ಮಾನವೀಯ ಮೌಲ್ಯಗಳ ಕ್ರಾಂತಿ ತಂದ ಗಾಂಧೀಜಿ

| Published : Nov 03 2025, 02:30 AM IST

ಮಾನವೀಯ ಮೌಲ್ಯಗಳ ಕ್ರಾಂತಿ ತಂದ ಗಾಂಧೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಸತ್ಯ, ಅಹಿಂಸೆ ಮತ್ತು ತ್ಯಾಗದ ತತ್ವಗಳು ಇಂದಿಗೂ ನಮ್ಮ ಸಾಮಾಜಿಕ ಜೀವನದ ದಿಕ್ಕು ತೋರಿಸುತ್ತಿವೆ. ಗಾಂಧೀಜಿಯ ಆತ್ಮಕಥೆಯು ಆತ್ಮಪರಿಷ್ಕರಣೆಯ ಕಾವ್ಯ. ಪ್ರತಿಯೊಬ್ಬ ಯುವಕ-ಯುವತಿಯೂ ಗಾಂಧೀಜಿಯಂತಹ ನೈತಿಕ ಶಕ್ತಿ ಮತ್ತು ಸಂಯಮವನ್ನು ಅಳವಡಿಸಿಕೊಂಡಾಗ ಮಾತ್ರ ರಾಷ್ಟ್ರ ಬಲಿಷ್ಠವಾಗುತ್ತದೆ.

ಗದಗ:

ಮಹಾತ್ಮ ಗಾಂಧೀಜಿಯ ಸತ್ಯದೊಂದಿಗೆ ನನ್ನ ಪ್ರಯೋಗಗಳು ಎಂಬ ಆತ್ಮಕಥೆ ಕೇವಲ ಜೀವನದ ಕತೆಯಲ್ಲ, ಅದು ಸತ್ಯ ಸಾಧನೆಯ ಪಥ. ಈ ಗ್ರಂಥದಲ್ಲಿ ಗಾಂಧೀಜಿ ತಮ್ಮ ಆಂತರಿಕ ಸಂಶೋಧನೆಯ ಮುಖಾಂತರ ಮಾನವೀಯ ಮೌಲ್ಯಗಳ ಕ್ರಾಂತಿ ತಂದಿದ್ದಾರೆ ಎಂದು ಆರ್‌ಡಿಪಿಆರ್‌ ವಿಶ್ವವಿದ್ಯಾಲಯದ ಸಂಚಾಲಕ ಪ್ರಕಾಶ ಎಸ್. ಮಾಚೇನಹಳ್ಳಿ ಹೇಳಿದರು.

ನಗರದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವೇದಿಕೆಯಿಂದ ನಡೆದ ಗಾಂಧೀಜಿಯ ಆತ್ಮಚರಿತ್ರೆಗೆ ಶತವರ್ಷ ಎಂಬ ವಿಷಯದ ಅಡಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತ್ಯ, ಅಹಿಂಸೆ ಮತ್ತು ತ್ಯಾಗದ ತತ್ವಗಳು ಇಂದಿಗೂ ನಮ್ಮ ಸಾಮಾಜಿಕ ಜೀವನದ ದಿಕ್ಕು ತೋರಿಸುತ್ತಿವೆ. ಗಾಂಧೀಜಿಯ ಆತ್ಮಕಥೆಯು ಆತ್ಮಪರಿಷ್ಕರಣೆಯ ಕಾವ್ಯ. ಪ್ರತಿಯೊಬ್ಬ ಯುವಕ-ಯುವತಿಯೂ ಗಾಂಧೀಜಿಯಂತಹ ನೈತಿಕ ಶಕ್ತಿ ಮತ್ತು ಸಂಯಮವನ್ನು ಅಳವಡಿಸಿಕೊಂಡಾಗ ಮಾತ್ರ ರಾಷ್ಟ್ರ ಬಲಿಷ್ಠವಾಗುತ್ತದೆ ಎಂದು ತಿಳಿಸಿದರು.

ಡಾ. ಅರ್ಜುನ ಗೊಳಸಂಗಿ ಗಾಂಧೀಜಿ ಕುರಿತು ಹಲವಾರು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಚಕೋರ ಸಾಹಿತ್ಯ ವೇದಿಕೆ ಸಂಚಾಲಕ ಪ್ರೊ. ಎಸ್.ಯು. ಸಜ್ಜನಶೆಟ್ಟರ ಪ್ರಾಸ್ತಾವಿಕ ಮಾತನಾಡಿ, ಗಾಂಧೀಜಿಯ ಕೃತಿಯು ಶತಮಾನಗಳಾದರೂ ಕಾಲಾತೀತವಾಗಿರುವುದು ಅದರ ನೈತಿಕ ಶಕ್ತಿಯ ಕಾರಣ. ಆತ್ಮಪರಿಷ್ಕರಣೆ ಇಲ್ಲದೆ ಸಮಾಜ ಪರಿಷ್ಕರಣೆ ಸಾಧ್ಯವಿಲ್ಲ ಎಂದರು.

ಬಸವೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಎಂ.ಎಂ. ಬುರಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.