ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿದ್ಯಾ ಗಣಪತಿ ವಿದ್ಯಾ ಮಂಡಳಿಯಿಂದ ಗೌರಿ-ಗಣೇಶ ಹಬ್ಬದ ಅಂಗವಾಗಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ವಿದ್ಯಾಗಣಪತಿ ವಿದ್ಯಾಮಂಡಳಿ ಪದಾಧಿಕಾರಿಗಳು ಹಾಗೂ ವಿವಿಧ ಕೋಮಿನ ಮುಖಂಡರ ಪೂರ್ವಭಾವಿ ಸಭೆ ನಡೆಯಿತು. ಮೊದಲಿಗೆ ಗಣೇಶ ಹಬ್ಬ ಆಚರಣೆ ಕುರಿತು ಸಭೆಯಲ್ಲಿ ಹಾಜರಿದ್ದ ಮಂಡಳಿಯ ಪದಾಧಿಕಾರಿಗಳು, ಮುಖಂಡರ ಸಲಹೆ, ಅನಿಸಿಕೆ, ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆಲಿಸಿದರು.
ವಿದ್ಯಾಗಣಪತಿ ವಿದ್ಯಾಮಂಡಳಿ ಪದಾಧಿಕಾರಿ ಬಾಲಸುಬ್ರಮಣ್ಯಂ ಮಾತನಾಡಿ, ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಇತಿಹಾಸ ಪ್ರಸಿದ್ಧ ವಿದ್ಯಾಗಣಪತಿಯ 61ನೇ ಪೂಜಾ ಮಹೋತ್ಸವವಾಗಿದೆ. 7 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾಗಣಪತಿಯ ಪೂಜಾ ಮಹೋತ್ಸವಕ್ಕಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಎಲ್ಲರ ಸಹಕಾರವು ಅಗತ್ಯವಾಗಿದೆ ಎಂದರು.ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಸಾಂಪ್ರದಾಯಿಕವಾಗಿ ಗಣಪತಿ ಹಬ್ಬ ಬೇರೆಲ್ಲಾ ಹಬ್ಬಗಳಿಗಿಂತ ದೊಡ್ಡ ಹಬ್ಬವಾಗಿದ್ದು, ಎಲ್ಲರು ಸೇರಿ ಸಂತೋಷ, ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಆಚರಿಸುವ ಹಬ್ಬವಾಗಿದೆ. ಕಳೆದ ಬಾರಿ ಪಟ್ಟಣದಲ್ಲಿ 991ಗಣಪತಿ ಪ್ರತಿಷ್ಠಾಪಿಸಿ ಯಾವುದೇ ತೊಂದರೆಯಾಗದಂತೆ ಸುಗಮವಾಗಿ ಹಬ್ಬ ಆಚರಿಸಲಾಗಿತ್ತು. ಅಲ್ಲದೆ ಈ ಬಾರಿ ಸರ್ಕಾರದ ನಿರ್ದೇಶನದನ್ವಯ ಪಿಒಪಿ ಗಣೇಶಮೂರ್ತಿ ಬಳಸಲು ಅವಕಾಶವಿಲ್ಲ. ಪರಿಸರಕ್ಕೆ ಪೂರಕವಾಗಿರುವ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನೆ ಪ್ರತಿಷ್ಠಾಪಿಸಬೇಕಾಗಿದೆ ಎಂದರು.
