ಸಾರಾಂಶ
ರಾಜ್ಯದ ಗರ್ಭಿಣಿಯನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಕರೆದೊಯ್ದು ಭ್ರೂಣ ಹತ್ಯೆ ಮಾಡಿಸುವ ಪ್ರಕರಣವನ್ನು ಆರೋಗ್ಯ ಇಲಾಖೆಯು ರಹಸ್ಯ ಕಾರ್ಯಾಚರಣೆ ಮೂಲಕ ಭೇದಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಗರ್ಭಿಣಿಯನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಕರೆದೊಯ್ದು ಭ್ರೂಣ ಹತ್ಯೆ ಮಾಡಿಸುವ ಪ್ರಕರಣವನ್ನು ಆರೋಗ್ಯ ಇಲಾಖೆಯು ರಹಸ್ಯ ಕಾರ್ಯಾಚರಣೆ ಮೂಲಕ ಭೇದಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಇಲಾಖೆ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು, ಮಳವಳ್ಳಿಯ 30 ವರ್ಷದ ಮಹಿಳೆಗೆ 3 ಜನ ಹೆಣ್ಣುಮಕ್ಕಳಿದ್ದರು. ಆಕೆಯ ಕಡೆಯವರು ಅಕ್ರಮವಾಗಿ ಏಜೆಂಟ್ ಮೂಲಕ ಲಿಂಗ ಪತ್ತೆ ಮಾಡಿಸಿದ್ದಾರೆ. ಹೆಣ್ಣು ಶಿಶುವೆಂದು ತಿಳಿದುಬಂದ ಬಳಿಕ ಐದು ತಿಂಗಳ ಗರ್ಭಿಣಿಯಾಗಿದ್ದರೂ ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಭ್ರೂಣ ಹತ್ಯೆಗೆ ಮುಂದಾಗಿದ್ದಾರೆ. ಇದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತಕ್ಷಣ ರಹಸ್ಯ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕಟುಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಪುರಾವೆಗಳ ಆಧಾರದ ಮೇಲೆ, ಹೆಚ್ಚಿನ ತನಿಖೆ ಮತ್ತು ಅಗತ್ಯ ಕಾನೂನು ಕ್ರಮಕ್ಕಾಗಿ ಮಾಹಿತಿ ಮತ್ತು ಪ್ರಕರಣದ ವಿವರಗಳನ್ನು ಆಂಧ್ರಪ್ರದೇಶದ ರಾಜ್ಯ ನೋಡಲ್ ಅಧಿಕಾರಿಯಾದ ಡಾ। ಕೆ.ವಿ.ಎನ್.ಎಸ್. ಅನಿಲ್ ಕುಮಾರ್ ಅವರಿಗೆ ಹಸ್ತಾಂತರಿಸಲಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಸರ್ಕಾರ ಇಲಾಖೆಯಿಂದ ಎಲ್ಲ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜ ಈ ಬಗ್ಗೆ ಜಾಗೃತರಾಗುವುದು, ಸಾಮಾಜಿಕ ಬದಲಾವಣೆ ಆಗುವುದು ಮುಖ್ಯ ಎಂದರು.