ಗಾಂಧಿ ಧೈರ್ಯ ಎಲ್ಲರಿಗೂ ಮಾದರಿ: ಜಿಲ್ಲಾಧಿಕಾರಿ

| Published : Oct 03 2025, 01:07 AM IST

ಸಾರಾಂಶ

ಅನ್ಯಾಯದ ವಿರುದ್ಧ ಏಕಾಂಗಿಯಾಗಿ ದನಿಯೆತ್ತುವ ಅವರ ಧೈರ್ಯದ ಗುಣ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು.

ಗಾಂಧಿ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕಾರವಾರ

ಮಹಾತ್ಮಾ ಗಾಂಧಿ ಬ್ರಿಟಿಷರ ವಿರುದ್ಧ ಧೈರ್ಯವಾಗಿ ನಿಂತು ಇಡೀ ಭಾರತವನ್ನು ಒಂದುಗೂಡಿಸಿ ಸ್ವಾತಂತ್ರ್ಯ ಹೋರಾಟ ಮುನ್ನಡೆಸಿದ್ದರು. ಅನ್ಯಾಯದ ವಿರುದ್ಧ ಏಕಾಂಗಿಯಾಗಿ ದನಿಯೆತ್ತುವ ಅವರ ಧೈರ್ಯದ ಗುಣ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು.

ಗುರುವಾರ ನಗರಸಭೆಯ ಮಹಾತ್ಮಾ ಗಾಂಧಿ ಉದ್ಯಾನವನದಲ್ಲಿ ಆಯೋಜಿಸಿದ್ದ ಗಾಂಧಿ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಗಾಂಧೀಜಿಯವರಲ್ಲಿದ್ದ ಪ್ರಾಮಾಣಿಕತೆಯ ಗುಣವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಹಿಂಸೆಯ ಮೂಲಕ ಏನು ಬೇಕಾದರು ಸಾಧಿಸಬಹುದು ಎಂದು ಇಡೀ ಜಗತ್ತಿಗೆ ತಿಳಿಸಿದವರು ಗಾಂಧೀಜಿ ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ದೀಲಿಷ್ ಶಶಿ, ಗಾಂಧೀಜಿ ನನ್ನ ಜೀವನವೇ ನನ್ನ ಸಂದೇಶ ಎಂಬುದಕ್ಕೆ ಪೂರಕವಾಗಿ ಅವರ ತತ್ವಗಳನ್ನು ಜೀವನ ಪರ್ಯಾಂತ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಸರಳ ವ್ಯಕ್ತಿತ್ವದ ನಾಯಕ. ದೇಶದ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಬ್ರಿಟಿಷರಿಂದ ಸ್ವಾತಂತ್ರ್ಯ ತಂದುಕೊಟ್ಟರು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಲಿಪ್ ಎಂ.ಎನ್., ಗಾಂಧೀಜಿ ಪರಿಸರದ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅವರ ಅಚಾರ, ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದರು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ಗಾಂಧೀಜಿ ಅವರ ಬಗ್ಗೆ ತಿಳಿಯಬೇಕಾದ ಸಾಕಷ್ಟು ವಿಷಯಗಳಿದ್ದು, ಅವರು ಪ್ರತಿಪಾದಿಸಿದ ಜೀವನ ಮೌಲ್ಯಗಳು, ಸತ್ಯ, ಅಹಿಂಸೆ ಹಾಗೂ ಆತ್ಮಬಲದ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದರು.

ಗಾಂಧೀಜಿ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮೋಹನ್ ಹಬ್ಬು, ಗಾಂಧೀಜಿ ಅವರು ಏರಿದ ಎತ್ತರಕ್ಕೆ ಯಾವ ನಾಯಕರೂ ಇದುವರೆಗೆ ಏರಿಲ್ಲ, ಏರಲೂ ಆಗುವುದಿಲ್ಲ ಎಂದು ತಿಳಿಸಿದರು.

ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಏರ್ಪಡಿಸಿಲಾದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ದಿಶಾ ಜೆ., ದೀಕ್ಷಾ ಮಂಜುನಾಥ ನಾಯ್ಕ, ಅಲೇಖಾ ಎಂ. ನಾಯ್ಕ, ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ ಸೃಷ್ಟಿ ಆರ್. ಪಟಗಾರ, ನಯನಾ ಕೃಷ್ಣಾ ಗೌಡ, ಸಂಜನಾ ಭಾಸ್ಕರ ನಾಯ್ಕ, ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಕಿರಣ ಧುಮಾಲಿ, ಅಂಕಿತಾ ಡಿ. ದಳವಿ, ರಕ್ಷಿತಾ ಆರ್. ಗೌಡ, ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ತರಬೇತಿ ನಿರತ ಐಎಎಸ್ ಅಧಿಕಾರಿ, ಝೂಪೀಶನ್ ಹಕ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್, ನಗರಸಭೆಯ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಜಿಲ್ಲಾ ವಾರ್ತಾಧಿಕಾರಿ ಬಿ.ಶಿವಕುಮಾರ್, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ ಹಾಗೂ ನಗರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಮತ್ತಿತರರು ಇದ್ದರು.

ಗಾಂಧೀ ಭಜನೆಗಳ ಕಾರ್ಯಕ್ರಮ ನಡೆಯಿತು, ನಂತರ ಎಂಜಿ ರಸ್ತೆಯಲ್ಲಿ ಶ್ರಮದಾನ ನಡೆಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಕರು ಯಾಕುಬ್ ಶೇಖ್ ಸ್ವಾಗತಿಸಿದರು, ನಗರಸಭೆ ವ್ಯವಸ್ಥಾಪಕ ಎನ್.ಎಂ. ಮೇಸ್ತ ವಂದಿಸಿದರು.