ಬಳ್ಳಾರಿಗೆ 2 ಬಾರಿ ಭೇಟಿ ನೀಡಿದ್ದ ಗಾಂಧೀಜಿ

| Published : Oct 03 2025, 01:07 AM IST

ಬಳ್ಳಾರಿಗೆ 2 ಬಾರಿ ಭೇಟಿ ನೀಡಿದ್ದ ಗಾಂಧೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ರೈಲು ನಿಲ್ದಾಣದಲ್ಲಿಯೇ ನಿದ್ರಿಸಿ ಮರುದಿನ ಧಾರವಾಡಕ್ಕೆ ಪ್ರಯಾಣಿಸಿದುದ್ದನ್ನು ನಾವು ಸ್ಮರಿಸಬಹುದಾಗಿದೆ.

ಬಳ್ಳಾರಿ: ಮಹಾತ್ಮ ಗಾಂಧೀಜಿ ಬಳ್ಳಾರಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಅವರು ಧುಮುಕುವ ಮುನ್ನ ದೇಶದ್ಯಾಂತ ಸಂಚರಿಸಿ, ಜನಸಾಮಾನ್ಯರನ್ನು ಭೇಟಿಯಾಗಲು ನಿರ್ಧರಿಸಿದ್ದರು. 1921ರ ಅಕ್ಟೋಬರ್ 1ರಂದು ಪ್ರಥಮ ಬಾರಿಗೆ ಬಳ್ಳಾರಿಗೆ ಭೇಟಿ ನೀಡಿದ್ದರು ಎಂದು ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ತಿಳಿಸಿದರು.

ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಗಾಂಧಿಭವನದಲ್ಲಿ ಜರುಗಿದ ಮಹಾತ್ಮ ಗಾಂಧೀಜಿಯವರ 156ನೇ ಜಯಂತ್ಯೋತ್ಸವ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತ್ಯುತ್ಸವ ಹಾಗೂ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಗಾಂಧೀಜಿಯವರು ಬಳ್ಳಾರಿ ಭೇಟಿ ನೀಡಿದ ವೇಳೆ ಬಳ್ಳಾರಿ ರೈಲು ನಿಲ್ದಾಣದಲ್ಲಿಯೇ ನಿದ್ರಿಸಿ ಮರುದಿನ ಧಾರವಾಡಕ್ಕೆ ಪ್ರಯಾಣಿಸಿದುದ್ದನ್ನು ನಾವು ಸ್ಮರಿಸಬಹುದಾಗಿದೆ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸೆಣಸಲು ಇಡೀ ದೇಶಾದ್ಯಂತ ಸಂಚಾರ ಮಾಡಿ ಜನಜಾಗೃತಿ ಮೂಡಿಸಿದರು. ಬಾಪೂಜಿಯವರು, 1934ರ ಮಾ.3ರಂದು ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಣೆಗಾಗಿ ಎರಡನೇ ಬಾರಿ ಬಳ್ಳಾರಿಗೆ ಆಗಮಿಸಿದ್ದರು ಹಾಗೂ ಇಲ್ಲಿಂದ ಸಂಡೂರಿಗೆ ಸಹ ಪ್ರಯಾಣಿಸಿದರು ಎಂದು ತಿಳಿಸಿದರು.

ಗಾಂಧೀಜಿಯವರ ಮರಣದ ನಂತರ ಅವರ ಚಿತಾಭಸ್ಮವನ್ನು ಅಖಂಡ ಬಳ್ಳಾರಿಯಾಗಿದ್ದ ಸಂದರ್ಭದಲ್ಲಿ ಕೂಡ್ಲಿಗಿ ತಾಲ್ಲೂಕಿನಲ್ಲಿ ಅಂದಿನ ಗಾಂಧಿವಾದಿಗಳು ತಂದು ಸ್ಮಾರಕವನ್ನು ನಿರ್ಮಿಸಿರುವುದು ನಮ್ಮ ಬಳ್ಳಾರಿಯ ಹೆಮ್ಮೆಯಾಗಿದೆ ಎಂದು ಕೆ.ಇ. ಚಿದಾನಂದಪ್ಪ ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಯುವ ಪೀಳಿಗೆಯು ಉತ್ತಮ ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಪ್ರತಿಯೊಬ್ಬರು ಸತ್ಯ-ಅಹಿಂಸಾ ಮಾರ್ಗದಲ್ಲಿ ನಡೆದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಅತ್ಯಂತ ಸೃಜನಶೀಲ ವಿಭಾಗ ಎನಿಸಿದ ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟವರು. ಮಹಾತ್ಮ ಗಾಂಧೀಜಿ ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಮತ್ತು ಲಾಲ್ ಬಹದ್ದೂರು ಶಾಸ್ತ್ರೀಜಿ ‘ಜೈ ಜವಾನ್, ಜೈ ಕಿಸಾನ್’ ಎಂದು ಹೇಳಿದ್ದಾರೆ. ಈ ಇಬ್ಬರು ಮಹಾನ್ ನಾಯಕರ ಆದರ್ಶ ಪಾಲನೆ ಮಾಡಿದರೆ ನಾವು ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಮಹನೀಯರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯೋಣ ಎಂದು ಹೇಳಿದರು.

