ಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಾಲ್ಕನೇ ಬಾರಿಗೆ ಮುಂದಕ್ಕೆ ಹಾಕಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ವಕೀಲ ಚೆನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪನಾಯಕ ಸ್ಪರ್ಧಿಸಿದ್ದರು.

ಗಂಗಾವತಿ: ಇಲ್ಲಿಯ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಾಲ್ಕನೇ ಬಾರಿಗೆ ಮುಂದಕ್ಕೆ ಹಾಕಲಾಗಿದೆ.

ಒಟ್ಟು 12 ನಿರ್ದೇಶಕರಲ್ಲಿ 6 ನಿರ್ದೇಶಕರು ಹಾಜರಾಗಿದ್ದರು. ಇನ್ನು 6 ನಿರ್ದೇಶಕರು ಅನಾರೋಗ್ಯ ಕಾರಣ ನೀಡಿ, ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿದ್ದರು. ಕೋರಂ ಭರ್ತಿಯಾಗದ ಕಾರಣ ಚುನಾವಣೆ ಮುಂದೂಡಲಾಗಿದೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಾಣಾಧಿಕಾರಿ ಶಿವಾಜಿ ಘೋಷಿಸಿದರು.

4ನೇ ಬಾರಿ ಮುಂದಕ್ಕೆ: ಮೊದಲನೇ ಬಾರಿಗೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಯಿತು. ಎರಡನೇ ಬಾರಿಗೂ 6 ಸದಸ್ಯರು ಇದ್ದರೂ ಚುನಾವಣೆ ನಡೆಯಲಿಲ್ಲ. ಮೂರನೇ ಬಾರಿಗೆ ತಡೆಯಾಜ್ಞೆ ತರಲಾಗಿತ್ತು. ನಾಲ್ಕನೇ ಬಾರಿ ಅಂದರೆ ಡಿ. 15ರಂದು ನಡೆಯಬೇಕಾಗಿದ್ದ ಚುನಾವಣೆಯಲ್ಲಿ ಕೇವಲ 6 ನಿರ್ದೇಶಕರು ಇದ್ದು, ಇನ್ನು 6 ನಿರ್ದೇಶಕರು ಗೈರುಹಾಜರಾದ ಹಿನ್ನೆಲೆಯಲ್ಲಿ ಮುಂದೂಡಲಾಯಿತು.

ಜಿದ್ದಾಜಿದ್ದಿ: ಅಧ್ಯಕ್ಷ ಸ್ಥಾನಕ್ಕೆ ವಕೀಲ ಚೆನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪನಾಯಕ ಸ್ಪರ್ಧಿಸಿದ್ದರು. ಅವರಿಬ್ಬರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಆದರೆ ಕೋರಂ ಭರ್ತಿಯಾಗದೇ ಮುಂದೂಡುವಂತಾಯಿತು.

ಸೂಪರ್ ಸೀಡ್ ಸಾಧ್ಯತೆ: ಸಹಕಾರಿ ಇಲಾಖೆಯ ಕಾಯ್ದೆ 29 ಸಿ ಪ್ರಕಾರ ನಿರ್ದೇಶಕರು ಸತತ ಮೂರು ಸಭೆಗೆ ಹಾಜರಾಗದೆ ಇರುವುದು ಮತ್ತು ಚುನಾವಣೆಯಲ್ಲಿ ನಿರ್ದೇಶಕರ ಸಂಖ್ಯೆ ಕೋರಂಕ್ಕಿಂತ ಕಡಿಮೆ ಇದ್ದಿದ್ದರಿಂದ ಸೂಪರ್ ಸೀಡ್ ಆಗುವ ಸಾಧ್ಯತೆ ಇದೆ. ಈಗಾಗಲೇ ಬಹುತೇಕವಾಗಿ ನಿರ್ದೇಶಕರು ಗೈರು ಹಾಜರಾಗಿದ್ದಲ್ಲದೆ ಚುನಾವಣೆ ಸತತ ನಾಲ್ಕು ಬಾರಿ ಮೂಂದೂಡಿರುವ ಲೆಕ್ಕಾಚಾರದ ಮೇಲೆ ಸೂಪರ್ ಸೀಡ್ ಆಗುವ ಸಾಧ್ಯತೆ ಇದೆ.

