ಸತ್ಯಾನ್ವೇಷಣೆಗೆ ಒತ್ತು ನೀಡಿದ್ದ ಗಾಂಧೀಜಿ: ಡಾ.ವೈ.ಎಚ್. ನಾಯಕವಾಡಿ

| Published : Oct 03 2024, 01:17 AM IST

ಸತ್ಯಾನ್ವೇಷಣೆಗೆ ಒತ್ತು ನೀಡಿದ್ದ ಗಾಂಧೀಜಿ: ಡಾ.ವೈ.ಎಚ್. ನಾಯಕವಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಆಫ್ರಿಕಾದ ನ್ಯಾಯವಾದದ ತೆರಿಗೆ ಪ್ರಕರಣ ಒಂದರಲ್ಲಿಯೂ ಗಾಂಧೀಜಿ ಅವರು ತಮ್ಮ ಕಕ್ಷಿದಾರನ ವಿರುದ್ಧವಾಗಿಯೇ ವಾದವನ್ನು ಮಂಡಿಸಿ, ಸತ್ಯವನ್ನು ಎತ್ತಿ ಹಿಡಿದಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಗಾಂಧೀಜಿ ಅವರು ತಮ್ಮ ಬದುಕಿನ ಹಾದಿಯುದ್ದಕ್ಕೂ ಸತ್ಯಾನ್ವೇಷಣೆಗೆ ಒತ್ತು ನೀಡಿದ್ದರು. ಸತ್ಯಾನ್ವೇಷಣೆಯ ಮಾರ್ಗವನ್ನು ಅವರು ಬಲವಾಗಿ ನಂಬಿದ್ದರು ಎಂದು ಮೈಸೂರು ವಿವಿ ಇತಿಹಾಸ ವಿಭಾಗದ ಅಧ್ಯಕ್ಷ ಡಾ.ವೈ.ಎಚ್. ನಾಯಕವಾಡಿ ತಿಳಿಸಿದರು.ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಗಾಂಧೀಜಿಯವರ 155ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾದ ನ್ಯಾಯವಾದದ ತೆರಿಗೆ ಪ್ರಕರಣ ಒಂದರಲ್ಲಿಯೂ ಗಾಂಧೀಜಿ ಅವರು ತಮ್ಮ ಕಕ್ಷಿದಾರನ ವಿರುದ್ಧವಾಗಿಯೇ ವಾದವನ್ನು ಮಂಡಿಸಿ, ಸತ್ಯವನ್ನು ಎತ್ತಿ ಹಿಡಿದಿದ್ದರು ಎಂದು ಹೇಳಿದರು.ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗಲೇ ಚಳವಳಿಯ ಸ್ವರೂಪವನ್ನು ಕಟ್ಟಿಕೊಂಡಿದ್ದರು. ಭಾರತಕ್ಕೆ ಬಂದ ಮೇಲೆ ತಮ್ಮ ಚಳವಳಿಯ ಮಾರ್ಗದಲ್ಲಿ ಸ್ಪಷ್ಟತೆಯನ್ನು ಕಾಯ್ದುಕೊಂಡರು. ವಸಾಹತುಶಾಹಿಗೆ ಪರ್ಯಾಯ ಸ್ವಾತಂತ್ರ ಮತ್ತು ರಾಜಕೀಯ ವ್ಯವಸ್ಥೆಯನ್ನು ತಂದರು ಎಂದರು.ಗುಡಿ ಕೈಗಾರಿಕೆಗಳು, ದೇಶಿಯ ಶಿಕ್ಷಣ ವ್ಯವಸ್ಥೆ, ಸ್ವಾವಲಂಬಿ ಜೀವನಗಳಂತಹ ಕಲ್ಪನೆಗಳನ್ನು ಪರ್ಯಾಯವಾಗಿ ಕಲ್ಪಿಸಿ ಪ್ರತಿಪಾದಿಸಿದರು. ಭಾರತಕ್ಕೆ ಅದರದೇ ಆದ ರಾಷ್ಟ್ರೀಯತೆ ಮತ್ತು ಚಳವಳಿಯ ಸ್ವರೂಪವನ್ನು ತಂದರು. ಈ ರಾಷ್ಟ್ರೀಯತೆಯಲ್ಲಿ ದೇಶದ ಎಲ್ಲಾ ಜನರು ಸಮಾನತೆ, ಸಹೋದರತ್ವದಿಂದ ಬದುಕುವಂತಹ ಕಲ್ಪನೆಯಿದೆ ಎಂದು ಅವರು ತಿಳಿಸಿದರು.ಜನಸಾಮಾನ್ಯರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗುವಂತೆ ಅವರು ಮಾಡಿದ್ದು ಅವರ ಸಾಧನೆಗಳಲ್ಲಿ ಒಂದಾಗಿದೆ. ಸರಳತೆ, ಚಾರಿತ್ರ್ಯ, ಅಹಿಂಸೆ, ಸತ್ಯಾಗ್ರಹಗಳಂತಹ ಆದರ್ಶಗಳು ಭಾರತಕ್ಕೆ ಮಾತ್ರವಲ್ಲದೆ ಜಗತ್ತಿಗೆ ಶ್ರೇಷ್ಠ ಆದರ್ಶಗಳಾಗಿ ಇಂದು ನಿಂತಿವೆ ಎಂದು ಅವರು ಹೇಳಿದರು.