ರಸ್ತೆಗಳ ನಿರ್ವಹಣೆಗೆ ಗ್ಯಾಂಗ್‌ಮನ್‌ ನೇಮ

| Published : Aug 02 2024, 12:55 AM IST

ಸಾರಾಂಶ

ಸುಗಮ ಸಂಚಾರ, ಸೂಕ್ತ ನಿರ್ವಹಣೆ ಮತ್ತು ರಸ್ತೆಗಳ ಒತ್ತುವರಿ ತಡೆಯಲು ರಾಜ್ಯ ಸರ್ಕಾರ ಮಹತ್ವದ ಯೋಜನೆಯೊಂದನ್ನು ಸಿದ್ಧಪಡಿಸಿದೆ. ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ ನೂತನ ಕಾರ್ಯಕ್ರಮ ರೂಪಿಸಿದ್ದು, ಶೀಘ್ರ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸುಗಮ ಸಂಚಾರ, ಸೂಕ್ತ ನಿರ್ವಹಣೆ ಮತ್ತು ರಸ್ತೆಗಳ ಒತ್ತುವರಿ ತಡೆಯಲು ರಾಜ್ಯ ಸರ್ಕಾರ ಮಹತ್ವದ ಯೋಜನೆಯೊಂದನ್ನು ಸಿದ್ಧಪಡಿಸಿದೆ. ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ ನೂತನ ಕಾರ್ಯಕ್ರಮ ರೂಪಿಸಿದ್ದು, ಶೀಘ್ರ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಪ್ರಾಯೋಗಿಕವಾಗಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆಗೆ ದಿನಗೂಲಿ ಪದ್ಧತಿಯಂತೆ ಗ್ಯಾಂಗ್‌ಮೆನ್‌ಗಳನ್ನು ನಿಯೋಜಿಸಿ ಹೊಸ ಪ್ರಯೋಗಕ್ಕೆ ಲೋಕೋಪಯೋಗಿ ಇಲಾಖೆ ಕೈ ಹಾಕಿದೆ. ಈ ದಿಸೆಯಲ್ಲಿ ರಾಜ್ಯದ ಪ್ರತಿ ವಿಭಾಗದ ರಸ್ತೆಗಳ ಒಟ್ಟು ಜಾಲದ ಉದ್ದ ಆಧರಿಸಿ ಪ್ರತಿ 30 ಕಿಮೀಗೆ ಒಬ್ಬ ರಸ್ತೆ ನಿರ್ವಾಹಕರ (ಗ್ಯಾಂಗ್‌ಮೆನ್) ನೇಮಕಾತಿಗೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ.

ವಾರ್ಷಿಕ ನಿರ್ವಹಣೆ ಕಾಮಗಾರಿಗಳ ಪ್ಯಾಕೇಜ್‌ನಲ್ಲಿಯೇ ಈ ರಸ್ತೆ ನಿರ್ವಾಹಕರನ್ನು ನಿಯೋಜಿಸಲು ಸುತ್ತೋಲೆ ಹೊರಡಿಸಿದ್ದು, ಈ ಯೋಜನೆಯಡಿ ನಿಯೋಜನೆಗೊಂಡ ನಿರ್ವಾಹಕರ ವೇತನ ಪಾವತಿಯನ್ನು ವಾರ್ಷಿಕ ನಿರ್ವಹಣೆ ಗುತ್ತಿಗೆಯಲ್ಲಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ.

ರಸ್ತೆ ನಿರ್ವಾಹಕರ ನೇಮಕದೊಂದಿಗೆ ಇಲಾಖೆಯ ಈ ಹಿಂದಿನ ಮೈಲಿಗೂಲಿ ಪದ್ಧತಿಗೆ ಮರುಜೀವ ನೀಡುವ ಉದ್ದೇಶ ಹೊಂದಲಾಗಿದೆ. ಇದರೊಂದಿಗೆ ನಿರುದ್ಯೋಗಿಗಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ.

ಇಲಾಖೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜನಿಯರ್ ಹುದ್ದೆಗಳ ಸ್ಥಳ ನಿಯುಕ್ತಿಯನ್ನು ಸಮಾಲೋಚನೆ (ಕೌನ್ಸೆಲಿಂಗ್) ಮೂಲಕ ನಡೆಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಲೋಕೋಪಯೋಗಿ ಇಲಾಖೆ ಇದೀಗ ಮತ್ತೊಂದು ಈ ಹೊಸ ಪದ್ಧತಿ ಜಾರಿಗೆ ತರಲು ಉತ್ಸುಕತೆ ತೋರಿದೆ.

