ದೇಶಕ್ಕೆ ಸ್ವಾತಂತ್ರ ತರುವಲ್ಲಿ ಗಣೇಶೋತ್ಸವ ಮಹತ್ವದ ಪಾತ್ರ: ಆರ್ ಎಸ್ಎಸ್ ವಕ್ತಾರ ರಾಜೇಶ್ ಪದ್ಮಾರ್

| Published : Sep 03 2025, 01:00 AM IST

ದೇಶಕ್ಕೆ ಸ್ವಾತಂತ್ರ ತರುವಲ್ಲಿ ಗಣೇಶೋತ್ಸವ ಮಹತ್ವದ ಪಾತ್ರ: ಆರ್ ಎಸ್ಎಸ್ ವಕ್ತಾರ ರಾಜೇಶ್ ಪದ್ಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಸಂಸ್ಕೃತಿ ಬಿಂಬಿಸುವ ಜತೆಗೆ ಅತ್ಯುತ್ತಮ ಹಾಗೂ ಮೊಟ್ಟಮೊದಲ ಸಾಹಿತ್ಯಗಳಾದ ಋಗ್ವೇದದ ಎರಡನೇ ಅಧ್ಯಾಯ ೨೩ನೇ ಶ್ಲೋಕದಲ್ಲಿ ಗಣಪತಿಯ ಉಲ್ಲೇಖವಾಗಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

1893ರಲ್ಲಿ ಅಮೆರಿಕಾದ ಚಿಕ್ಯಾಗೋ ನಗರದಲ್ಲಿ ಸ್ವಾಮಿ ವಿವೇಕಾನಂದರ ಭಾಷಣ ಒಂದು ಕಡೆ, ಮತ್ತೊಂದು ಕಡೆ ಲೋಕಮಾನ್ಯ ತಿಲಕ್ ಅವರು ಪುಣೆಯಲ್ಲಿ ಭಾರತದ ಸಮಾಜವನ್ನು ಪ್ರಭಾವಿಸುವ ಸಾರ್ವಜನಿಕ ಗಣೇಶೋತ್ಸವ ಆರಂಭ ಮಾಡಿದ್ದು, ಉತ್ಸವವನ್ನು ಜನರೆಲ್ಲ ಒಟ್ಟಾಗಿ ಸೇರಿ ಮಾಡುವಂತಾಗಿ ಬ್ರಿಟಿಷರನ್ನು ಓಡಿಸುವ ಪ್ರಕ್ರಿಯೆಗೆ ಮಹತ್ವದ ಮುನ್ನುಡಿ ದೊರೆಯಿತು ಎಂದು ಪ್ರಾಂತ ಪ್ರಚಾರ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ವಕ್ತಾರ ರಾಜೇಶ ಪದ್ಮಾರ್ ತಿಳಿಸಿದರು.

