ಸಿಲಿಕಾನ್‌ ಸಿಟಿಯಲ್ಲಿ ಗಣೇಶೋತ್ಸವ ಸಂಭ್ರಮ

| Published : Aug 29 2025, 02:00 AM IST

ಸಾರಾಂಶ

ಸಿಲಿಕಾನ್‌ ಸಿಟಿಯಲ್ಲಿ ಗಣೇಶ ಚತುರ್ಥಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ತರಹೇವಾರಿ ಸ್ವರೂಪದ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರೆ, ಮನೆ ಮನೆಗಳಲ್ಲಿ ಭಕ್ತಿಯಿಂದ ಹಬ್ಬವನ್ನು ಸಂಭ್ರಮಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಲಿಕಾನ್‌ ಸಿಟಿಯಲ್ಲಿ ಗಣೇಶ ಚತುರ್ಥಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ತರಹೇವಾರಿ ಸ್ವರೂಪದ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರೆ, ಮನೆ ಮನೆಗಳಲ್ಲಿ ಭಕ್ತಿಯಿಂದ ಹಬ್ಬವನ್ನು ಸಂಭ್ರಮಿಸಲಾಯಿತು.

ಬುಧವಾರದಿಂದ ಆರಂಭವಾದ ಸಾರ್ವಜನಿಕ ಗಣೇಶೋತ್ಸವ ಮುಂದಿನ ಹದಿನೈದು-ಇಪ್ಪತ್ತೊಂದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಮನೆಗಳಲ್ಲಿ ಮೂರು, ಒಂದು ವಾರ ಗಣೇಶನನ್ನು ಪ್ರತಿಷ್ಠಾಪಿಸಿ ಬಳಿಕ ವಿಸರ್ಜನೆ ಮಾಡಲಾಗುತ್ತದೆ. ನಗರದ ಬೀದಿ ಬೀದಿಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯ ನಡೆಸಲಾಗುತ್ತಿದೆ.

ಬುಧವಾರದಂದು ಮನೆ ಮನೆಗಳಲ್ಲಿ ಮಾವಿನೆಲೆ, ಬಾಳೆಕಂದು, ಕಬ್ಬಿನ ಜಲ್ಲೆಯ ಅಲಂಕೃತ ಪ್ರತಿಷ್ಠಾಪಿಸಿದ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಷೋಡಶೋಪಚಾರವನ್ನು ಮಾಡಿ ನೀರು, ಹೂವು, ಹಣ್ಣು, ಧೂಪದ್ರವ್ಯ, ಗರಿಕೆ ಅರ್ಪಿಸಿ, ಏಕಾರತಿ ದೀಪ ಬೆಳಗಿ, ಕಳಶ ಪೂಜೆ ಮಾಡಲಾಯಿತು. ಸಿಹಿ ತಿನಿಸುಗಳು ಸೇರಿ 16 ವಿಧದ ವಸ್ತುಗಳನ್ನು ಗಣೇಶನಿಗೆ ಅರ್ಪಿಸಲಾಯಿತು.

ವಿವಿಧೆಡೆ ಗಣಹೋಮ, ಗಣಪತಿ ಶತನಾಮಾವಳಿ ಮಾಡಲಾಯಿತು. ಗರಿಕೆ, ಮೋದಕ, ಶಮಿಯ ಸಮಿಧೆ, ಅರಳು ಮತ್ತು ಎಳ್ಳು ಇವು ಇದರ ಆಹುತಿ. ‘ಬ್ರಾಹ್ಮಣಸ್ಪತಿ ಸೂಕ್ತ’ ಮತ್ತು ‘ಗಣಪತಿ ಅಥರ್ವಶೀರ್ಷ’ ಸೂಕ್ತಗಳನ್ನು ಪಠಿಸುವ ಮೂಲಕ ಈ ಯಾಗವನ್ನು ಮಾಡಲಾಯಿತು. ಹಬ್ಬದ ವಿಶೇಷವಾಗಿ ಮೋದಕ, ಚಕ್ಕುಲಿ, ಖರ್ಜಿಕಾಯಿ, ಕೋಡುಬಳೆ, ಹೋಳಿಗೆ ಸೇರಿ ಗಣೇಶನಿಗೆ ಪ್ರಿಯವಾದ ನಾನಾ ಖಾದ್ಯಗಳನ್ನು ಮಾಡಿ ನೈವೇದ್ಯ ಅರ್ಪಿಸಲಾಯಿತು.