ಹಬ್ಬದ ಸಂದರ್ಭದಲ್ಲಿ ಗಣೇಶ ಪ್ರತಿಷ್ಠಾಪನೆ, ಕಾರ್ಯಕ್ರಮಗಳ ಆಯೋಜನೆಗೆ ಪರವಾನಗಿ ನೀಡಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ಏಕಗವಾಕ್ಷಿ ಸಮಿತಿ ರಚಿಸಲಾಗಿದ್ದು, ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕ್ರಮ ವಹಿಸಿ ಗಣೇಶ ಪ್ರತಿಷ್ಠಾಪನೆ ಮಾಡುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಸೇರಿದಂತೆ ಕಾರ್ಯಕ್ರಮಗಳನ್ನು ನಡೆಸುವ ಪರವಾನಗಿಗಳನ್ನು ನೀಡಲು ಕಂದಾಯ, ಲೋಕೋಪಯೋಗಿ, ಇಂಧನ, ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಗಣೇಶ ವಿಗ್ರಹ ಸ್ಥಾಪನೆಗೆ ಅಗತ್ಯವಿರುವ ಪರವಾನಗಿಯನ್ನು ಏಕಗವಾಕ್ಷಿ ಅಡಿಯಲ್ಲಿ ನೀಡಲು ತಾಲೂಕು ಮಟ್ಟದಲ್ಲಿ ವಿವಿಧ ಅಧಿಕಾರಿಗಳನ್ನೊಳಗೊಂಡ ಏಕಗವಾಕ್ಷಿ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಗಣಪತಿ ಪ್ರತಿಷ್ಠಾಪನೆ, ಕಾರ್ಯಕ್ರಮಗಳ ಆಯೋಜನೆ ಮಾಡುವ ಆಯೋಜಕರು ಆಯಾ ತಾಲೂಕು ವ್ಯಾಪ್ತಿಯಲ್ಲಿ ತಾಲೂಕು ಕಚೇರಿ ಅಥವಾ ಪೊಲೀಸ್ ಠಾಣೆಯಲ್ಲಿ ನಿಗದಿತ ನಮೂನೆಯನ್ನು ಪಡೆದು ಸದರಿ ಸಮಿತಿಯಿಂದ ಅನುಮತಿ ಪಡೆಯಬೇಕು. ಪ್ರತಿಷ್ಠಾಪನೆಗಾಗಿ ಅರ್ಜಿ ಹಾಕಿದ ಒಂದೆರಡು ದಿನದೊಳಗೆ ಅನುಮತಿ ನೀಡಲಾಗುತ್ತದೆ. ಅಲ್ಲದೆ ಗಣಪತಿ ವಿಸರ್ಜನೆ ದಿನದಂದು ಮೆರವಣಿಗೆ ಮಾರ್ಗದಲ್ಲಿ ಸ್ವಚ್ಛತೆ, ದೀಪಾಲಂಕಾರ ಸೇರಿದಂತೆ ಎಲ್ಲಾ ವ್ಯವಸ್ಥೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪೊಲೀಸ್, ನಗರಸಭೆ, ಚೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಪೂರ್ವಸಿದ್ಧತೆಗಳನ್ನು ಖಚಿತಪಡಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಬಾರಿ ದಸರಾ ಸಿದ್ಧತೆಗಳು ಹತ್ತಿರವಾಗುತ್ತಿರುವುದರಿಂದ ಮೊದಲ ಆದ್ಯತೆ ಮೇರೆಗೆ ಗಣಪತಿ ವಿಸರ್ಜನೆಗೆ ಪೊಲೀಸ್ ಬಂದೋಬಸ್ತ್ ಸೇರಿದಂತೆ ಅವಶ್ಯ ಸಿದ್ಧತಾ ಕೆಲಸಗಳನ್ನು ಪೂರ್ಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಗಣೇಶ ಮಂಡಳಿ ಶೀಘ್ರವಾಗಿ ಗಣಪತಿ ವಿಸರ್ಜನೆಗೆ ದಿನಾಂಕ ಗೊತ್ತುಪಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹೇಳಿದರು.ಇದೇ ವೇಳೆ ಮಾತನಾಡಿದ ಎಸ್ಪಿ ಡಾ.ಬಿ.ಟಿ. ಕವಿತ, ಪ್ರತಿದಿನ ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳಬೇಕು ಎಂದರು. ನಗರಸಭೆ ಸದಸ್ಯರಾದ ಅಬ್ರಾರ್ ಅಹಮದ್, ಖಲೀಲ್ ಉಲ್ಲಾ, ಜಿಪಂ ಸಿಇಒ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಗಿರಿಜಾ, ಮುಖಂಡರಾದ ಶಿವಣ್ಣ, ಮಂಜುನಾಥಗೌಡ, ಸುದರ್ಶನಗೌಡ, ಮಹೇಶ್, ವಿರಾಟ್ ಶಿವು, ರಮೇಶ್ ನಾಯ್ಕ, ಮದೀನಾ ಮಸೀದಿ ಅಧ್ಯಕ್ಷರಾದ ನಹೀಮುಲ್ಲಾ ಹಕ್, ಮೌಲಾನ ಮೊಕ್ತಾರ್ ಸಾಹೀಬ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.