ಇಂದಿನಿಂದ ಗಣೇಶೋತ್ಸವ ಸಂಭ್ರಮ...

| Published : Sep 07 2024, 01:33 AM IST

ಸಾರಾಂಶ

ಚೌತಿ ಹಿನ್ನೆಲೆಯಲ್ಲಿ ಭಾನುವಾರದ ಸಂತೆಯನ್ನು ಶನಿವಾರವೇ ಮಾಡಿದ್ದರಿಂದ ಸಂತೆ ಮಾರುಕಟ್ಟೆಯಲ್ಲಿ ಜನಜಂಗುಳಿಯೇ ಕಂಡುಬಂತು.

ಕಾರವಾರ: ಇಂದು(ಶನಿವಾರ) ಗಣೇಶೋತ್ಸವದ ಸಡಗರ. ಸಾರ್ವಜನಿಕ ಸ್ಥಳಗಳಲ್ಲಿ, ಮನೆ- ಮನೆಗಳಲ್ಲಿ ಗಣಪತಿ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಶ್ರದ್ಧೆ, ಭಕ್ತಿಯಿಂದ ವಿಘ್ನ ವಿನಾಯಕನ ಪೂಜೆಗೆ ಜಿಲ್ಲೆ ಅಣಿಯಾಗಿದೆ. ಗಣೇಶ ಹಬ್ಬದ ಹಿನ್ನೆಲೆ ಶನಿವಾರ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿತ್ತು. ಶನಿವಾರ ಗಣಪತಿ ಮೂರ್ತಿಗಳನ್ನು ಕೊಂಡೊಯ್ಯುವ ನೋಟ ಎಲ್ಲೆಡೆ ಕಂಡುಬಂತು. ಬೈಕು, ಕಾರು, ಆಟೋ, ಟೆಂಪೋ, ಲಾರಿ ಹೀಗೆ ಗಣಪತಿ ಮೂರ್ತಿಯ ಆಕಾರಕ್ಕೆ ಅನುಗುಣವಾಗಿ ವಾಹನಗಳಲ್ಲಿ ಕೊಂಡೊಯ್ಯಲಾಯಿತು. ಶನಿವಾರ ಬೆಳಗ್ಗೆ ವೇಳೆಗೆ ಬಹುತೇಕ ಮೂರ್ತಿಗಳು ಮಂಟಪಗಳಲ್ಲಿ ವಿರಾಜಮಾನವಾಗಲಿದೆ. ಹಲವೆಡೆ ಶನಿವಾರ ಮೆರವಣಿಗೆಯ ಮೂಲಕ ಗಣಪತಿ ವಿಗ್ರಹಗಳನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ. ಚೌತಿ ಹಿನ್ನೆಲೆಯಲ್ಲಿ ಭಾನುವಾರದ ಸಂತೆಯನ್ನು ಶನಿವಾರವೇ ಮಾಡಿದ್ದರಿಂದ ಸಂತೆ ಮಾರುಕಟ್ಟೆಯಲ್ಲಿ ಜನಜಂಗುಳಿಯೇ ಕಂಡುಬಂತು. ಹಾವೇರಿ, ಗದಗ, ಧಾರವಾಡ, ಬೆಳಗಾವಿ ಮತ್ತಿತರ ಕಡೆಯಿಂದ ಬಂದ ತರಕಾರಿಗಳ ಜತೆ ಸ್ಥಳೀಯ ಕಾಯಿಪಲ್ಲೆಗಳ ಮಾರಾಟವೂ ಜೋರಾಗಿತ್ತು. ಹೂವು- ಹಣ್ಣುಗಳು, ಬಗೆ ಬಗೆಯ ಪ್ಲಾಸ್ಟಿಕ್ ಹಾರಗಳು, ಅಲಂಕಾರಿಕ ವಸ್ತುಗಳು, ವಿದ್ಯುದ್ದೀಪಗಳ ಖರೀದಿಯಲ್ಲಿ ತೊಡಗಿದ್ದರು. ಗಣೇಶ ಮಂಟಪದಲ್ಲಿ ಫಲಾವಳಿಗಾಗಿ ಕಾಡಿನ ಪುಷ್ಪಗಳು, ಹಣ್ಣುಗಳೂ ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿದ್ದವು.ಕಾರವಾರದಲ್ಲಿ ಗಣೇಶೋತ್ಸವ ಮೆರುಗು ಪಡೆಯಬೇಕೆಂದರೆ ಗುಮಟೆಪಾಂಗ್ ಬೇಕೆ ಬೇಕು. ಗಣೇಶೋತ್ಸವಕ್ಕೆ ತಿಂಗಳಿಗೆ ಮುನ್ನವೇ ಗುಮಟೆ ಮಾರಾಟ ಶುರುವಾಗುತ್ತದೆ. ಶನಿವಾರವೂ ಗುಮಟೆಗಳ ಮಾರಾಟ ಕಂಡುಬಂತು. ಲಯಕ್ಕೆ ತಕ್ಕಂತೆ ಗುಮಟೆ ಬಾರಿಸುತ್ತ ಭಜನೆ ಹಾಡುವ ತಂಡಗಳಿಗೆ ಭಾರೀ ಬೇಡಿಕೆ ಇರುತ್ತದೆ. ಕೆಲ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗಿದೆ. ಭಜನೆ, ಭಕ್ತಿಸಂಗೀತ, ನೃತ್ಯ, ಯಕ್ಷಗಾನ ಹಾಗೂ ತಾಳಮದ್ದಳೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. 11 ದಿನಗಳ ಕಾಲ ಪ್ರತಿದಿನವೂ ಒಂದೊಂದು ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇನ್ನು ಸಾರ್ವಜನಿಕ ಅನ್ನಸಂತರ್ಪಣೆ ಸಹ ನಡೆಯಲಿದೆ. ಕಾಡುತ್ತಿರುವ ಮಳೆ...ಈ ಬಾರಿ ಗಣೇಶೋತ್ಸವಕ್ಕೆ ಮಳೆ ಅಡ್ಡಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೆ ಎರಡು ದಿನಗಳಿಂದ ಆಗಾಗ ಮಳೆ ಸುರಿಯುತ್ತಿದೆ. ಶುಕ್ರವಾರವೂ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಗಣೇಶೋತ್ಸವದ ಸಡಗರಕ್ಕೆ ಮಳೆ ಬ್ರೇಕ್ ಹಾಕಲಿದೆ ಎಂಬ ಮಾತುಗಳೇ ಎಲ್ಲರ ಬಾಯಿಂದ ಕೇಳಿಬರುತ್ತಿದೆ.