ಸಾರಾಂಶ
ಗಂಗೊಳ್ಳಿ ಬಂದರಿನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಹಲವು ದೋಣಿಗಳು ಸುಟ್ಟು ಅಪಾರ ನಷ್ಟವಾಗಿದ್ದು, ಅದಕ್ಕೆ ಗರಿಷ್ಠಮಟ್ಟದ ಪರಿಹಾರ ನೀಡುವುದಾಗಿ ಮೀನುಗಾರಿಕಾ ಸಚಿವ ಮಾಂಕಳ ವೈದ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಬೈಂದೂರು ತಾಲೂಕಿನ ಗಂಗೊಳ್ಳಿ ಬಂದರಿನಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಯಲ್ಲಿ ಬೋಟು, ಸಣ್ಣ ದೋಣಿ, ಬಲೆ, ವಾಹನ ಇತ್ಯಾದಿಗಳಿಗೆ ಸುಮಾರು 12 ಕೋಟಿ ರು.ಗಳಷ್ಟು ನಷ್ಟವಾಗಿದ್ದು, ಸರ್ಕಾರ ಗರಿಷ್ಠ ಪರಿಹಾರವನ್ನು ನೀಡಲು ನಿರ್ಧರಿಸಿದೆ ಎಂದು ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ತಿಳಿಸಿದ್ದಾರೆ.ಅವರು ಭಾನುವಾರ, ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನೇರವಾಗಿ ಮೀನುಗಾರಿಕ ಇಲಾಖೆಯಿಂದ ಪರಿಹಾರ ಕೊಡಲು ಅವಕಾಶ ಇಲ್ಲ, ಈ ಹಿಂದೆ ಕೊಟ್ಟ ಉದಾಹರಣೆ ಇಲ್ಲ. ಆದ್ದರಿಂದ ಮುಖ್ಯಮಂತ್ರಿಯವರಿಗೆ ವಿನಂತಿಸಿದ್ದು, ಅವರು 1 ಕೋಟಿ ರು. ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಅದಕ್ಕೆ ಮೀನುಗಾರಿಕಾ ಇಲಾಖೆಯಿಂದ 1 ಕೋಟಿ ರು.ಗಳನ್ನು ಸೇರಿಸಿ ಪರಿಹಾರ ನೀಡಲು ತೀರ್ಮಾನಿಸಿದ್ದೇವೆ. ಇಂತಹ ಪ್ರಥಮ ಪ್ರಕರಣವಾದ್ದರಿಂದ ಇಲಾಖಾ ನಿಯಮ ಮೀರಿ ಪರಿಹಾರ ನೀಡಲು ಸಾಧ್ಯವಿಲ್ಲ. ಸರ್ಕಾರ ಮೀನುಗಾರರ ಜೊತೆಗಿದೆ ಎಂದರು.ಹಿಜಾಬ್ ವಿವಾದ: ಸಿಎಂ ನಿಭಾಯಿಸುತ್ತಾರೆಸಿಎಂ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧ ಹಿಂಪಡೆಯುವ ಹೇಳಿಕೆಗೆ ಬಿಜೆಪಿಯ ತೀವ್ರ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ವೈದ್ಯ, ಬಿಜೆಪಿಯವರು ಸುಳ್ಳು ಹೇಳುವುದು ಅಥವಾ ವಿರೋಧ ಮಾಡುವುದು ಬಿಟ್ಟರೆ ಅವರೇನು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ನನಗಂತೂ ಗೊತ್ತಿಲ್ಲ. ಹಾಗಾಗಿ ಯಾರ ಬಾಯಿಯಿಂದ ವ್ಯತ್ಯಾಸ ಆಗಿ ಮಾತು ಬರುತ್ತದೆ ಎಂದು ಹುಡುಕುತ್ತಿರುತ್ತಾರೆ ಅಥವಾ ವ್ಯತ್ಯಾಸ ಮಾಡಲಿಕ್ಕೆ ಪ್ರಯತ್ನ ಮಾಡುತ್ತಾರೆ. ಅವರ ವಿರೋಧದ ಬಗ್ಗೆ ನಾವು ಯಾರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಸಿಎಂ ಬಹಳ ಮೇಧಾವಿಗಳು, ಅವರು ಅದನ್ನು ಸರಿಯಾಗಿ ನಿಭಾಯಿಸುತ್ತಾರೆ ಎಂದರು.