ಮಳೆರಾಯನ ಮುನಿಸಿನಿಂದ ಈ ಬಾರಿಯ ಬೇಸಿಗೆ ಮತ್ತಷ್ಟು ಭೀಕರವಾಗಿದೆ. ಸೂರ್ಯ ಕೆಂಡ ಉಗುಳಿದಂತೆ ಭಾಸವಾಗುತ್ತಿದ್ದು, ಬೆಳಗ್ಗೆ 11 ಗಂಟೆಯಿಂದಲೇ ತಾಪಮಾನದ ಬಿಸಿ ಅನುಭವ ನೀಡುತ್ತಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಬಿಸಿಲೂರು ಖ್ಯಾತಿಯ ಬಳ್ಳಾರಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನಕ್ಕೆ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಒಂದೆಡೆ ಬರಗಾಲದ ಭೀಕರತೆ ನಡುವೆ ಬಿಸಿಲಿನ ಪ್ರಖರತೆ ಹೆಚ್ಚಳದಿಂದ ಜನಜೀವನ ಕಂಗಾಲಾಗಿದೆ.

ಮಳೆರಾಯನ ಮುನಿಸಿನಿಂದ ಈ ಬಾರಿಯ ಬೇಸಿಗೆ ಮತ್ತಷ್ಟು ಭೀಕರವಾಗಿದೆ. ಸೂರ್ಯ ಕೆಂಡ ಉಗುಳಿದಂತೆ ಭಾಸವಾಗುತ್ತಿದ್ದು, ಬೆಳಗ್ಗೆ 11 ಗಂಟೆಯಿಂದಲೇ ತಾಪಮಾನದ ಬಿಸಿ ಅನುಭವ ನೀಡುತ್ತಿದೆ. ಬಳ್ಳಾರಿಯಲ್ಲಿ 38ರಿಂದ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ಸಾರ್ವಜನಿಕರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲೇರುವ ಮುನ್ನವೇ ಕೆಲಸ ಮುಗಿಸಿಕೊಂಡು ಮನೆ ಸೇರುವಂತಾಗಿದೆ.

ಪ್ರತಿವರ್ಷ ಯುಗಾದಿ ಹೊತ್ತಿಗೆ ಉಷ್ಣಾಂಶ ತೀವ್ರತೆ ಕಂಡು ಬರುತ್ತಿತ್ತು. ಆದರೆ, ಈ ಬಾರಿ ಯುಗಾದಿಗೂ 15-20 ದಿನಗಳ ಮುಂಚೆಯೇ ನೆತ್ತಿ ಸುಡಲಾರಂಭಿಸಿದೆ. ಒಂದೆಡೆ ಮಳೆ ಅಭಾವ, ಮತ್ತೊಂದೆಡೆ ತಾಪಮಾನ ಏರಿಕೆಯಿಂದಾಗಿ ಅಂತರ್ಜಲ ಬತ್ತಲಾರಂಭಿಸಿದೆ.

ಬೇರೆ ಜಿಲ್ಲೆಗಳಿಂದ ನೀರಿಗಾಗಿ ವಲಸೆ ಬರುವ ಜಾನುವಾರುಗಳ ಪಾಡು ಹೇಳತೀರದಾಗಿದೆ. ಇನ್ನು ಎರಡು ತಿಂಗಳು ಬಿಸಿಲಿನ ತಾಪ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜನಜೀವನ ಮತ್ತಷ್ಟು ಸಂಕಷ್ಟಕ್ಕೀಡಾಗುವ ಸಾಧ್ಯತೆಯಿದೆ.

ಜನರ ವಿಶ್ರಾಂತಿಗಿಲ್ಲ ಜಾಗ:

ನಾನಾ ಕೆಲಸಕ್ಕೆಂದು ಜಿಲ್ಲಾ ಕೇಂದ್ರಕ್ಕೆ ಬರುವ ಜನರಿಗೆ ವಿಶ್ರಾಂತಿ ಪಡೆಯಲು ಪರದಾಡುವ ಸ್ಥಿತಿಯಿದೆ. ನಗರದ ಉದ್ಯಾನಗಳು ನಿರ್ವಹಣೆಯಿಲ್ಲದೆ ಬಣಗುಟ್ಟುತ್ತಿದ್ದು, ಸಾರ್ವಜನಿಕರು ಅಲ್ಲಲ್ಲಿ ಕಂಡು ಬರುವ ಗಿಡ-ಮರಗಳ ಕೆಳಗೆ ಕುಳಿತು ವಿಶ್ರಾಂತಿ ಪಡೆಯುವ ದೃಶ್ಯಗಳು ಕಂಡು ಬರುತ್ತವೆ.

ನಗರದ ರಾಯಲ್ ವೃತ್ತ, ತಾಳೂರು ರಸ್ತೆ ಮತ್ತಿತರ ಪ್ರಮುಖ ವೃತ್ತಗಳ ಮೂಲಕ ಹಾದು ಹೋಗುವ ದ್ವಿಚಕ್ರ ವಾಹನ ಸವಾರರು ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪುದೀಪ ಬೆಳಗಿದಾಗ ತುಸು ಹೊತ್ತು ಕಾಯುವುದು ಸಹ ಕಷ್ಟದಾಯಿಕ ಎನಿಸಿದೆ. ಟ್ರಾಫಿಕ್ ಸಿಗ್ನಲ್ ಇರುವ ಕಡೆ ತಾತ್ಕಾಲಿಕವಾಗಿಯಾದರೂ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಕಳೆದ ಅನೇಕ ವರ್ಷಗಳಿಂದ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಆದರೆ, ಈವರೆಗೆ ಕ್ರಮವಾಗಿಲ್ಲ.

