ಕನ್ನಡಪ್ರಭ ವಾರ್ತೆ ಬೆಳಗಾವಿ
ತಂತ್ರಜ್ಞಾನ ಯುಗದಲ್ಲಿ ಯುವಕರಲ್ಲಿ ಮೌಲ್ಯಗಳು ಕಡಿಮೆಯಾಗಿ ಅವರ ಬದುಕಿನ ಮಾರ್ಗ ಅಸ್ಥಿರವಾಗಿದೆ. ಯುವಶಕ್ತಿಗೆ ಗಾಂಧಿ ಚಿಂತನೆಗಳೇ ದಾರಿ ತೋರಲಿವೆ ಎಂದು ಗಾಂಧಿವಾದಿ ಶಿವಾಜಿ ಕಾಗಣೇಕರ ಅಭಿಪ್ರಾಯಪಟ್ಟರು.ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಜ್ಯ ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಮತ್ತು ಗಾಂಧಿ ಅಧ್ಯಯನ ಕೇಂದ್ರ ಸಹಯೋಗದಲ್ಲಿ ಯುವಜನತೆಗೆ ಗಾಂಧೀಜಿಯವರ ಮೌಲ್ಯಗಳು ಎಂಬ ವಿಷಯದ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಗಾಂಧೀಜಿ ಅವರ ಸತ್ಯ-ಅಹಿಂಸೆ ಕೇವಲ ಪಾಠವಲ್ಲ, ಅದೊಂದು ಜೀವನದ ಶಿಸ್ತು, ಬದುಕಿನ ಉಪಕ್ರಮ. ಯುವಕರಲ್ಲಿ ತಾಂತ್ರಿಕ ಜ್ಞಾನವಿದ್ದರೇ ಸಾಲದು, ಅದರೊಂದಿಗೆ ಮಾನವೀಯ ಮೌಲ್ಯಗಳೂ ಇರಬೇಕು. ಮೌಲ್ಯಗಳು ಸಮಾಜ ಗಟ್ಟಿಗೊಳಿಸುತ್ತದೆ. ಗಾಂಧಿ ಬದುಕಿನ ರೀತಿ, ಅವರ ತತ್ವಾದರ್ಶಗಳನ್ನು ಯುವಕರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜ, ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದರು.ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿಯ ಸಂಯೋಜಕಿ ಅಬಿದಾ ಬೇಗಂ ಅವರು ಕರ್ನಾಟಕಕ್ಕೆ ಮತ್ತು ಗಾಂಧೀಜಿಯವರಿಗೆ ಇರುವ ಬಾಂಧವ್ಯ, ಗಾಂಧೀಜಿ ಅವರು ಕನ್ನಡ ನೆಲದಲ್ಲಿ ಭಾಗಿಯಾದ ವಿವಿಧ ಸಂದರ್ಭಗಳನ್ನು, ಅವರ ಕಾರ್ಯವೈಖರಿ, ಗಾಂಧೀಜಿ ಅವರ ಜೀವನ ಶೈಲಿ ಮತ್ತು ಗಾಂಧೀಜಿ ಅವರ ದೈನಂದಿನ ಚಟುವಟಿಕೆ ಕುರಿತು ಪ್ರಾತ್ಯಕ್ಷಿಕೆಯಾಗಿ ವಿವರಿಸಿದರು.ರಾಚವಿ ಎನ್.ಎಸ್.ಎಸ್ ಕೋಶದ ಸಂಯೋಜಕ ಡಾ.ಕನಕಪ್ಪ ಪೂಜಾರ ಮಾತನಾಡಿ, ಸ್ವಯಂ ಸೇವಕರಲ್ಲಿ ಗಾಂಧೀಜಿ ಅವರ ಹಾಗೆ ಸೇವಾ ಮನೋಭಾವ ಇರಬೇಕು. ಎನ್.ಎಸ್.ಎಸ್ ಗಾಂಧೀಜಿ ಅವರ ತತ್ವಾದರ್ಶಗಳನ್ನು ಪಾಲಿಸುತ್ತದೆ. ಹಳ್ಳಿಗಳ ಉದ್ದಾರವೇ ದೇಶದ ಉದ್ಧಾರ ಎಂಬುವುದು ಗಾಂಧೀಜಿ ಆಶಯವಾಗಿತ್ತು.