ಜಗತ್ತಿಗೆ ಸತ್ಯ, ಅಹಿಂಸೆ, ಸಮಾನತೆ ಸಾರಿದ ವಿಶ್ವ ಮಾನವ ಗಾಂಧೀಜಿ

| Published : Oct 03 2025, 01:07 AM IST

ಜಗತ್ತಿಗೆ ಸತ್ಯ, ಅಹಿಂಸೆ, ಸಮಾನತೆ ಸಾರಿದ ವಿಶ್ವ ಮಾನವ ಗಾಂಧೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ಧಾಂತಗಳಂತೆ ಬದುಕಿ ಮಹಾತ್ಮ ಆದವರು ಗಾಂಧೀಜಿ.

ಹೊಸಪೇಟೆ: ಜಗತ್ತಿಗೆ ಸತ್ಯ, ಅಹಿಂಸೆ ಮತ್ತು ಸಮಾನತೆಯನ್ನು ಸಾರಿದ ಮಹಾಧೂತ ಹೆಮ್ಮೆಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ವಿಶ್ವಮಾನವರೆನಿಸಿಕೊಂಡಿದ್ದಾರೆ ಎಂದು ಸ್ಥಳೀಯ ಸಹಾಯಕ ಆಯುಕ್ತ ಪಿ.ವಿವೇಕಾನಂದ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆಯಿಂದ ಗುರುವಾರ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಟ ನಡೆಸಿ ದೇಶವನ್ನು ದಾಸ್ಯಮುಕ್ತಗೊಳಿಸಿದ ಮಹಾನ್ ಹೋರಾಟಗಾರರಲ್ಲಿ ಮಹಾತ್ಮ ಗಾಂಧೀಜಿ ಅಗ್ರಗಣ್ಯರು. ಕೆಲ ಸಿದ್ಧಾಂತಗಳನ್ನು ಬೋಧಿಸಬಹುದು, ಆದರೆ ಪಾಲಿಸುವುದು ಕಷ್ಟ. ಆದರೆ ಸಿದ್ಧಾಂತಗಳಂತೆ ಬದುಕಿ ಮಹಾತ್ಮ ಆದವರು ಗಾಂಧೀಜಿ. ಅಹಿಂಸೆಯನ್ನು ಇಡೀ ವಿಶ್ವಕ್ಕೆ ಸಾರಿದ ಮಹನೀಯರು. ಇವರ ಹೋರಾಟಗಳಿಂದ ವಿವಿಧ ದೇಶಗಳಲ್ಲಿ ಪ್ರಭಾವಿತರಾದವರು ಅನೇಕರಿದ್ದಾರೆ. ಬ್ರಿಟಿಷರು ಭಾರತದ ಸಂಪನ್ಮೂಲವನ್ನು ದೋಚುವ ಮೂಲಕ ಭಾರತಕ್ಕೆ ಬಡತನ ಬಳುವಳಿಯಾಗಿ ನೀಡಿದ್ದರು. ಸ್ವಾತಂತ್ರ್ಯಕ್ಕಾಗಿ ಅನೇಕರು ಹೋರಾಟ ನಡೆಸಿದ್ದಾರೆ. ಆದರೆ ಗಾಂಧೀಜಿ ಅವರು ಸತ್ಯ ಮತ್ತು ಅಹಿಂಸೆಗಳನ್ನು ಶಸ್ತ್ರವನ್ನಾಗಿ ಬ್ರಿಟಿಷರನ್ನು ಮನವೊಲಿಸುವ ಮೂಲಕ ದೇಶಕ್ಕೆ ಸ್ವತಂತ್ರ ತರಲು ಕಟಿಬದ್ಧರಾಗಿದ್ದರು ಎಂದರು.

ಮಹಾತ್ಮ ಗಾಂಧೀಜಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ಗಾಂಧೀ ಸರ್ವರಿಗೂ ಸಮಬಾಳು, ಸಮಪಾಲು ಎಂಬ ನೀತಿಯ ಮೂಲಕ ಸಮಾನತೆ ಸಾರಿದ್ದರು. ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿಯವರ ತ್ಯಾಗ, ಬಲಿದಾನ ಮತ್ತು ಸ್ವಾಭಿಮಾನ ಆದರ್ಶಪ್ರಾಯವಾಗಿದೆ. ಇವರಿಬ್ಬರು ಮಹನೀಯರ ತತ್ವಾದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕಿದೆ ಎಂದರು.

ಪಿಐ ವಿ.ನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಗಾಂಧೀಜಿ ಅವರ ಚಿಂತನೆಗಳನ್ನು ಅರಿಯಲು ವಾರ್ತಾ ಇಲಾಖೆಯಿಂದ ಏರ್ಪಡಿಸುವ ‘ಬಾಪು ಪ್ರಬಂಧ ಸ್ಪರ್ಧೆ’ ಪೂರಕವಾಗಿದೆ. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು ಬರವಣಿಗೆಯನ್ನು ನಿಲ್ಲಿಸುವುದು ಬೇಡ. ಗಾಂಧೀಯವರು ಸ್ವತಃ ತಮ್ಮ ಆತ್ಮಚರಿತ್ರೆ ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳನ್ನು ಓದಿ ನಿಮ್ಮದೇ ಕಲ್ಪನೆಯಲ್ಲಿ ಲೇಖನಗಳನ್ನು ಬರೆಯಲು ಪ್ರಯತ್ನಿಸಿ, ಬರವಣಿಗೆ ಕೌಶಲ್ಯವನ್ನು ವೃದ್ಧಿಸಿಕೊಂಡು ಬರವಣಿಗೆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಮಟ್ಟದ ಬಾಪು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿಭಾಗ, ಪದವಿಪೂರ್ವ ಕಾಲೇಜು ವಿಭಾಗ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ₹3 ಸಾವಿರ, ದ್ವಿತೀಯ ₹2 ಸಾವಿರ, ತೃತೀಯ ಸ್ಥಾನಕ್ಕೆ ಒಂದು ಸಾವಿರ ರು. ನಗದು ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಲೆಕ್ಕ ಪರಿಶೋಧಕ ಶ್ರೀನಿವಾಸ್, ವಾರ್ತಾ ಇಲಾಖೆ ಸಿಬ್ಬಂದಿ ರಾಮಾಂಜನೇಯ, ಅಶೋಕ್ ಉಪ್ಪಾರ, ತಾಯೇಶ್, ತಿಪ್ಪೇಶ್, ದೇವರಾಜ, ಪಿ.ಕೃಷ್ಣಸ್ವಾಮಿ ಸೇರಿದಂತೆ ಮರಿಯಮ್ಮನಹಳ್ಳಿಯ ರಂಗಚೌಕಿ ಕಲಾ ಟ್ರಸ್ಟ್‌ ನ ಸರ್ದಾರ್ ಮತ್ತು ತಂಡದ ಕಲಾವಿದರು, ಬಾಪು ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.