ಹೋರಾಟದಷ್ಟೇ ಸ್ವಚ್ಛತೆಗೂ ಕಾಳಜಿ ವಹಿಸಿದ್ದ ಗಾಂಧೀಜಿ

| Published : Oct 03 2025, 01:07 AM IST

ಹೋರಾಟದಷ್ಟೇ ಸ್ವಚ್ಛತೆಗೂ ಕಾಳಜಿ ವಹಿಸಿದ್ದ ಗಾಂಧೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮಾ ಗಾಂಧೀಜಿಯವರ ಆಶಯದಂತೆ ನಾವೆಲ್ಲರೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಷ್ಟೇ ಸ್ವಚ್ಛತೆಗೂ ಕಾಳಜಿ ವಹಿಸಿದ್ದರು. ದೇಶದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಮೂಲಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದರು. ಆದ್ದರಿಂದ ನಮ್ಮ ನಗರವನ್ನು ಸ್ವಚ್ಛವಾಗಿರಿಸಲು ನಾವೆಲ್ಲರೂ ಸಹಕರಿಸಬೇಕಿದೆ ಎಂದು ಮೇಯರ್‌ ಮಂಗೇಶ ಪವಾರ ಹೇಳಿದರು.

ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ವೀರಸೌಧದಲ್ಲಿ ನಡೆದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾತ್ಮಾ ಗಾಂಧೀಜಿಯವರ ಆಶಯದಂತೆ ನಾವೆಲ್ಲರೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ನಗರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಜೊತೆಗೆ ನಗರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಜೀವನ ಪ್ರೇರಣೆಯಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದೊಂದಿಗೆ ಸೇವಾ ಮನೋಭಾವ ಬೆಳಸಿಕೊಳ್ಳಬೇಕು ಎಂದರು.

ಪ್ರತಿಯೊಬ್ಬರು ಉನ್ನತ ಹುದ್ದೆಯೊಂದಿಗೆ ದೇಶ ಸೇವೆಗೆ ಸಮರ್ಪಿಸಿಕೊಳ್ಳಬೇಕು. ಪ್ರತಿ ಕಾಯಕವನ್ನು ಪೂರ್ಣ ಮನಸ್ಸಿನಿಂದ ಮಾಡಿದಲ್ಲಿ ಮಾತ್ರ ಸೇವಾ ಮನೋಭಾವನೆ ಬರಲು ಸಾಧ್ಯ. ನಾವೆಲ್ಲರೂ ಒಂದೇ ಎಂಬ ತತ್ವ ಗಾಂಧೀಜಿಯವರದಾಗಿತ್ತು. ಅದರಂತೆ ದೇಶದಲ್ಲಿ ಗಾಂಧಿಜಿ ಅವರ ಆಶಯದಂತೆ ಸೌಹಾರ್ದತೆ‌ ಮೂಲಕ ನಾವೆಲ್ಲರೂ ಒಂದೇ ಎಂಬ ಮನೋಭಾವ ಹೊಂದಬೇಕು. ವಿಭಿನ್ನತೆಯಲ್ಲಿ ಐಕ್ಯತೆ ಎಂಬ ಗಾಂಧೀಜಿಯವರ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು. ಅದೇ ರೀತಿ ದೇಶ ಕಂಡ ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಯವರು ಬಹಳ ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದರು. ಅವರಂತೆ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಉನ್ನತ ದಕ್ಷ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಪ್ರಕಾಶ ಗಿರಿಮಲ್ಲನ್ನವರ ಅವರು, ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದರಿಂದ ಬೆಳಗಾವಿಗೂ ರಾಷ್ಟ್ರಮಟ್ಟದ ಕೀರ್ತಿ ಪ್ರಾಪ್ತವಾಯಿತು ಎಂದರು. ಬೆಳಗಾವಿಯಲ್ಲಿ ನೂರು ವರ್ಷಗಳ ಹಿಂದೆ ಎರಡು ಲಕ್ಷ ರು. ಹಣ ಖರ್ಚು ಮಾಡಿ, ನಃಭೂತೋ ನಃಭವಿಷ್ಯತಿ ಎಂಬಂತೆ ಅಧಿವೇಶನವನ್ನು ನಡೆಲಾಗಿತ್ತು. ಗಾಂಧೀಜಿಯವರೊಂದಿಗೆ ಅನೇಕ ರಾಷ್ಟ್ರೀಯ ಮುಖಂಡರು ಆಗಮಿಸಿದ್ದರು. ಈ ಅಧಿವೇಶನದಲ್ಲಿ ಮೊಟ್ಟ ಮೊದಲ ಬಾರಿಗೆ ಹುಯಿಲಗೋಳ ನಾರಾಯಣರಾಯರು ಬರೆದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಗೀತೆಯನ್ನು ಗಂಗೂಬಾಯಿ ಹಾನಗಲ್ ಅವರು ಹಾಡಿದ್ದು ಇಂದು ಇತಿಹಾಸ ಆಗಿದೆ. ಈ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ನಮ್ಮನ್ನು ಗುಲಾಮರನ್ನಾಗಿ ಮಾಡಿರುವುದು ನಿಜ. ಆದರೆ ಅದಕ್ಕಿಂತಲೂ ಘೋರವಾದುದು ಅಸ್ಪಶ್ಯತೆಯ ಆಚರಣೆ. ಆದ್ದರಿಂದ ಬ್ರಿಟಿಷರ ವಿರುದ್ಧ ಹೋರಾಟಕ್ಕಿಂತ ಆಂತರಿಕ ವೈರಿಯಾದ ಈ ಆಸ್ಪೃಶ್ಯತೆಯ ನಿರ್ಮೂಲನೆಗಾಗಿ ನಾವೆಲ್ಲ ಶತಪ್ರಯತ್ನ ಮಾಡಬೇಕೆಂದು ಗಾಂಧೀಜಿ ಕರೆ ಕೊಟ್ಟಿರುವುದು ಬೆಳಗಾವಿ ಅಧಿವೇಶನದ ಒಂದು ಮಹತ್ವದ ನಿರ್ಣಯವಾಗಿದೆ ಎಂದು ಹೇಳಿದರು. ಅಧಿವೇಶನದ ಪ್ರಮುಖ ನಿರ್ಣಯಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಟದ ಒಂದು ಅಂಶವೂ ಇಲ್ಲ. ಆದರೆ ಅಸ್ಪೃಶ್ಯತೆ ನಿವಾರಣೆಗಾಗಿ ನಾವೆಲ್ಲ ಶ್ರದ್ಧಾಪೂರ್ವಕವಾಗಿ ಶ್ರಮಿಸಬೇಕೆಂದು ಪ್ರತಿಪಾದಿಸಲಾಯಿತು ಎಂದು ಪ್ರಕಾಶ ಗಿರಿಮಲ್ಲನ್ನವರ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿನಾಯಕ ಮೋರೆ ಹಾಗೂ ತಂಡದವರು ಗಾಂಧಿಪ್ರಿಯ ಭಜನ್ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ಜರುಗಿತು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿ, ವಂದಿಸಿದರು.

ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ, ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೊರಸೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಬಿ ಬಸರಗಿ, ಉಪ ಮಹಾ ಪೌರರಾದ ವಾಣಿ ವಿಲಾಸ್ ಜೋಶಿ, ಪಾಲಿಕೆ ಆಯುಕ್ತೆ ಶುಭ. ಬಿ, ಉಪ ಆಯುಕ್ತ ಉದಯಕುಮಾರ್ ತಳವಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್‌.ಡಿ. ಕೊಳೇಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಬಂಧ ಸ್ಪರ್ಧೆ ವಿಜೇತರು:

ಮಹಾತ್ಮಾ ಗಾಂಧೀಜಿಯವರ 156ನೇ ಜಯಂತಿ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಮಚ್ಛೆ ಸರ್ಕಾರಿ ಪ್ರೌಢಶಾಲೆ ಕೆಎಸ್‌ಆರ್‌ಪಿ ಬೆಳಗಾವಿಯ ದಿವ್ಯಾ ಶ್ರೀಶೈಲ ಗಾಣಿಗೇರ ಪ್ರಥಮ, ನಂದಗಡ ಎಸ್‌ಆರ್‌ಎಂಆರ್‌ಎಸ್‌ನ ನೀತಾ ಯಾದವಾಡ ದ್ವೀತಿಯ, ಚ.ಕಿತ್ತೂರ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಪೂಜಾ ಗಜಪತಿ ತೃತೀಯ ಬಹುಮಾನ ಪಡೆದುಕೊಂಡರು.

ಪದವಿಪೂರ್ವ ವಿಭಾಗದಲ್ಲಿ ಬೈಲಹೊಂಗಲ ಎಸ್‌ಜಿಎಸ್‌ವ್ಹಿ ಪಿಯು ಕಾಲೇಜಿನ ದಿಪಿಕಾ ಮಿಶ್ರಿಕೋಟಿ ಪ್ರಥಮ, ಬೆಳಗಾವಿಯ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನ ಅಮೃತಾ ಪಾಟೀಲ ದ್ವಿತೀಯ, ಸವದತ್ತಿಯ ಜಿ.ಜಿ.ಚೋಪ್ರಾ ಸರ್ಕಾರಿ ಪಿಯು ಕಾಲೇಜಿನ ಸಂಗಮೇಶ ತಳವಾರ ತೃತೀಯ ಸ್ಥಾನ.

ಪದವಿ/ ಸ್ನಾತ್ತಕೋತ್ತರ ಪದವಿ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೇತ್ರಾವತಿ ಮಾದರ ಪ್ರಥಮ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಾಕ್ಷತಾ ಬಡಲಿಂಗೆ ದ್ವಿತಿಯ ಸ್ಥಾನ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಲ್ಫಿಯಾ ನದಾಫ್ ಹಾಗೂ ಲಕ್ಷ್ಮೀಬಾಯಿ ಮಾನಪ್ಪಗೋಳ ತೃತೀಯ ಸ್ಥಾನ ಪಡೆದಕೊಂಡ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.