ಯುವಕರು ಗಾಂಧೀಜಿ ಅವರ ಕನಸನ್ನು ನನಸು ಮಾಡಬೇಕು. ಯುವಕರು ಶಿಸ್ತು, ಪ್ರಾಮಾಣಿಕತೆ ಮತ್ತು ಶ್ರದ್ಧೆ, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಸಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವೇಗದ ಬದುಕಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದ ನಡುವೆ ಯುವಕರು ದಾರಿ ತಪ್ಪದಂತೆ ತಡೆಯಲು ಗಾಂಧೀಜಿಯವರ ಸಂಯಮ ಮತ್ತು ಸಹಿಷ್ಣುತೆಯ ಗುಣಗಳು ಅತ್ಯಗತ್ಯ. ಗಾಂಧೀಜಿಯವರು ಅನುಸರಿಸಿದ ಆದರ್ಶ ಜೀವನ ಇವತ್ತಿನ ಯುವಕರಿಗೆ ಮಾದರಿ. ಅವರು ಅನುಸರಿಸಿದ ಅಹಿಂಸಾ ಮತ್ತು ಶಾಂತಿಯ ಗುಣಗಳನ್ನು ಯುವಕರು ಅನುಸರಿಸಬೇಕು. ಯುವಕರಲ್ಲಿ ದೇಶ ಕಟ್ಟುವ ತುಡಿತವಿದ್ದಾಗ ಮಾತ್ರ ಭವ್ಯ ಭಾರತ ನಿರ್ಮಾಣವಾಗುತ್ತದೆ ಎಂದರು. ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಡಾ.ಸಂಜೀವ ತಳವಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಜಾಗತಿಕ ಶಾಂತಿ ಕಾಪಾಡಲು ಗಾಂಧೀಜಿ ಅವರ ಮೌಲ್ಯಗಳು ಅತ್ಯವಶ್ಯಕ ಎಂದರು. ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಲಿಯಾಕತ್ ಅತ್ತರ ಸ್ವಾಗತಿಸಿದರು. ಉಪಪ್ರಾಚಾರ್ಯ ಡಾ. ಅರ್ಜುನ ಜಂಬಗಿ, ಐಕ್ಯೂಎಸಿ ಸಂಯೋಜಕ ಡಾ. ಮುಕುಂದ ಮುಂಡರಗಿ, ಎನ್.ಎಸ್.ಎಸ್ ಕಾರ್ಯದಶಿ೯ ತುಕಾರಾಮ ಗೌಡರ ಮತ್ತು ಲಕ್ಷ್ಮೀ ಹೊನಗೌಡರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗಾಂಧೀಜಿ ಅವರ ಜೀವನದ ಕುರಿತು ಅಂತರ ಮಹಾವಿದ್ಯಾಲಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ವರ್ಧೆಗೆ ಒಟ್ಟು 16 ತಂಡಗಳು ವಿವಿಧ ಮಹಾವಿದ್ಯಾಲಯದಿಂದ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಬೆಳಗಾವಿ ನಗರದ ಸಿಟಿಇ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯವು ಪ್ರಥಮ, ಧಾರವಾಡದ ಸತ್ಯ ಸಾಯಿ ಮಹಾವಿದ್ಯಾಲಯ ದ್ವಿತೀಯ ಮತ್ತು ಮುನವಳ್ಳಿಯ ಅಜ್ಜಪ್ಪ ಗಡಬಿ ಮಹಾವಿದ್ಯಾಲಯವು ತೃತೀಯ ಸ್ಥಾನಗಳನ್ನು ಪಡೆದವು. ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಯಂ ಸೇವಕರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.ಎನ್.ಎಸ್.ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಭಾಗ್ಯಶ್ರೀ ಹಿರೇಮನಿ ಪರಿಚಯಿಸಿದರು. ವಿದ್ಯಾರ್ಥಿಗಳಾದ ಹರ್ಷಿತಾ ಮರಳಿ ನಿರೂಪಿಸಿದರು. ವಿಶ್ವನಾಥ ಕಮತಿ ಸ್ವಾಗತಿಸಿದರು. ಜ್ಯೋತಿ ಚಾಪಗಾಂವ ವಂದಿಸಿದರು. ವಿಚಾರ ಸಂಕಿರಣದಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.