ಗಾಂಧೀಜಿ, ಶಾಸ್ತ್ರೀಜಿ ಆಚಾರ-ವಿಚಾರ ಇಂದಿಗೂ ಪ್ರಸ್ತುತ-ಜಿಲ್ಲಾಧಿಕಾರಿ ದಾನಮ್ಮನವರ

| Published : Oct 03 2025, 01:07 AM IST

ಗಾಂಧೀಜಿ, ಶಾಸ್ತ್ರೀಜಿ ಆಚಾರ-ವಿಚಾರ ಇಂದಿಗೂ ಪ್ರಸ್ತುತ-ಜಿಲ್ಲಾಧಿಕಾರಿ ದಾನಮ್ಮನವರ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಜಿ ಅವರು ಈ ದೇಶ ಕಂಡ ಇಬ್ಬರು ಧೀಮಂತ ನಾಯಕರು. ಅವರ ಆಚಾರ-ವಿಚಾರ, ಜೀವನ ಚರಿತ್ರೆ ಇಂದಿಗೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಹಾವೇರಿ: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಜಿ ಅವರು ಈ ದೇಶ ಕಂಡ ಇಬ್ಬರು ಧೀಮಂತ ನಾಯಕರು. ಅವರ ಆಚಾರ-ವಿಚಾರ, ಜೀವನ ಚರಿತ್ರೆ ಇಂದಿಗೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ನಗರದ ಗಾಂಧಿ ಭವನದಲ್ಲಿ ಗುರುವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮಾಗಾಂಧಿ ಹಾಗೂ ಲಾಲ್‌ಬಹದ್ದೂರ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.ಗಾಂಧೀಜಿ ಅವರು ಅಹಿಂಸಾ ಹಾಗೂ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು. ಗಾಂಧೀಜಿ ನನ್ನ ಜೀವನವೇ ನನ್ನ ಸಂದೇಶ ಎಂದು ಹೇಳುತ್ತಿದ್ದರು. ಮನುಷ್ಯ ನಿರ್ಮಾಣ ಮಾಡಿದ ಯಾವುದೇ ಆಯುಧಕ್ಕಿಂತ ಹರಿತವಾದ ಆಯುಧ ಅಹಿಂಸಾ ಮಾರ್ಗ. ದಲೈಲಾಮಾ, ನೆಲ್ಸನ್ ಮಂಡೇಲಾ ಸೇರಿದಂತೆ ಅನೇಕರು ಗಾಂಧೀಜಿಯವರ ಮಾರ್ಗ ಅನುಸರಿಸಿದ್ದಾರೆ. ಗಾಂಧೀಜಿಯಂತಹ ಒಬ್ಬ ವ್ಯಕ್ತಿ ಭೂಮಿ ಮೇಲೆ ಓಡಾಡುತ್ತಿದ್ದರು ಎಂದು ಮುಂದಿನ ಪೀಳಿಗೆ ನಂಬಲ್ಲ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಹೇಳಿದ್ದರು. ಅಂತಹ ಅಪರೂಪ ವ್ಯಕ್ತಿತ್ವ ಗಾಂಧೀಜಿ ಅವರದು ಎಂದು ಬಣ್ಣಿಸಿದರು.ಗಾಂಧೀಜಿ ಸ್ವಚ್ಛತೆಗೆ ಹಾಗೂ ಸ್ವದೇಶಿ ಬಟ್ಟೆಗೆ ಬಹಳ ಆದ್ಯತೆ ನೀಡಿದ್ದರು, ಹಾಗಾಗಿ ದೇಶಕ್ಕೆ ಸ್ವಾತಂತ್ರ್ಯದ ಜತೆಗೆ ಸ್ವಚ್ಛತೆ ಬಹಳ ಮುಖ್ಯವಾಗಿದೆ. ರಾಮರಾಜ್ಯದ ಕನಸು ಕಂಡಿದ್ದ ಗಾಂಧೀಜಿ, ಹಳ್ಳಿಗಳ ದೇಶ ಭಾರತ, ದೇಶದ ಅಭಿವೃದ್ಧಿಗೆ ಹಳ್ಳಿಗಳ ಅಭಿವೃದ್ಧಿ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇಂದು ಆಡಳಿತ ಗ್ರಾಮ ಮಟ್ಟದಲ್ಲಿ ತೆಗೆದುಕೊಂಡು ಹೋಗಲಾಗಿದೆ. ದೇಶದ ಪ್ರಧಾನಮಂತ್ರಿಗಳು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಹಾಗೂ ವೊಕಲ್ ಫಾರ್ ಲೋಕಲ್ ಘೋಷವಾಕ್ಯದೊಂದಿಗೆ ಸ್ಥಳೀಯ ವಸ್ತುಗಳ ಖರೀದಿಗೆ ಉತ್ತೇಜನ ನೀಡುತ್ತಿದ್ದಾರೆ. ಸ್ವಾವಲಂಬಿ ಬದುಕು ಬಹಳ ಮುಖ್ಯವಾಗಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಬೇಕು. ಈ ನಿಟ್ಟಿನಲ್ಲಿ ಗಾಂಧೀಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಜೀವನ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.