ಸಾರಾಂಶ
ಹುಬ್ಬಳ್ಳಿ: ಶಾಂತವಾಗಿದ್ದ ವಾಣಿಜ್ಯನಗರಿಯಲ್ಲಿ ಮತ್ತೆ ಗ್ಯಾಂಗ್ ವಾರ್ ಶುರುವಾಗಿದೆ. ಸೆಟ್ಲಮೆಂಟ್‌ನ ಒಂದು ಗುಂಪು ಅಂತ್ಯಸಂಸ್ಕಾರ ಮುಗಿಸಿಕೊಂಡು ಬರುತ್ತಿದ್ದ ವೇಳೆ ಇನ್ನೊಂದು ಗುಂಪು ದಾಳಿ ನಡೆಸಿದೆ. ಈ ವೇಳೆ ಎರಡು ಗುಂಪುಗಳು ತಲ್ವಾರ್, ಕಬ್ಬಿಣದ ರಾಡ್‌ಗಳಿಂದ ಬುಧವಾರ ಮಂಟೂರ ರಸ್ತೆಯಲ್ಲಿ ಪರಸ್ಪರ ಮಾರಾಮಾರಿ ನಡೆಸಿವೆ. ಶಾಮ ಜಾಧವ ಸಹಚರರು ಹಾಗೂ ದಾವುದ್ ಬ್ರದರ್ಸ್ ನಡುವೆ ಈ ಗ್ಯಾಂಗ್ ವಾರ್ ನಡೆದಿದೆ ಎಂದು ಹೇಳಲಾಗಿದೆ.
ಹತ್ತಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ವಾರ್ ನಡೆದಿದೆ ಎಂದು ಹೇಳಲಾಗಿದೆ. ಎರಡೂ ಗಂಪುಗಳಲ್ಲಿ ತಲಾ ಇಬ್ಬರು ಗಾಯಗೊಂಡು ಚಿಕಿತ್ಸೆಗೆ ಕೆಎಂಸಿಆರ್‌ಗೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಹರ ಠಾಣೆ ಪೊಲೀಸರು ಎರಡೂ ಗುಂಪುಗಳ ಕಡೆಯಿಂದ ತಲಾ ಐವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಈ ಕುರಿತಾಗಿ ಎರಡೂ ಕಡೆಗಳಿಂದ ದೂರು, ಪ್ರತಿ ದೂರುಗಳು ದಾಖಲಾಗಿವೆ. ಸುದ್ದಿ ತಿಳಿದು ಸಕಾಲಕ್ಕೆ ಪೊಲೀಸರು ದೌಡಾಯಿಸಿದ್ದರಿಂದ ಹೆಚ್ಚಿನ ಘರ್ಷಣೆಗೆ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.ಒಂದು ಗುಂಪಿನ ಸದಸ್ಯರು ಮಂಟೂರ ರಸ್ತೆಯ ಸ್ಮಶಾನದಿಂದ ಅಂತ್ಯಸಂಸ್ಕಾರ ಮುಗಿಸಿಕೊಂಡು ವಾಪಸ್ ಬರುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಇನ್ನೊಂದು ಗುಂಪಿನ ಸದಸ್ಯರು, ಹೊರಟಿದ್ದವರನ್ನು ಗುರಾಯಿಸಿ ನೋಡಿದ್ದಾರೆ ಎನ್ನಲಾಗಿದೆ. ಇದರಿಂದ ಎರಡೂ ಗುಂಪಿನ ಸದಸ್ಯರು ಪರಸ್ಪರ ಜಟಾಪಟಿ ನಡೆದು ವಿಕೋಪಕ್ಕೆ ತಿರುಗಿತು. ಈ ಹಂತದಲ್ಲಿ ಕೆಲವರು ತಲ್ವಾರ್, ಕಬ್ಬಿಣದ ರಾಡ್ ಹಾಗೂ ಕೈಗೆ ಸಿಕ್ಕ ಗಾಜಿನ ಬಾಟಲ್ ಹಾಗೂ ಇತರ ವಸ್ತುಗಳೊಂದಿಗೆ ಪರಸ್ಪರರ ಮೇಲೆ ಹೊಡೆದಾಡಿಕೊಂಡಿದ್ದಾರೆ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಎರಡೂಕಡೆಯವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಪೊಲೀಸರು ಮೊಕ್ಕಾಂ ಹೂಡಿದ್ದು, ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ.ಪೊಲೀಸ್ ಕಮಿಷನರೇಟ್ ವತಿಯಿಂದ ಆಗಾಗ ರೌಡಿಗಳ ಪರೇಡ್ ಮಾಡುತ್ತಲೇ ಇದೆ. ಆದರೂ ಬುಧವಾರ ಗ್ಯಾಂಗ್ ವಾರ್ ನಡೆದಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಪೊಲೀಸ್ ಕಮಿಷನರೇಟ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.