ಅಹಿಂಸಾ ತತ್ವವನ್ನು ಪ್ರಬಲವಾಗಿ ನಂಬಿದ್ದರುಅಧ್ಯಕ್ಷತೆ ವಹಿಸಿದ್ದ ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಸತ್ಯಾಗ್ರಹ ಮತ್ತು ಅಹಿಂಸಾ ತತ್ವವನ್ನು ಗಾಂಧೀಜಿಯವರು ಪ್ರಬಲವಾಗಿ ನಂಬಿದ್ದರು. ಅವರು ಭಾರತಕ್ಕೆ ಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ನಂತರ ಆ ಕಾಲಘಟ್ಟವನ್ನು ಗಾಂಧೀಯುಗ ಎಂದು ಕರೆಯುವಂತೆ ಅವರ ತತ್ವ-ಆದರ್ಶಗಳು ಸಮಾಜದ ಮೇಲೆ ಪ್ರಭಾವವನ್ನು ಬೀರಿದವು ಎಂದರು.ದೀನ- ದುರ್ಬಲರು, ಅಸ್ಪೃಶ್ಯರು ಮತ್ತು ಮಹಿಳೆಯರನ್ನು ಅಪಾರ ಗೌರವದಿಂದ ಕಾಣುತ್ತಿದ್ದ ಅವರು ಇವರೆಲ್ಲರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗುವಂತೆ ಮಾಡಿದರು. ಶತ್ರುಗಳನ್ನು ಸ್ನೇಹಿತರಂತೆ ಪರಿವರ್ತಿಸುವ ಶಕ್ತಿ ಅವರಲಿತ್ತು. ಅವರು ನಿಧನರಾದ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಗಾಂಧೀಜಿಯವರು ಸಾಯಲಿಲ್ಲ. ಮಾನವೀಯತೆ ಸತ್ತಿತು ಎಂದೇ ಭಾವಿಸಿತು. ಇಡೀ ಜಗತ್ತೆ ಗಾಂಧೀಜಿಯವರ ತತ್ವ ಆದರ್ಶಗಳನ್ನು ಮೆಚ್ಚಿದೆ ಎಂದು ಅವರು ತಿಳಿಸಿದರು.ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್. ಸೋಮಶೇಖರ ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಿದರು. ರಾಷ್ಟ್ರೀಯ ಹಬ್ಬಗಳ ಸಮಿತಿಯ ಸಂಚಾಲಕ ಡಾ.ಎಲ್. ವಿನಯ್ ಕುಮಾರ್ ಇದ್ದರು. ಪದವಿ ಕಾಲೇಜು ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಕ್ಷೀರಾ ಶಾನ್ ಭೋಗ್ ಮತ್ತು ಅದಿತಿ ಹೆಗಡೆ ಪ್ರಾರ್ಥಿಸಿದರು. ಎಚ್.ಪಿ. ಮಹದೇವಸ್ವಾಮಿ ವಂದಿಸಿದರು. ಡಾ.ಎಂ. ಸೌಮ್ಯ ನಿರೂಪಿಸಿದರು.ಸ್ವಚ್ಛತಾ ಕಾರ್ಯಕ್ರಮ:ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಸಿ.ಸಿ ಕೆಡೆಟ್ ಗಳು, ಎನ್.ಸಿ.ಸಿ 14 ಕರ್ನಾಟಕ ಬೆಟಾಲಿಯನ್ ನ ಸುಬೇದಾರರು, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರು, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಚಾಮುಂಡಿ ತಪ್ಪಲಿನ ರಸ್ತೆಯನ್ನು ಸ್ವಚ್ಛಗೊಳಿಸಿದರು.