ಬಳ್ಳಾರಿಯ ಆಕಾಶವಾಣಿ ಉದ್ಘೋಷಕರು ಹಾಗೂ ಉಪನ್ಯಾಸಕರಾದ ಅಮಾತಿ ಬಸವರಾಜ ಅವರು ಮಹಾತ್ಮ ಗಾಂಧೀಜಿಯವರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀ ಭಾವಚಿತ್ರಗಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಸರ್ವಧರ್ಮ ಗ್ರಂಥಗಳ ಬೋಧನೆ ಮಾಡಿದರು. ತಾಲೂಕಿನ ಇಬ್ರಾಹಿಂಪುರದ ಎಸ್.ಎಂ. ಹುಲುಗಪ್ಪ ತಂಡದವರು ಗಾಂಧೀಜಿ ಕುರಿತು ಭಜನಾ ಗೀತೆ ಪ್ರಸ್ತುತ ಪಡಿಸಿದರು.

ಎಎಸ್ಪಿ ನವೀನಕುಮಾರ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಡಿಡಿಪಿಐ ಬಿ.ಉಮಾದೇವಿ, ವಾರ್ತಾ ಇಲಾಖೆಯ ವಿ.ಸಿ. ಗುರುರಾಜ ಸೇರಿದಂತೆ ಶಾಲಾ-ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಬಹುಮಾನ ವಿಜೇತರು:

ಪ್ರೌಢಶಾಲೆ ವಿಭಾಗ:

ಪ್ರಥಮ-ಚಿನ್ನ (ಸರ್ಕಾರಿ ಪ್ರೌಢಶಾಲೆ, ತಾಳೂರು, ಸಂಡೂರು(ತಾ), ದ್ವಿತೀಯ-ಸುಷ್ಮಿತಾ (ಸರ್ಕಾರಿ ಪ್ರೌಢಶಾಲೆ, ತೋರಣಗಲ್ಲು, ಸಂಡೂರು(ತಾ), ತೃತೀಯ-ಶಾಂತಿ.ಹೆಚ್ (ಸಂತ ಜಾನ್ ಸರ್ಕಾರಿ ಪ್ರೌಢ ಶಾಲೆ, ಬಳ್ಳಾರಿ ಪಶ್ಚಿಮ).

ಪದವಿಪೂರ್ವ ಕಾಲೇಜು ವಿಭಾಗ:

ಪ್ರಥಮ-ಕೆ.ಪದ್ಮಾವತಿ (ಸರ್ಕಾರಿ (ಮಾಪು) ಪದವಿ ಪೂರ್ವ ಕಾಲೇಜು ಬಳ್ಳಾರಿ), ದ್ವಿತೀಯ-ಎಸ್.ಮಾರುತಮ್ಮ (ಸರ್ಕಾರಿ ಪದವಿ ಪೂರ್ವ ಕಾಲೇಜು, ತೆಕ್ಕಲಕೋಟೆ), ತೃತೀಯ-ರೇವತಿ (ಡಾ.ಎಪಿಜಿ ಅಬ್ದುಲ್ ಕಲಾಂ ಪದವಿಪೂರ್ವ ಕಾಲೇಜು, ಕೊಳಗಲ್ಲು, ಬಳ್ಳಾರಿ ತಾಲ್ಲೂಕು).

ಪದವಿ/ಸ್ನಾತಕೋತ್ತರ ವಿಭಾಗ:

ಪ್ರಥಮ-ದೇವೆಂದ್ರ ನಾಯ್ಕ ಕಾರೇಕಲ್ಲು (ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ), ದ್ವಿತೀಯ-ಜಿ.ವಿಜಯ್ ಕುಮಾರ್(ಸಸಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳ್ಳಾರಿ), ತೃತೀಯ-ಮಾನ್ಯ.ಎನ್ (ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಳ್ಳಾರಿ).