ಪಟ್ಟಣದ ಗಣಪತಿ ಪೆಂಡಾಲಿನ ಆವರಣದಲ್ಲಿ ಮಂಥನ ಬಳಗ ಆಯೋಜಿಸಿದ್ದ ಶ್ರೀ ಗಣೇಶೋತ್ಸವ ಸಾಮಾಜಿಕ ಸಂದೇಶವೆಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಬಿಂಬಿಸುವ ಜತೆಗೆ ಅತ್ಯುತ್ತಮ ಹಾಗೂ ಮೊಟ್ಟಮೊದಲ ಸಾಹಿತ್ಯಗಳಾದ ಋಗ್ವೇದದ ಎರಡನೇ ಅಧ್ಯಾಯ ೨೩ನೇ ಶ್ಲೋಕದಲ್ಲಿ ಗಣಪತಿಯ ಉಲ್ಲೇಖವಾಗಿದೆ. ಗಣ ಎಂದರೆ ಒಂದು ತಂಡ ಹಾಗೂ ಆ ತಂಡಕ್ಕೆ ಒಡೆಯ ಅಥವಾ ನಾಯಕನಾಗಿ ಯಾರು ಬರುತ್ತಾರೋ ಅವರು ಗಣಪತಿ ಆಗುತ್ತಾರೆ. ಒಂದು ತಂಡವಾಗಿ, ಸಮೂಹವಾಗಿರುವುದೋ ಅದಕ್ಕೆ ನೇತೃತ್ವ ಕೊಡುವವರೆಲ್ಲರೂ ಗಣಪತಿ ಅನ್ನುವ ಭಾವನೆ. ಗಣಪತಿ ಎಂಬುದು ಒಂದು ಪರಿಕಲ್ಪನೆ, ಅದಕ್ಕೆ ದೈವೀ ಸ್ವರೂಪ, ಶರೀರದ ಆಕಾರದ ಪರಿಕಲ್ಪನೆ ಒಂದು ಕಡೆ. ನಮ್ಮ ದೇಶದಲ್ಲಿ ಗಣಪತಿಯ ಆರಾಧನೆ ಅನೇಕ ವರ್ಷಗಳಿಂದ ಆಚರಣೆಯಲ್ಲಿದ್ದರೂ ಸಾರ್ವಜನಿಕರು ಒಟ್ಟಿಗೆ ಪೂಜೆ ಮಾಡುವ ಸ್ವರೂಪ ಬಂದಿದ್ದು ಸ್ವಾತಂತ್ರ ಸಂದರ್ಭದ ಒಂದು ಪ್ರಮುಖ ಘಟ್ಟ ೧೮೯೩ರಲ್ಲಿ. ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದರು, ಸಮಾಜದಲ್ಲಿ ಅನೇಕ ಬಿರುಕುಗಳು ಇದ್ದುದನ್ನು ಗಮನಿಸಿದ ಬ್ರಿಟಿಷರು, ಭಾರತೀಯರ ಒಡಕುಗಳು, ಒಗ್ಗಟ್ಟಿಲ್ಲದ ಸಮಾಜದ ಲಾಭ ಪಡೆದು ಭಾರತದ ಸಂಸ್ಕೃತಿಯನ್ನು ಬದಲಿಸಿದರು. ಜತೆಗೆ ಅನೇಕ ಸಂಸ್ಕಾರದ ಕೇಂದ್ರಗಳನ್ನು ಭಗ್ನ ಮಾಡಲು ಪ್ರಯತ್ನಿಸಿದರು ಮತ್ತು ನಮ್ಮ ಜನಜೀವನವನ್ನು ವ್ಯತ್ಯಾಸ ಮಾಡಲಿಕ್ಕೆ ಪ್ರಯತ್ನ ಮಾಡುತ್ತಾ, ಭಾರತೀಯ ದೇವರುಗಳನ್ನು ಅವಹೇಳನ ಮಾಡುತ್ತಾ, ಭಾರತ ಅಂದರೆ ಹಾವಾಡಿಗರ ದೇಶ, ಇಲ್ಲಿ ಅನಕ್ಷರಸ್ಥರಿದ್ದಾರೆ, ಬಡತನದಿಂದ ಸಾಯ್ತಾ ಇದ್ದಾರೆ ಎಂದು ಭಾರತೀಯರು ಹಾಗೂ ಭಾರತೀಯ ಸಂಸ್ಕೃತಿಯ ಕುರಿತು ಅನೇಕ ಕೆಟ್ಟ ವಿಚಾರಗಳನ್ನು ಬ್ರಿಟಿಷರು ಕಟ್ಟಿದ್ದರು ಎಂದು ತಿಳಿಸಿದರು.

ಭಾರತೀಯರೆಲ್ಲರೂ ಒಂದಾಗಬೇಕು ಎಂಬ ಕಾರಣಕ್ಕೋಸ್ಕರ ಗಣೇಶೋತ್ಸವವನ್ನು ಒಂದು ಸಾರ್ವಜನಿಕ ಉತ್ಸವವನ್ನಾಗಿ ಮಾಡಿದವರು ಲೋಕಮಾನ್ಯ ಗಂಗಾಧರ ತಿಲಕ್. ಗಣೇಶೋತ್ಸವದಿಂದ ಬ್ರಿಟಿಷರನ್ನು ಓಡಿಸುವ ಅವರ ಚಿಂತನೆಗಳಿಗೆ ಸಾರ್ವಜನಿಕರ ಸಹಕಾರ ಹಾಗೂ ಭಾಗವಹಿಸುವಿಕೆ ಪ್ರಾರಂಭವಾಯಿತು ಎಂದು ಸುಧೀರ್ಘವಾಗಿ ಮಾತನಾಡಿ ಶ್ರೀ ಗಣೇಶೋತ್ಸವದ ಸಾಮಾಜಿಕ ಸಂದೇಶ ತಿಳಿಸಿಕೊಟ್ಟರು.

ಶ್ರೀ ಮಹಾ ಗಣಪತಿ ಸೇವಾ ಸಮಿತಿಯ ಎಚ್.ಎಸ್.ಪುಟ್ಟಸೋಮಪ್ಪ, ವೈ.ವಿ.ಚಂದ್ರಶೇಖರ್, ಎಚ್.ಆರ್.ಶಿವ ಕುಮಾರ್, ಆರ್.ಬಿ.ಪುಟ್ಟೇಗೌಡ, ಆರ್‌ಎಸ್‌ಎಸ್‌ನ ಸ್ವಯಂ ಸೇವಕರು, ಗ್ರಾಮ ವಿಕಾಸ ತಂಡದ ಕಾರ್ಯಕರ್ತರು, ಹಿತಚಿಂತಕರು, ಶ್ರೀಸ್ವಾಮಿಯ ಭಕ್ತರು ಭಾಗವಹಿಸಿದ್ದರು.