ಹೊಸ ಧಿರಿಸು ತೊಟ್ಟ ಮಕ್ಕಳು ಚೌತಿಯನ್ನು ಸಂಭ್ರಮಿಸಿದರೆ ಮಹಿಳೆಯರು ಗಣೇಶನಿಗೆ ಇಷ್ಟವಾದ ನೈವೇದ್ಯ ಖಾದ್ಯ, ವಿಶೇಷ ತಿನಿಸುಗಳನ್ನು ಮಾಡಿದರು.

ದೇಗುಲಗಳಲ್ಲಿ ಭಕ್ತರ ದಂಡು

ನಗರದ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದಲ್ಲಿ ಚೌತಿದಿನವಾದ ಬುಧವಾರ ವಿಶೇಷ ಪೂಜೆ ನೆರವೇರಿತು. ಜಯನಗರ 4ನೇ ಬ್ಲಾಕ್‌ನಲ್ಲಿರುವ ಶಕ್ತಿ ಗಣಪತಿ ದೇವಸ್ಥಾನ, ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಪಂಚಮುಖಿ ಗಣೇಶ, ಕಸ್ತೂರ್‌ಬಾ ರಸ್ತೆಯಲ್ಲಿರುವ ಟ್ರಾಫಿಕ್ ಗಣೇಶ, ಕೋರಮಂಗಲದ ಟೆಕ್‌ ಗಣೇಶ ಎಂದು ಕರೆಯಲ್ಪಡುವ ಪ್ರಸನ್ನ ಗಣಪತಿ ದೇವಸ್ಥಾನ, ಕೆ.ಆರ್‌.ಪುರಂ ನಲ್ಲಿರುವ ಕಟ್ಟೆ ವಿನಾಯಕ ದೇವಸ್ಥಾನ, ಪದ್ಮನಾಭ ನಗರದ ವರಸಿದ್ಧಿ ಗಣಪತಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್‌ನಲ್ಲಿರುವ 108 ಗಣಪತಿ ದೇವಸ್ಥಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.

ತರಹೇವಾರಿ ಗಣಪ:

ನಗರದ ಕಬ್ಬನ್‌ಪೇಟೆಯಲ್ಲಿ ವಿಶೇಷ ಸ್ವರೂಪದ ಗಣಪತಿಯನ್ನು ರೂಪಿಸಿ ಪೂಜಿಸಲಾಗುತ್ತಿದೆ. ಪುರಿ ಜಗನ್ನಾಥ ಕೃಷ್ಣನ ಸ್ವರೂಪಿ ಗಣಪ, ಚಾಮುಂಡೇಶ್ವರಿ ಸ್ವರೂಪದ ಸಿಂಹಾರೂಢ ಗಣೇಶ, ನೃತ್ಯ ಗಣಪ, ನರಸಿಂಹ ಸ್ವಾಮಿ ಮಡಿಲಲ್ಲಿ ಕುಳಿತ ಗಣೇಶನನ್ನು ಸ್ಥಾಪಿಸಲಾಗಿದೆ. ಸಪ್ತ ಮಾತಾ ಗಣಪತಿ, ಶಿವಸ್ವರೂಪಿ ಗಜಾನನ, ತಿರುವಣ್ಣಮಲೈ ಗಣಪ, ಉಡುಪಿ ಕೃಷ್ಣ ಗಣಪತಿ, ಯಡಿಯೂರು ಸಿದ್ಧಲಿಂಗೇಶ್ವರ ಗಣಪ, ಗರುಡನ ಮೇಲೆ ಕುಳಿತ ವಿಷ್ಣು ಅವತಾರಿ, ಮಲ್ಲಿಗೆಯ ಕರಗ ಹೊತ್ತ ಗಣಪತಿಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ. ಯಶವಂತಪುರದ ಎನ್‌.ಆರ್‌.ಆರ್ಟ್ಸ್‌ನವರು ರೂಪಿಸಿದ್ದ ಆಪರೇಷನ್‌ ಸಿಂದೂರ ಗಣೇಶನನ್ನು ಚೆನ್ನೈನ ಸೇನಾ ಅಧಿಕಾರಿಯೊಬ್ಬರು ಮನೆಗೆ ಕೊಂಡೊಯ್ದಿದ್ದಾರೆ.