ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ದಾವಣಗೆರೆಯ ರಾಮ ನಗರದ ಗಾಂಧಿ ಭವನದಲ್ಲಿ ಅಕ್ಟೋಬರ್‌ ೨ರಂದು ಬೆಳಗ್ಗೆ 10 ಗಂಟೆಗೆ ಶ್ರಮದಾನ, ಸರ್ವಧರ್ಮ ಪ್ರಾರ್ಥನೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ತಿಳಿಸಿದ್ದಾರೆ.

- ಶಾಲಾ-ಕಾಲೇಜು ಹಂತದಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆ: ಅಪರ ಡಿಸಿ ಶೀಲವಂತ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ದಾವಣಗೆರೆಯ ರಾಮ ನಗರದ ಗಾಂಧಿ ಭವನದಲ್ಲಿ ಅಕ್ಟೋಬರ್‌ ೨ರಂದು ಬೆಳಗ್ಗೆ 10 ಗಂಟೆಗೆ ಶ್ರಮದಾನ, ಸರ್ವಧರ್ಮ ಪ್ರಾರ್ಥನೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ತಿಳಿಸಿದರು.

ನಗರದ ಅಪರ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜು ಹಂತದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಸಚಿವ ಕೆ.ಎಸ್.ಬಸವಂತಪ್ಪ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸುವರು ಎಂದು ಹೇಳಿದರು.

ಹೈಸ್ಕೂಲ್‌ ಮಕ್ಕಳಿಗೆ 700ರಂದ 800 ಪದಗಳಿಗೆ ಮೀರದಂತೆ ಗಾಂಧೀಜಿಯವರ ಸತ್ಯ ಶೋಧನೆ ಜೀವನ-ಆಧುನಿಕ ಸಂದರ್ಭ ಅಥವಾ ನಾನು ಕಂಡ ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತಗಳು ಅಥವಾ ಗಾಂಧೀಜಿಯವರ ಜೀವನ ಶೈಲಿಯಿಂದ ಕಲಿಯುವ ಐದು ಪಾಠಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ವಿಜೇತರ ಪಟ್ಟಿಯನ್ನು ಕಳುಹಿಸಬೇಕು ಎಂದು ಸೂಚಿಸಿದರು.

ಪಿಯು ಶಿಕ್ಷಣ ವಿಭಾಗದಲ್ಲಿ 900ರಿಂದ 1 ಸಾವಿರ ಪದಗಳು ಮೀರದಂತೆ ಗಾಂಧೀಜಿಯ ದೃಷ್ಟಿಯಲ್ಲಿ ನಿಜವಾದ ಸ್ವಾತಂತ್ರ್ಯ ಅಥವಾ ಸತ್ಯ ಮತ್ತು ಅಹಿಂಸೆ- ನನ್ನ ಜೀವನದ ದಾರಿ ಅಥವಾ ಅಸಮಾನತೆ ನಿವಾರಣೆಗೆ ಗಾಂಧೀಜಿ ಕೊಡುಗೆ ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು ಪ್ರಬಂಧ ಏರ್ಪಡಿಸಬೇಕು. ಪಿಯು ಉಪ ನಿರ್ದೇಶಕರು ವಿಜೇತರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳಿಸಬೇಕು ಎಂದು ತಿಳಿಸಿದರು.

ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ 1400ರಿಂದ 1500 ಪದ ಮೀರದಂತೆ ನೈತಿಕ ರಾಜಕಾರಣ-ಗಾಂಧೀಜಿಯ ತತ್ವಗಳ ಇಂದಿನ ಪ್ರಾಸಂಗಿಕತೆ ಅಥವಾ ಸತ್ಯಾಗ್ರಹ- ಇಂದಿನ ಕಾಲದ ಅವಶ್ಯಕತೆ ಅಥವಾ ಗಾಂಧೀಜಿ ಶಿಕ್ಷಣ ತತ್ವ- ನೈತಿಕತೆ, ಕೌಶಲ್ಯ, ಸೇವಾಭಾವ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ ಸಂಬಂಧಿಸಿದ ಪ್ರಥಮ ದರ್ಜೆ ಕಾಲೇಜಿನ ನೋಡಲ್ ಅಧಿಕಾರಿಗಳ ಮೂಲಕ ವಿಜೇತರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕಳಿಸಿಕೊಡುವಂತೆ ಸೂಚನೆ ನೀಡಿದರು.

ಜಿಪಂ ಸಿಇಒ, ಶಾಲಾ ಹಾಗೂ ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲಾ ವಾರ್ತಾಧಿಕಾರಿಗಳು ಸ್ಪರ್ಧೆಗಳನ್ನು ಅನುಷ್ಠಾನಗೊಳಿಸಲಿದ್ದಾರೆ. ಅಂದು ಶ್ರಮದಾನ, ಸರ್ವ ಧರ್ಮ ಪ್ರಾರ್ಥನೆ, ಗಾಂಧೀಜಿಯವರ ಪ್ರಿಯ ಭಜನೆಗಳು, ಅಸ್ಪೃಶ್ಯತೆ ನಿವಾರಣೆ, ಅಹಿಂಸೆ, ಮಹಿಳಾ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಮದ್ಯಪಾನ ವಿರೋಧಿ ನೀತಿ, ಖಾದಿ-ಸ್ವದೇಶಿ ವಸ್ತು ಬಳಕೆ ಕುರಿತು ಜಾಗೃತಿ ಹಾಗೂ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ, ಜಿಲ್ಲಾ ಹಿಂದುಳಿದ ಕಲ್ಯಾಣಾಧಿಕಾರಿ ರೇಣುಕಾದೇವಿ, ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ರವಿಚಂದ್ರ, ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಳನಿವೇಲು, ಶಾಲಾ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿಶಾಲಾಕ್ಷಿ, ಇತರರು ಇದ್ದರು.

- - -

-31ಕೆಡಿವಿಜಿ8, 9, 10:

ದಾವಣಗೆರೆ ಅಪರ ಡಿಸಿ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.