.ಸಮ ಸಮಾಜ ನಿರ್ಮಾಣಕ್ಕೆ ಸುತ್ತೂರು ಮಠ ಶ್ರಮಿಸುತ್ತಿದೆ

| Published : Nov 05 2024, 12:43 AM IST

ಸಾರಾಂಶ

ಸುತ್ತೂರು ಶ್ರೀಮಠ ಶಿಕ್ಷಣ, ಆರೋಗ್ಯ, ಅನ್ನ ದಾಸೋಹದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ

- ಮಂಗಳೂರು ಜಿಲ್ಲಾ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ

ಫೋಟೋ- 3ಎಂವೈಎಸ್ 5- ಮೈಸೂರಿನ ಜೆಎಸ್ಎಸ್ ಹಿರಿಯ ವಿದ್ಯಾರ್ಥಿಗಳ ಸಂಘ ಭಾನುವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿಯನ್ನು ಜಿಲ್ಲಾ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ಉದ್ಘಾಟಿಸಿ, ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಎಲ್. ರೇವಣ್ಣ ಸಿದ್ದಯ್ಯ, ಐಎಎಸ್ ಅಧಿಕಾರಿ ಶಿಲ್ಪಾ, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಮೊದಲಾದವರು ಇದ್ದಾರೆ.---ಕನ್ನಡಪ್ರಭ ವಾರ್ತೆ ಮೈಸೂರುಎಲ್ಲರಿಗೂ ಸಮಾನ ಅವಕಾಶ ದೊರೆತು ಸಮಾನರಾಗಿ ಬದುಕುವ ಸನ್ನಿವೇಶ ಸೃಷ್ಟಿಸಬೇಕೆಂಬ ತತ್ತ್ವದ ಅಡಿ ಸುತ್ತೂರು ಶ್ರೀಮಠ ಶಿಕ್ಷಣ, ಆರೋಗ್ಯ, ಅನ್ನ ದಾಸೋಹದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಮಂಗಳೂರು ಜಿಲ್ಲಾ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ಹೇಳಿದರು.ನಗರದ ಗಂಗೋತ್ರಿ ಬಡಾವಣೆಯ ಶ್ರೀ ಶಿವರಾತ್ರಿ ರಾಜೇಂದ್ರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜೆಎಸ್ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಸುತ್ತೂರು ಮಠದ ರಾಜೇಂದ್ರ ಶ್ರೀಗಳು ತ್ರಿವಿಧ ದಾಸೋಹದ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆ ಮೂಲಕ ಬಸವಾದಿ ಶರಣರು 12 ಶತಮಾನದಲ್ಲೇ ಅನುಷ್ಠಾನಗೊಳಿಸಿದ ಆಶಯವನ್ನು ಶ್ರೀಮಠ ಮುಂದುವರಿಸುತ್ತಿದೆ. ಇಂತಹ ಮಹತ್ಕಾರ್ಯಕ್ಕೆ ರಾಜೇಂದ್ರ ಶ್ರೀಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾಗಿ ಅವರು ಹೇಳಿದರು.ಸಂವಿಧಾನದ ಪ್ರಕಾರ ಸಹಿಷ್ಣುತೆ, ಸಹಬಾಳ್ವೆ ಆಚರಣೆಗೆ ಬರಬೇಕಿದ್ದರೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ನೀಡುವ ಇಚ್ಛಾಶಕ್ತಿ ಬೇಕು. ಅಂತಹ ಇಚ್ಛಾಶಕ್ತಿ ಶಿವರಾತ್ರಿ ರಾಜೇಂದ್ರ ಶ್ರೀಗಳಿಗೆ ಇತ್ತು ಎಂದರು.ಶಿವರಾತ್ರಿ ರಾಜೇಂದ್ರ ಶ್ರೀಗಳಿಗೆ ಸಮಾಜದ ಬಗ್ಗೆ ದೂರದೃಷ್ಟಿ ಇತ್ತು. ಈ ಕಾರಣಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮಿಕ ಸಂಸ್ಕಾರದಲ್ಲಿ ಸುತ್ತೂರು ಮಠ ಬೃಹದಾಕಾರವಾಗಿ ಬೆಳೆದಿದೆ. ಗ್ರಾಮೀಣ ಭಾಗದ ಬಡವರು ಮತ್ತು ಅಶಕ್ತರಿಗೆ ಶಿಕ್ಷಣ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಬೆಳೆಸಿದೆ ಎಂದು ಹೇಳಿದರು.ದುಡಿದು ತಿನ್ನುವುದನ್ನು ಕಾಯಕ ತತ್ವ್ವ ಕಲಿಸುತ್ತದೆ. ಅಲ್ಲದೇ ದುಡಿದು ನೀವು ಮಾತ್ರ ತಿನ್ನದೇ ಸಮಾಜದಲ್ಲಿ ಸಮಾನತೆಗಾಗಿ ಕೊಡುಗೆ ನೀಡಿ ಎಂದು ಶರಣರು ಹೇಳಿದ್ದಾರೆ. ಇಂತಹ ಶ್ರೇಷ್ಠ ಸಂದೇಶಗಳನ್ನು ಸುತ್ತೂರು ಮಠ ಅಕ್ಷರಶಃ ಪಾಲಿಸಿಕೊಂಡು ಬರುತ್ತಿದೆ ಎಂದು ಅವರು ತಿಳಿಸಿದರು.ಜೆಎಸ್ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಲ್. ರೇವಣ್ಣ ಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು. ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಐಎಎಸ್ ಅಧಿಕಾರಿ ಶಿಲ್ಪಾ, ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಇದ್ದರು.