ಆಯಾ ಕಾಮಗಾರಿಯ ಏಜೆನ್ಸಿಗಳು ಟೆಂಡರ್‌ಗಿಟ್ಟ ಮೊತ್ತದಲ್ಲಿಯೇ ಕಾರ್ಮಿಕ ಕಾಯ್ದೆ ಅನುಸಾರ ರಸ್ತೆ ನಿರ್ವಾಹಕರನ್ನು ನಿಯೋಜಿಸಿಕೊಳ್ಳಬೇಕು. ಪ್ರತಿ ವಿಭಾಗದಲ್ಲಿ ನೇಮಿಸಿಕೊಳ್ಳುವ ರಸ್ತೆ ನಿರ್ವಾಹಕರ ಒಟ್ಟು ಸಂಖ್ಯೆ ಆಧರಿಸಿ ಎಸ್ಸಿ, ಎಸ್ಟಿಗಳಿಗೆ ಶೇಕಡಾವಾರು ಮೀಸಲಾತಿ ಕಲ್ಪಿಸಲು ಆದೇಶಿಸಲಾಗಿದೆ. 2023-24ನೇ ಏಕರೂಪ ದರಪಟ್ಟಿಯಂತೆ ಒಬ್ಬ ರಸ್ತೆ ನಿರ್ವಾಹಕನಿಗೆ ಪ್ರತಿ ತಿಂಗಳು ₹23,348 ವೇತನ ಪಾವತಿಸಲು ಸೂಚಿಸಲಾಗಿದೆ.

ಸದಾ ಒಂದಿಲ್ಲೊಂದು ವಿಭಿನ್ನ ಮತ್ತು ವಿಶಿಷ್ಟ ಆಲೋಚನೆಗಳ ಮೂಲಕ ಗಮನ ಸೆಳೆಯುವ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಈ ಹೊಸ ಆಲೋಚನೆಯ ಹಿಂದಿರುವ ರೂವಾರಿಯಾಗಿದ್ದಾರೆ.ನೇಮಕದಿಂದಾಗುವ ಲಾಭಗಳೇನು?:

ರಸ್ತೆ ನಿರ್ವಾಹಕ (ಗ್ಯಾಂಗ್‌ಮೆನ್) ನೇಮಕದಿಂದ ಸುಗಮ ಸಂಚಾರ, ಸೂಕ್ತ ನಿರ್ವಹಣೆ ಮತ್ತು ರಸ್ತೆಗಳ ಒತ್ತುವರಿಗೆ ಬ್ರೇಕ್ ಬೀಳಲಿದೆ. ಗ್ಯಾಂಗ್‌ಮೆನ್‌ಗಳು ರಸ್ತೆ ನಿರ್ಮಾಣ, ಸುಧಾರಣೆ, ರಸ್ತೆ ಅಗೆತ ಮತ್ತಿತರ ಅನಧಿಕೃತ ಚಟುವಟಿಕೆಗಳ ಮೇಲೆ ನಿಗಾ ವಹಿಸಲಿದ್ದಾರೆ. ವರ್ಷವಿಡೀ ತೆಗ್ಗು-ಗುಂಡಿ ಭರ್ತಿ ಮಾಡುವುದು, ಮಳೆಗಾಲ ಅವಧಿಯ ಅಡಚಣೆ ತೆರವುಗೊಳಿಸುವುದು, ಪ್ರತಿದಿನ ಶಾಖಾಧಿಕಾರಿಗಳು ಇವರ ಸೇವಾವಧಿಯ ವರದಿ ಸಂಗ್ರಹಿಸಲಿದ್ದಾರೆ.

ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ ಪ್ರತಿವರ್ಷ ಅನುದಾನ ಒದಗಿಸಲಾಗುತ್ತಿದೆ. ಅದರನ್ವಯ ಈಗಾಗಲೇ ಪ್ರತಿ ವಿಭಾಗ ಹಂತದಲ್ಲಿ ಅವಶ್ಯಕವಾಗಿ ನಿರ್ವಹಣೆ ಮಾಡಬಹುದಾದ ರಸ್ತೆಗಳನ್ನು ಗುರುತಿಸಿ, ಅಂದಾಜು ಪಟ್ಟಿ ತಯಾರಿಸಿ, ಗುತ್ತಿಗೆ ನೀಡುವ ಪ್ರಕ್ರಿಯೆಗೆ ಕ್ರಮ ವಹಿಸಲಾಗಿದೆ. ಹಾಗಾಗಿ ಸದ್ಯದಲ್ಲೇ ಗ್ಯಾಂಗ್‌ಮೆನ್‌ಗಳು ರಸ್ತೆ ಕಾವಲಿಗೆ ಇಳಿಯಲಿದ್ದಾರೆ.

ರಾಜ್ಯದ ಪ್ರತಿ ವಿಭಾಗದ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ರಸ್ತೆ ನಿರ್ವಾಹಕರ(ಗ್ಯಾಂಗ್‌ಮೆನ್)ನ್ನು ನೇಮಿಸಿಕೊಳ್ಳಲಾಗುವುದು. ಇದರೊಂದಿಗೆ ಸುಗಮ ಸಂಚಾರ, ಸೂಕ್ತ ನಿರ್ವಹಣೆ ಮತ್ತು ರಸ್ತೆಗಳ ಒತ್ತುವರಿ ತಡೆಯುವ ಉದ್ದೇಶ ಹೊಂದಲಾಗಿದೆ.

- ಸತೀಶ ಜಾರಕಿಹೊಳಿ, ಸಚಿವರು ಲೋಕೋಪಯೋಗಿ ಇಲಾಖೆ