ಗುಂಪು ಘರ್ಷಣೆ : 27 ಜನರ ವಿರುದ್ಧ ಪ್ರಕರಣ, 10 ಜನರ ಬಂಧನ

| Published : May 25 2024, 12:51 AM IST

ಸಾರಾಂಶ

ಬೆಳಗಾವಿ ನಗರದಲ್ಲಿ ಕ್ರಿಕೆಟ್‌ ಆಡುವ ಸಮಯದಲ್ಲಿ ಯುವಕರ ನಡುವೆ ನಡೆದ ಜಗಳ ಎರಡು ಕೋಮುಗಳ ಮಧ್ಯೆ ಘರ್ಷಣೆ ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ಬೆಳಗಾವಿಕ್ರಿಕೆಟ್‌ ಆಡುವ ಸಮಯದಲ್ಲಿ ಯುವಕರ ನಡುವೆ ನಡೆದ ಜಗಳ ಎರಡು ಕೋಮುಗಳ ಮಧ್ಯೆ ಘರ್ಷಣೆಗೆ ಕಾರಣವಾಗಿದೆ. ಈ ಎರಡು ಗುಂಪುಗಳ ನಡುವಿನ ಘರ್ಷಣೆ, ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 27 ಜನರ ವಿರುದ್ಧ ನಗರದ ಶಹಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 10 ಜನರನ್ನು ಬಂಧಿಸಲಾಗಿದೆ.

ನಗರದ ಶಹಪುರ ಪ್ರದೇಶದ ಆಳವಣ ಗಲ್ಲಿಯಲ್ಲಿರುವ ನಂ.19ರ ಮರಾಠಿ ಶಾಲೆಯ ಮೈದಾನದಲ್ಲಿ ಯುವಕರು ಕ್ರಿಕೆಟ್‌ ಆಡುತ್ತಿದ್ದ ಸಮಯದಲ್ಲಿ ಕ್ಲುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಇನ್ನೀತರರು ಜಗಳ ಬಿಡಿಸಿ ಮನೆಗೆ ಕಳುಹಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವಕರು ತಮ್ಮ ಮನೆಯವರಿಗೆ ಈ ವಿಷಯ ತಿಳಿಸಿದ್ದಾರೆ. ಇದು ಬೀದಿಯಲ್ಲಿದ್ದ ಯುವಕರವರಗೂ ಬಂದು ತಲುಪಿದೆ. ಬಳಿಕ ಯುವಕರ ಒಂದು ಗುಂಪು ಬ್ಯಾಟ್‌, ಸ್ಪಂಪ್‌ ಕೈಯಲ್ಲಿ ಹಿಡಿದುಕೊಂಡಿದ್ದರೆ, ಮತ್ತೊಂದು ಗುಂಪು ಕಲ್ಲು ತೂರಾಟ, ಓರ್ವ ತಲ್ವಾರ ಹಿಡಿದು ಎದುರಿಗಿರುವ ಹಿಂದುಗಳ ಗುಂಪಿನತ್ತ ಪ್ರದರ್ಶಿಸಿ ಬಳಿಕ ಎಸೆದಿದ್ದಾನೆ. ಈ ಕುರಿತು ಸಿಸಿ ಕ್ಯಾಮೆರಾದಲ್ಲಿ ಕಲ್ಲು, ತಲ್ವಾರ್ ಎಸೆಯುವ ದೃಶ್ಯ ಸೆರೆಯಾಗಿದೆ. ಇದರಿಂದ ಭಯಭೀತರಾಗಿ ಹೊರಗೆ ಬಂದ ಹಿಂದು ಸಮುದಾಯದ ಮಹಿಳೆಯರು ಮಹಿಳಾ ಪೊಲೀಸ್ ಅಧಿಕಾರಿಗೆ ತಲ್ವಾರ್ ತಮ್ಮತ್ತ ಎಸೆದಿರೋದನ್ನು ತೋರಿಸಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಲಾಠಿ ಹಿಡಿದು ಬಂದ ಇಬ್ಬರೂ ಪೊಲೀಸರು‌ ಒಂದು ಕೈಯಲ್ಲಿ ಮೊಬೈಲ್‌ ಹಿಡಿದು ಕೃತ್ಯ‌ ಎಸಗಿದವರ ವಿಡಿಯೋ ಚಿತ್ರೀಕರಣ ಮಾಡುತ್ತ ಓಡಾಡುವ ಮೂಲಕ ಗಲಾಟೆಯಲ್ಲಿ ಸಿಲುಕಿ ಪರದಾಡಿದ್ದಾರೆ.

ಈ ಘಟನೆಯಲ್ಲಿ ಯುವಕರು ಮನಬಂದಂತೆ ಕಲ್ಲು ತೂರಾಟ ನಡೆಸಿದ್ದರಿಂದ ಕೆಲವು ಮನೆಯ ಕಿಟಕಿಗಳು, ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಅಲ್ಲದೆ ಪೊಲೀಸ್‌ ಪೇದೆ ಅಮರ ಎಂಬುವರು ಸೇರಿದಂತೆ ಕೆಲವರಿಗೆ ಕಲ್ಲಿನ ಏಟು ಬಿದ್ದಿದ್ದರಿಂದ 8 ಜನರನ್ನುತಕ್ಷಣ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶಹಪುರ ಠಾಣೆಯ ಪೊಲೀಸರು ಅಳವಣ ಗಲ್ಲಿಗೆ ದೌಡಾಯಿಸಿ ಘರ್ಷಣೆಯಲ್ಲಿ ತೊಡಗಿದ್ದ ಎರಡು ಗುಂಪುಗಳನ್ನು ಚದುರಿಸಿದ್ದರಿಂದ ಅನಾಹುತ ತಪ್ಪಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಗಲಾಟೆಯಲ್ಲಿ ಭಾಗಿಯಾದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಪುರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ತಲ್ವಾರ್ ಪ್ರದರ್ಶನ ಹಾಗೂ ಕಲ್ಲು ತೂರಾಟ ಸಂಬಂಧ ಅನ್ಯಕೋಮಿನ 14 ಜನರ ವಿರುದ್ಧ ಹಾಗೂ ಕ್ರಿಕೆಟ್ ‌ಆಡುವಾಗ ಚಂಡು ಮನೆ ಮುಂದೆ ಬಂದಿದಕ್ಕೆ ಮಕ್ಕಳ ಜತೆಗೆ ಜಗಳಮಾಡಿದ್ದಂತೆ ಹಿಂದು ಸಮುದಾಯ 13 ಜನರ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 323, 324, 307, 354, 504, 506, 153A ಹಾಗೂ 149 ಅಡಿ ಪ್ರಕರಣ ದಾಖಲಾಗಿವೆ.

ಮುಂಜಾಗ್ರತ ಕ್ರಮವಾಗಿ ಘಟನಾ ಸ್ಥಳಲ್ಲಿ ಮೂರು ಕೆಎಸ್‌ಆರ್‌ಪಿ ತುಕುಡಿ, ಮೂರು ಪೊಲೀಸ್ ಇನಸ್ಪೆಕ್ಟರ ಸೇರಿದಂತೆ ಬಂದೂಬಸ್ತ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ ನಗರ ವಿವಿಧ ಕಡೆಗಳಲ್ಲಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಸೇರಿದಂತೆ ಹೆಚ್ಚಿನ ಬಂದೋಬಸ್ತ ಕಲ್ಪಿಸಲಾಗಿದೆ.