ಸಾರಾಂಶ
ರಾಮಮೂರ್ತಿ ನವಲಿ
ಗಂಗಾವತಿ:ಗಂಗಾವತಿ ನಗರಸಭೆಯ ನಾಲ್ಕು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಾಗಿ ತಿಂಗಳು ಕಳೆಯುತ್ತಾ ಬಂದರೂ ಈ ವರೆಗೂ ಅವರಿಗೆ ಅಧಿಕಾರ ನೀಡಿಲ್ಲ. ಹೀಗಾಗಿ ನಿತ್ಯ ಅವರು ನಗರಸಭೆಗೆ ಆಗಮಿಸಿ ಅವರಿವರ ಚೇಂಬರ್‌ನಲ್ಲಿ ಕುಳಿತುಕೊಂಡು ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ.
ಆ. 18ರಂದು ಗಂಗಾವತಿ ನಗರಸಭೆಗೆ 4 ಸ್ಥಾಯಿ ಸಮಿತಿ ರಚಿಸಿ ಅಧ್ಯಕ್ಷರ ಆಯ್ಕೆ ಮಾಡುವಂತೆ ಪೌರಾಡಳಿತ ಇಲಾಖೆ ಸೂಚಿಸಿದ ಹಿನ್ನಲೆ ಅಧ್ಯಕ್ಷರ ಆಯ್ಕೆ ಮಾಡಲಾಗಿತ್ತು. ತೆರಿಗೆ ನಿರ್ಧರಣೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಸ್ಮಾನ್, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಗೆ ವಾಸುದೇವ ನವಲಿ, ಪಟ್ಟಣ ಯೋಜನೆ ಮತ್ತು ಪುರೋಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ರಮೇಶ ಚೌಡ್ಕಿ, ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಉಮೇಶ ಸಿಂಗನಾಳ ಆಯ್ಕೆಯಾಗಿದ್ದರು. ಆದರೆ, 15 ದಿನ ಕಳೆದರು ಇವರಿಗೆ ಅಧಿಕಾರ ನೀಡದೆ ಇರುವುದು ಮಾತ್ರ ಮರೀಚಿಕೆಯಾಗಿ ಉಳಿದಿದೆ.ಕಚೇರಿಯೇ ಗತಿ:
ವಿವಿಧ ಸಮಿತಿಗೆ ಆಯ್ಕೆಯಾಗಿರುವ ಅಧ್ಯಕ್ಷರು ನಿತ್ಯ ಕಚೇರಿಗೆ ಒಂದೇ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಅವರಿಗೆ ಅಧಿಕಾರ ನೀಡದೆ ಇರುವುದರಿಂದ ಯಾವ ಕಡಿತಗಳನ್ನು ಪರಿಶೀಲಿಸಲು, ರುಜು ಮಾಡಲು ಸಹ ಆಗುತ್ತಿಲ್ಲ. ಹೀಗಾಗಿ ದಿನವೀಡಿ ಕೊಠಡಿಯಲ್ಲೇ ಕುಳಿತುಕೊಂಡು ಮನೆಗೆ ತೆರಳುತ್ತಾರೆ. ಆಯ್ಕೆಯಾದ ಅಧ್ಯಕ್ಷರು ನಿತ್ಯ ನಗರಸಭೆಯಿಂದ ನಡೆಯುವ ಯೋಜನೆ, ಕಾಮಗಾರಿ, ವಾರ್ಡ್‌ಗಳ ಭೇಟಿ ಸೇರಿದಂತೆ ತೆರಿಗೆ ಸಂಗ್ರಹಿಸುವ ಕುರಿತು ಚರ್ಚಿಸಬೇಕು. ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ಖರ್ಚು ಹಾಗೂ ತೆರಿಗೆ ಸಂಗ್ರಹದ ಬಗ್ಗೆ ನೋಡಿಕೊಳ್ಳಬೇಕು. ಆದರೆ ಅಧಿಕಾರವಿಲ್ಲದೆ ಇರುವುದರಿಂದ ಈ ಕುರಿತು ಪ್ರಶ್ನಿಸುತ್ತಿಲ್ಲ. ಇದರಿಂದ ನಗರಸಭೆಗೆ ನಷ್ಟವಾಗುತ್ತಿದೆ.ನಾಮಾಕಾವಸ್ತೆ:ವಿವಿಧ ಸ್ಥಾಯಿ ಸಮಿತಿಗೆ ಆಯ್ಕೆಯಾದ ಅಧ್ಯಕ್ಷರ ವಿರುದ್ಧ ನಗರಸಭೆಯಲ್ಲಿ ಅಪಸ್ವರವಿದೆ. ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ನಮ್ಮನ್ನು ಆಯ್ಕೆ ಮಾಡುವ ಮೂಲಕ ಮೂಗಿಗೆ ತುಪ್ಪ ಸವರಿದ್ದಾರೆಂಬ ಮಾತುಗಳು ಸಹ ಕೇಳಿ ಬರುತ್ತಿವೆ. ನಗರಸಭೆ ಸದಸ್ಯರ ಅಧಿಕಾರಾವಧಿ ಕೇವಲ 2 ತಿಂಗಳಿದ್ದು ಇವರ ಅಧಿಕಾರವೂ ಅಷ್ಟೇ ಇರುತ್ತದೆ. ಆದರೂ ಅಧಿಕಾರ ನೀಡದೆ ಇರುವುದರಿಂದ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.
ನಾಲ್ಕು ಸ್ಥಾಯಿ ಸಮಿತಿಗೆ ಆಯ್ಕೆಯಾದ ಅಧ್ಯಕ್ಷರ ಬಗ್ಗೆ ಗೊಂದಲಗಳಿವೆ. ಈ ಕುರಿತು ಶಾಸಕರು, ಪೌರಾಯುಕ್ತರೊಂದಿಗೆ ಚರ್ಚಿಸಿ ಎರಡ್ಮೂರು ದಿನಗಳಲ್ಲಿ ಅಧಿಕಾರ ನೀಡಲಾಗುವುದು.ಹೀರಾಬಾಯಿ ನಾಗರಾಜ್ ಸಿಂಗ್ ನಗರಸಭೆ ಅಧ್ಯಕ್ಷರುಸ್ಥಾಯಿ ಸಮಿತಿಗೆ ಆಯ್ಕೆಯಾದ ಅಧ್ಯಕ್ಷರಿಗೆ ಅಧಿಕಾರ ನೀಡುವ ಹಕ್ಕು ಅಧ್ಯಕ್ಷರಿಗೆ ಇರುತ್ತದೆ. ಅವರೊಂದಿಗೆ ಮಾತನಾಡಿ ಅಧಿಕಾರ ಹಸ್ತಾಂತರಿಸಲಾಗುವುದು.
ವಿರೂಪಾಕ್ಷಮೂರ್ತಿ ಪೌರಾಯುಕ್ತನಾಲ್ಕು ಸ್ಥಾಯಿ ಸಮಿತಿಗಳು ಮಹಾನಗರ ಪಾಲಿಕೆ ಮತ್ತು ನಗರ ಪಾಲಿಕೆಗಳಲ್ಲಿ ಮಾತ್ರವಿದ್ದು ನಗರ ಸಭೆ ಮತ್ತು ಪುರಸಭೆಗಳಲ್ಲಿ ಪೌರಾಡಳಿತ ಆಕ್ಟ್ ಪ್ರಗತಿಯಾಗಿಲ್ಲ. ಇದರಿಂದ ನಮಗೆ ಅಧಿಕಾರ ನೀಡಿಲ್ಲ. ನಿತ್ಯ ಚೇಂಬರ್‌ನಲ್ಲಿ ಕುಳಿತುಕೊಂಡು ಹೋಗುವ ಕೆಲಸವಾಗಿದೆ.ಉಸ್ಮಾನ್ ಅಧ್ಯಕ್ಷ, ತೆರಿಗೆ ನಿರ್ಧರಣೆ ಹಣಕಾಸು ಸ್ಥಾಯಿ ಸಮಿತಿ