ಲಾಲ್‌ಬಹದ್ದೂರ ಶಾಸ್ತ್ರಿ ಅವರು ದೇಶ ಕಂಡ ಸರಳ ಪ್ರಧಾನ ಮಂತ್ರಿಗಳಾಗಿದ್ದರು. ಜೈ ಜವಾನ್ ಜೈಕಿಸಾನ್ ಎಂಬ ಘೋಷವಾಕ್ಯದೊಂದಿಗೆ ರೈತರನ್ನು ಹಾಗೂ ಯೋಧರನ್ನು ಹುರಿದುಂಬಿಸಿದವರು. ಶಾಸ್ತ್ರೀಜಿ ಅವರು ಸರಳ ಸಜ್ಜನಿಕೆ ಅಪರೂಪದ ವ್ಯಕ್ತಿಗಳಾಗಿದ್ದರು. ಇಬ್ಬರು ಮಹಾನ್ ನಾಯಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ರಾಷ್ಟ್ರಭಕ್ತಿ ಹೊಂದಬೇಕು ಎಂದು ಹೇಳಿದರು. ಬಹುಮಾನ ವಿತರಣೆ..ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಾದ ಪ್ರೌಢಶಾಲಾ ವಿಭಾಗದಿಂದ ವಿನಯ ಗಾಜಿಪುರ, ದರ್ಶನ ಭಜಂತ್ರಿ, ದೀಕ್ಷಾ ಹಾದಿಮನಿ, ಪದವಿ ಪೂರ್ವ ವಿಭಾಗದಿಂದ ರೂಪಾ ಎಚ್.ಹೊನ್ನತ್ತಿ, ಕವನಾ ಕೋಣನತಂಬಿಗಿ, ಮಧುಮತಿ ಎಂ.ಸಿ., ಪದವಿ ವಿಭಾಗದಿಂದ ಪೂರ್ಣಿಮಾ ಕರ್ಜಗಿ, ನಿವೇದಿತಾ ಬಡಿಗೇರ ಹಾಗೂ ಸೌಜನ್ಯ ಹಲಗೇರಿ ಇವರುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ ಮಾಡಲಾಯಿತು.ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ ಕಾರ್ಯಕ್ರಮ ಉದ್ಘಾಟಿಸಿ, ಉಭಯ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕುಣಿಮೆಳ್ಳಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ಅರವಿಂದ ಐರಣಿ ಉಪನ್ಯಾಸ ನೀಡಿದರು.ಸರ್ವಧರ್ಮ ಪ್ರಾರ್ಥನೆ: ಕಾರ್ಯಕ್ರಮದಲ್ಲಿ ವಾಸುದೇವ ಹತ್ತಿಮತ್ತೂರ ಭಗವದ್ಗೀತೆ, ಶಿಕ್ಷಕ ಎ.ಪಿ.ಮೊಹ್ಸಿನ್ ಕುರಾನ್ ಹಾಗೂ ಸಿಸ್ಟರ್ ಲೂಮಿನಾ ಬೈಬಲ್ ಪಠಣ ಮೂಲಕ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು. ರೇಖಾ ಕುಲಕರ್ಣಿ ಸಂಗಡಿಗರಿಂದ ಗಾಂಧಿ ಪ್ರಿಯ ಗೀತೆಗಳಾದ `` ರಘುಪತಿರಾಘವ್ ರಾಜಾರಾಂ, ವೈಷ್ಣವ ಜನತೋ... " ಗೀತ ಗಾಯನ ಜರುಗಿತು.ಸದ್ಭಾವನಾ ನಡಿಗೆ: ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ನಗರದ ಗಾಂಧಿ ವೃತ್ತದಲ್ಲಿರುವ ಗಾಂಧೀಜಿ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾಲಾರ್ಪಣೆ ಮಾಡಿ, ಸದ್ಭಾವನಾ ನಡಿಗೆಗೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಎಸ್‌ಪಿ ಯಶೋಧಾ ವಂಟಗೋಡಿ, ಜಿಪಂ ಸಿಇಒ ರುಚಿ ಬಿಂದಲ್, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್, ಉಪವಿಭಾಗಾಕಾರಿ ಕಲ್ಯಾಣಿ ಕಾಂಬ್ಳೆ, ವಾರ್ತಾಧಿಕಾರಿ ಭಾರತಿ ಎಚ್, ವೀರಯ್ಯಸ್ವಾಮಿ ಹಿರೇಮಠ, ತಹಸೀಲ್ದಾರ ಶರಣಮ್ಮ, ಬಿಇಒ ಎಂ.ಎಚ್.ಪಾಟೀಲ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಶಿಕ್ಷಕ ನಾಗರಾಜ ನಡುವಿನಮಠ ಸ್ವಾಗತಿಸಿ, ನಿರೂಪಿಸಿದರು.