ವಿದ್ಯಾಧಿಪತಿ ಗಣೇಶನ ಆರಾಧಿಸುವ ದಿನವಾದ ಸೋಮವಾರ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ತಮ್ಮ ಮನೆಗಳು, ಗಲ್ಲಿ, ಬೀದಿ, ದೇವಸ್ಥಾನಗಳಲ್ಲಿ, ವಿವಿಧ ಸಂಘಗಳಲ್ಲಿ ಪ್ರತಿಷ್ಠಾಪನೆ ಮಾಡಲು ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಖರೀದಿಸಿದರು. ಗಣೇಶನಿಗೆ ಜೈಕಾರಗಳ ಮೊಳಗಿಸುತ್ತ ಪ್ರತಿಷ್ಠಾಪನೆ ಮಾಡಿ ಭಕ್ತಿಭಾವದಿಂದ ಪೂಜಿಸಿ ಸಂಭ್ರಮಿಸಿದ್ದಾರೆ.
- ಭಜನೆ ಹಾಡು, ತಮಟೆ ಮೇಳದೊಂದಿಗೆ ಮನೆ, ದೇವಸ್ಥಾನಗಳ ಪ್ರವೇಶಿಸಿದ ಗಣಪತಿ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ವಿದ್ಯಾಧಿಪತಿ ಗಣೇಶನ ಆರಾಧಿಸುವ ದಿನವಾದ ಸೋಮವಾರ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ತಮ್ಮ ಮನೆಗಳು, ಗಲ್ಲಿ, ಬೀದಿ, ದೇವಸ್ಥಾನಗಳಲ್ಲಿ, ವಿವಿಧ ಸಂಘಗಳಲ್ಲಿ ಪ್ರತಿಷ್ಠಾಪನೆ ಮಾಡಲು ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಖರೀದಿಸಿದರು. ಗಣೇಶನಿಗೆ ಜೈಕಾರಗಳ ಮೊಳಗಿಸುತ್ತ ಪ್ರತಿಷ್ಠಾಪನೆ ಮಾಡಿ ಭಕ್ತಿಭಾವದಿಂದ ಪೂಜಿಸಿ ಸಂಭ್ರಮಿಸಿದರು.ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ತಾವು ಖರೀದಿಸಿದ ಗಣಪತಿಗಳ ಮೂರ್ತಿಗಳನ್ನು ಪ್ರಮುಖ ಬೀದಿಯಲ್ಲಿ ಸಾಂಪ್ರದಾಯಕ ಭಜನೆ ಹಾಡುಗಳನ್ನು ಹಾಡುತ್ತ, ತಮಟೆ, ಗಂಟೆ ಬಾರಿಸುತ್ತ ಮೆರವಣಿಗೆಯಲ್ಲಿ ಮನೆ, ದೇವಸ್ಥಾನಗಳಿಗೆ ತಂದರು. ಗಣೇಶ ಪ್ರತಿಷ್ಠಾಪನೆಗಾಗಿ ಮಂಟಪ ನಿರ್ಮಾಣ ಮಾಡಿ, ಬಾಳೆಕಂದು, ಮಾವಿನ ತೋರಣ, ಹೂವಿನ ಅಲಂಕಾರ, ವಿವಿಧ ಬಣ್ಣದ ಕಾಗದಗಳ ಚಿತ್ತಾರಗಳೊಂದಿಗೆ ಶೃಂಗರಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸಿ ಸಿಹಿ ಹಂಚಿದರು.
ಪಟ್ಟಣದಲ್ಲಿ ಜನರು ತಮ್ಮ ಮನೆಗಳಲ್ಲಿ ಚಿಕ್ಕ ಗಣೇಶ ಮೂರ್ತಿಯನ್ನು ಕೊಂಡು ಪ್ರತಿಷ್ಠಾಪನೆ ಮಾಡಿದರೆ, ದೇವಸ್ಥಾನ, ಗಲ್ಲಿ, ಗಲ್ಲಿಗಳಲ್ಲಿ ತರಹೇವಾರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಪಟ್ಟಣದ ಜಡೇಲಿಂಗೇಶ್ವರ ಕಲ್ಮಠ, ಪೇಟೆ ಬಸವೇಶ್ವರ, ಶಿವಲಿಂಗೇಶ್ವರ, ಮೈಲಾರಲಿಂಗೇಶ್ವರ, ವೀರಭದ್ರೇಶ್ವರ, ಆಂಜನೇಯ ಸ್ವಾಮಿ, ಬೇಡರ ಕಣ್ಣಪ್ಪ, ಅಮ್ಮನ ಮರದ ದೇವಿ, ಅಯ್ಯಪ್ಪಸ್ವಾಮಿ, ದುರ್ಗಮ್ಮ ದೇವಿ ದೇವಸ್ಥಾನಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.ತಾಲೂಕಿನ ಬಸವನಹಳ್ಳಿ ಗ್ರಾಮದ ಹೊರವಲಯದ ಶ್ರೀ ಬೆಟ್ಟ ಮಲ್ಲೇಶ್ವರ ದೇವಸ್ಥಾನದಲ್ಲಿ ವರ್ಷ ವರ್ಷದಂತೆ ಗೌರಿ ಗಣೇಶನ ಪ್ರತಿಷ್ಠಾಪನೆ ಮಾಡಿ, ಶಿವನ ಮೂರ್ತಿಗೆ ಜಲಾಭಿಷೇಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಹಾಮಂಗಳಾರತಿಯೊಂದಿಗೆ ವಿವಿಧ ಖಾದ್ಯಗಳನ್ನು ನೇವೈದ್ಯ ಮಾಡಿ ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗಿಸಿದ್ದಾರೆ.
ಬೆಳಗುತ್ತಿ ಗ್ರಾಮದ ರೈತರ ಬೀದಿಯಲ್ಲಿ ಚಿಣ್ಣರ ಬಳಗವು ಬೀದಿಯಲ್ಲಿ ಚಪ್ಪರ ಹಾಕಿ ತಾವು ಕೂಡಿಟ್ಟ ಹಣದಲ್ಲಿ ಗಣಪತಿ ಮೂರ್ತಿಯನ್ನು ಖರೀದಿಸಿ ಪ್ರತಿಷ್ಠಾಪನೆ ಮಾಡಿ ಪೂಜಿಸಿ ಸಿಹಿ ಹಂಚಿದರು. ಸಂಜೆ ಕೈ ಗಾಡಿಯಲ್ಲಿ ಗಣೇಶನ ಮೂರ್ತಿ ಕೂರಿಸಿ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಿ, ಮೂರ್ತಿಯನ್ನು ವಿಸರ್ಜನೆ ಮಾಡಿದರು.- - -
-ಚಿತ್ರ: ಬೆಳಗುತ್ತಿಯಲ್ಲಿ ಚಿಣ್ಣರ ಬಳಗ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ನಡೆಯಿತು.