ಹರಪನಹಳ್ಳಿ: ಕೇಂದ್ರ ಸರ್ಕಾರ ನರೇಗಾ ಯೋಜನೆಯಿಂದ ಗಾಂಧೀಜಿ ಹೆಸರನ್ನು ಮಾತ್ರ ಬದಲಾಯಿಸಿಲ್ಲ; ಅವರ ಆಶಯ, ವಿಚಾರಗಳನ್ನು ಸಹ ಬದಲಾವಣೆ ಮಾಡಿದ್ದಾರೆ ಎಂದು ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ ಹೇಳಿದರು.ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ವಿಬಿಜಿ ರಾಮ್ ಜಿ ಬಿಲ್ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪತ್ರ ಚಳವಳಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆಯು ಕಳೆದ 20 ವರ್ಷಗಳ ಕಾಲ ನಿರಂತರವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕೊಟ್ಟಿದೆ. ಸಾಕಷ್ಟು ಮಹಿಳೆಯರು ಇದರಿಂದ ಬದುಕು ಕಟ್ಟಿಕೊಂಡಿದ್ದಾರೆ. ಇಷ್ಟೆಲ್ಲ ಪ್ರಯೋಜನೆ ಇದ್ದಾಗ ಈ ಯೋಜನೆ ಹೆಸರು ಬದಲಾಯಿಸುವ ಆವಶ್ಯಕತೆ ಏನಿತ್ತು, ಇದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಎಲ್ಲ ಯೋಜನೆಗಳನ್ನು ಬಿಜೆಪಿಯವರು ಬದಲಾವಣೆ ಮಾಡುತ್ತಿದ್ದಾರೆ. ನರೇಗಾಕ್ಕೆ ರಾಮ್ ಜಿ ಹೆಸರಿಡುವ ಮೂಲಕ ನಮ್ಮನ್ನು ಧರ್ಮದಿಂದ ಕಟ್ಟಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿಪಿಐ ಮುಖಂಡ ಗೂಡಿಹಳ್ಳಿ ಹಾಲೇಶ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಜಿಶಾನ್ ಹ್ಯಾರಿಸ್, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತಿಹಳ್ಳಿ ಜಯಪ್ಪ, ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಾಲಬಂದಿ ರಾಜೇಸ್ ಸಾಧಿಕ್, ಗೌರಿಪುರ ದುರುಗೇಶ, ಉದ್ಘಾಟಿ ತಾಂಡಾ ಜೀತು ನಾಯ್ಕ್, ಕಡಬಗೇರಿ ತಾತಪ್ಪ, ಸಾಸ್ವಿಹಳ್ಳಿ ಗಂಗಜ್ಜಿ ನಾಗರಾಜ್, ಬೆಣ್ಣೆಹಳ್ಳಿ ಮಂಜುನಾಥ, ರುಮಾನ್, ಲಕ್ಕಪ್ಪ, ಅರುಣ, ಆಟೋ ದೊರೆ , ಪರಶುರಾಮ ಸೇರಿದಂತೆ ಮಹಿಳೆಯರು ಇದ್ದರು.