ಗಂಗಾವತಿ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಸತತ ಮೂರು ಬಾರಿ ನಿರ್ದೇಶಕರು ಗೈರು ಹಾಜರಾಗಿದ್ದಾರೆ ಮತ್ತು ನಾಲ್ಕು ಬಾರಿ ಚುನಾವಣೆ ಮೂಂದೂಡಿರುವ ಬಗ್ಗೆ ಸಹಕಾರಿ ಇಲಾಖೆಯ ಜಂಟಿ ನಿರ್ದೇಶಕರಿಗೆ ವರದಿ ಕಳುಹಿಸಿಕೊಡಲಾಗುತ್ತದೆ. ಈ ವರದಿ ಆದರಿಸಿ ಸದಸ್ಯತ್ವ ರದ್ದು ಮಾಡಬಹುದು, ಇಲ್ಲವೆ ಸಂಸ್ಥೆ ಸೂಪರ್ ಸೀಡ್ ಮಾಡಬಹುದು ಎಂದು ಸಿಡಿಒ ಹಾಗೂ ಚುನಾವಣಾಧಿಕಾರಿ ಶಿವಾಜಿ ಹೇಳುತ್ತಾರೆ.

ಚುನಾವಣೆ ಮುಂದೂಡಲು ಕುತಂತ್ರ: ಚೆನ್ನಪ್ಪ ಮಳಗಿ ಆಕ್ರೋಶಗಂಗಾವತಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಮುಖಂಡರೊಬ್ಬರು ಬಿಜೆಪಿಯವರನ್ನು ಬೆಂಬಲಿಸದೆ ಬೇರೆಯವರಿಗೆ ಬೆಂಬಲ ನೀಡಿದ್ದಾರೆ ಎಂದು ವಕೀಲ ಹಾಗೂ ಟಿಎಪಿಸಿಎಂಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚೆನ್ನಪ್ಪ ಮಳಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಆವರಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಮಿತಿಗೆ ಸತತವಾಗಿ ನಾಲ್ಕು ಬಾರಿ ಚುನಾವಣೆಗೆ ಕರೆದಿದ್ದರೂ ಒಂದಿಲ್ಲ ಒಂದು ನೆಪ ಮತ್ತು ಅಧಿಕಾರಿಗಳಿಗೆ ಒತ್ತಡ ಹಾಕಿ ಮುಂದೂಡುತ್ತ ಬಂದಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ 6 ನಿರ್ದೇಶಕರು ಹಾಜರಾಗಿದ್ದು, ಇನ್ನು 6 ನಿರ್ದೇಶಕರು ವೈದ್ಯಕೀಯ ಸುಳ್ಳು ಪ್ರಮಾಣ ಪತ್ರ ತಂದು ಚುನಾವಣೆಗೆ ಗೈರಾಗಿದ್ದಾರೆ. ಚುನಾವಣೆ ಮುಂದೂಡುವುದಕ್ಕೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರು ಕಾರಣರಾಗಿದ್ದಾರೆ. ಅಧಿಕಾರಿಗಳಿಗೆ ಒತ್ತಡ, ಸುಳ್ಳು ವೈದ್ಯಕೀಯ ಪ್ರಮಾಣಪತ್ರ ನೀಡಿ ಕುತಂತ್ರ ನಡೆಸಿದ್ದಾರೆ. ಸುಳ್ಳು ವೈದ್ಯಕೀಯ ಪ್ರಮಾಣಪತ್ರ ನೀಡಿದ ವೈದ್ಯರ ವಿರುದ್ಧ ದೂರು ಸಲ್ಲಿಸಲಾಗುತ್ತದೆ ಎಂದು ಹೇಳಿದರು.ಸಂಸ್ಥೆಯಲ್ಲಿ ಕೋಟ್ಯಂತರ ರು. ಭ್ರಷ್ಟಾಚಾರ ನಡೆದಿದ್ದು ಬಹಿರಂಗಗೊಂಡಿದೆ. ಇದನ್ನು ಮುಚ್ಚಿಹಾಕುವ ಹುನ್ನಾರ ನಡೆದಿದ್ದು, ಚುನಾವಣೆ ಮುಂದೂಡುವುದಕ್ಕೆ ಅದೇ ಕಾರಣ ಎಂದು ಚೆನ್ನಪ್ಪ ಮಳಗಿ ದೂರಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರೂರು, ತಿಪ್ಪೇರುದ್ರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ, ನಗರಸಭೆ ಮಾಜಿ ಸದಸ್ಯ ವೀರಭದ್ರಪ್ಪನಾಯಕ, ಚಂದ್ರಶೇಖರ ಅಕ್ಕಿ, ಕಾಶೀನಾಥ ಚಿತ್ರಗಾರ, ಕನಕಪ್ಪ ಕನಕಗಿರಿ ಇದ್ದರು.