್ರವಾಗಿ ರೂಪಿಸಲು ಕ್ರಮವಹಿಸಲಾಗುವುದು. ಇದೊಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸದ ಸ್ಥಳವಾಗಿ, ವಿಚಾರ ಸಂಕಿರಣ, ಗಾಂಧಿ ಕಾರ್ಯಕ್ರಮಗಳಿಗೆ ನೀಡುವ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಕ್ರಮವಹಿಸಲಿದೆ. ಭವನದ ನಿರ್ವಹಣೆ ಹೊಣೆಯನ್ನು ಮಹಾನಗರಪಾಲಿಕೆ ಅಥವಾ ಇತರ ಏಜನ್ಸಿಗಳಿಗೆ ವಹಿಸುವ ಕುರಿತು ಸಮಿತಿ ಚರ್ಚಿಸಲಿದೆ ಎಂದರು.

ಗಾಂಧಿ ಭವನದಲ್ಲಿನ ಗೋಡೆ ಚಿತ್ರಗಳು, ಚಿತ್ರಪಟಗಳು, ಗಾಂಧೀಜಿ ಅವರ ದಂಡಿಯಾತ್ರೆ ಪ್ರತಿಮೆಗಳು ಸೇರಿದಂತೆ ವಿವಿಧ ಆಕೃತಿಗಳು ಸುಂದರವಾಗಿ ರೂಪಿತವಾಗಿವೆ. ಗಾಂಧಿಭವನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೆ ಇಲ್ಲಿನ ಮಾಹಿತಿಗಳು ಗಾಂಧಿಯವರನ್ನು ಆತ್ಮೀಯವಾಗಿ ಪರಿಚಯಿಸುತ್ತವೆ ಎಂದು ಸಚಿವರು ಹೇಳಿದರು.

ಶಾಸಕ ಎನ್.ಎಚ್. ಕೋನರಡ್ಡಿ ಗಾಂಧಿಭವನದ ನಿರ್ಮಾಣದ ಬಗ್ಗೆ, ಛಾಯಾಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಗಾಂಧಿ ಭವನದ ನಿರ್ಮಾಣದ ಹಿನ್ನಲೆ ಹಾಗೂ ಗಾಂಧಿ ಭವನದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿ, ಗಾಂಧಿ ಭವನದ ವಿವಿಧ ಹಾಲ್, ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಪಂ ಸಿಇಓ ಭುವನೇಶ ಪಾಟೀಲ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಎಸ್.ಆರ್. ಪಾಟೀಲ, ಸುಜಾತಾ ಕಾಳೆ, ಡಾ. ಶಶಿಧರ ಚನ್ನಪ್ಪಗೌಡರ, ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ಗಾಂಧಿ ಅನುಯಾಯಿಗಳಾದ ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಶ್ರೀಶೈಲ ಕಮತರ ಸೇರಿದಂತೆ ಸಾರ್ವಜನಿಕರು, ಗಾಂಧಿ ಅಭಿಮಾನಿಗಳಿದ್ದರು.

ವಾರ್ತಾ ಇಲಾಖೆಯ ಬೆಳಗಾವಿ ಉಪನಿರ್ದೇಶಕ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾರ್ತಾ ಇಲಾಖೆಯ ಸಹಾಯಕ ಅಧಿಕಾರಿ ಡಾ. ಸುರೇಶ ಹಿರೇಮಠ ಸ್ವಾಗತಿಸಿದರು.

ತಡವಾಗಿಯಾದರೂ ಈಗ ಲೋಕಾರ್ಪಣೆ: 2016-17ರ ಅವಧಿಯಲ್ಲಿ ಘೋಷಣೆಯಾದ ಗಾಂಧಿ ಭವನ ತಡವಾದರೂ ಈಗ ಲೋಕಾರ್ಪಣೆಯಾಗಿದೆ. ಅಚ್ಚುಕಟ್ಟು, ವಿಸ್ತಾರವಾದ ಭವನ ಜಿಲ್ಲೆಗೆ ಸಿಕ್ಕಿದೆ. ಆದರೆ, ಈ ಭವನದ ನಿರ್ವಹಣೆ, ಕಾರ್ಯ ಕಲಾಪಗಳು ಹೇಗೆ ನಡೆಯುತ್ತವೆ? ಅದರ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಇದೆ. ಜಿಲ್ಲಾಧಿಕಾರಿಗಳು ಸ್ಥಳೀಯ ಆಸಕ್ತರನ್ನು ಸೇರಿ ಸಮಿತಿ ಮಾಡಬೇಕು. ಈ ಸಮಿತಿಗೆ ಕಾರ್ಯಕ್ರಮ ಜವಾಬ್ದಾರಿ ಹಾಗೂ ಸಿಬ್ಬಂದಿ ನೀಡಬೇಕು. ತುಸು ಮಟ್ಟಿಗೆ ಆರ್ಥಿಕ ಸಹಾಯ ಸಹ ಭವನಕ್ಕೆ ನೀಡಬೇಕು. ಹೀಗಾದರೆ ಮಾತ್ರ ಶಾಲಾ- ಕಾಲೇಜು ಮಕ್ಕಳು, ನಾಗರಿಕ ಗಂಪುಗಳನ್ನು ಇಲ್ಲಿ ತಂದು ಗಾಂಧೀಜಿ ವಿಚಾರಗಳ ಬಗ್ಗೆ ಮುಖ್ಯವಾಗಿ ಅಹಿಂಸೆಯ ಬಗ್ಗೆ ಸರಿಯಾದ ತಿಳುವಳಿಕೆ ನೀಡಲು ಗಾಂಧಿ ಭವನ ಉಪಯೋಗವಾಗಬೇಕು ಎಂದು ಇದೇ ಸಂದರ್ಭದಲ್ಲಿ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಹಾಗೂ ಗಾಂಧಿವಾದಿ ಬಸವಪ್ರಭು ಹೊಸಕೇರಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.