ಇನ್ನು ನಗರ ಪ್ರದೇಶದ ಕಟ್ಟಡ ಕಾರ್ಮಿಕರು, ಗ್ರಾಮೀಣ ಪ್ರದೇಶದ ಕೃಷಿಕರ ಪರಿಸ್ಥಿತಿ ಹೇಳತೀರದಾಗಿದೆ. ನೆತ್ತಿ ಮೇಲೆ ಕೆಂಡ ಸುರಿದ ಅನುಭವವಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಅವರದ್ದು. ಪುಟ್ಟ ಮಕ್ಕಳೊಂದಿಗೆ ನಗರ ಪ್ರದೇಶಕ್ಕೆ ಕಟ್ಟಡ ಕೆಲಸಕ್ಕೆಂದು ಬರುವ ಮಹಿಳಾ ಕಾರ್ಮಿಕರು, ತಾವು ಕೆಲಸ ನಿರ್ವಹಿಸುವ ಜಾಗದ ಬಳಿಯೇ ಮರದ ನೆರಳಲ್ಲಿ ಮಕ್ಕಳನ್ನು ಮಲಗಿಸಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ದೃಶ್ಯಗಳು ಜೀವ ಹಿಂಡುತ್ತವೆ.

ತಂಪು ಪಾನೀಯಗಳಿಗೆ ಮೊರೆ:

ಸೂರ್ಯನೇ ಉಸ್ತುವಾರಿ ವಹಿಸಿದಂತಿರುವ ಬಳ್ಳಾರಿಯ ಬಿಸಿಲಿನ ತಾಪದಿಂದ ಪಾರಾಗಲು ಸಾರ್ವಜನಿಕರು ತಂಪು- ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಮಣ್ಣಿನ ಮಡಕೆಗಳ ಖರೀದಿಗೆ ಜನರು ಮುಗಿ ಬೀಳುತ್ತಿದ್ದಾರೆ. ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಮಣ್ಣಿನ ಮಡಕೆಗಳ ವ್ಯಾಪಾರಿಗಳಿಗೆ ಬಳ್ಳಾರಿ ಬಿಸಿಲು ವರವಾಗಿ ಪರಿಣಮಿಸಿದ್ದು, ಮಡಕೆಗಳ ಮಾರಾಟಕ್ಕೆಂದು ಕಳೆದ ಎರಡು ತಿಂಗಳ ಹಿಂದೆಯೇ ವ್ಯಾಪಾರಿಗಳು ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಏರ್ ಕೂಲರ್‌ಗಳ ಖರೀದಿಯೂ ಜೋರಾಗಿದೆ.

ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆಯೇ ನಗರದ ಪ್ರಮುಖ ಬೀದಿಗಳು ಜನರಿಲ್ಲದೆ ಬಣಗುಡುತ್ತಿದ್ದು, ವ್ಯಾಪಾರ ವಹಿವಾಟಕ್ಕೂ ಸಮಸ್ಯೆಯಾಗಿ ಪರಿಣಮಿಸಿದೆ.

ಪ್ರಸ್ತುತ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆವರೆಗೆ ಪ್ರಖರ ಬಿಸಿಲು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ತಾಯಂದಿರು, ವಯೋವೃದ್ಧರು ಮತ್ತು ಚಿಕ್ಕ ಮಕ್ಕಳು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಮನವಿ ಮಾಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಅಥವಾ ಮನೆಯಿಂದ ಹೊರಗಡೆ ಬರಬೇಕಾದ ಅನಿರ್ವಾಯತೆ ಇದ್ದಾಗ ನೀರಿನ ಬಾಟಲಿ, ಛತ್ರಿ ಮತ್ತು ಮಕ್ಕಳಿಗೆ ಆದಷ್ಟು ತಲೆಯ ಮೇಲೆ ನೀರಿನಿಂದ ಒದ್ದೆ ಮಾಡಿದ ಬಟ್ಟೆಯನ್ನು ಹಾಕಬೇಕು. ಆದಷ್ಟು ನೆರಳಿನಲ್ಲಿ ಇರುವಂತೆ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ಈ ಬಾರಿ ಮಳೆಯಿಲ್ಲ:  ಭೀಕರ ಬಿಸಿಲಿದೆ. ವೃದ್ಧರು, ಮಕ್ಕಳು ಹೊರಗೆ ಬರಬಾರದು. ಮಧ್ಯಾಹ್ನ ಶ್ರಮದಾಯಕ ಹೊರಾಂಗಣ ಚಟುವಟಿಕೆ ಕೈಗೊಳ್ಳಬಾರದು. ಚಪ್ಪಲಿ ಧರಿಸದೇ ಹೊರ ಹೋಗಬಾರದು. ದೇಹ ನಿರ್ಜಲೀಕರಣಗೊಳ್ಳಲು ಆಸ್ಪದ ನೀಡಬಾರದು ಎನ್ನುತ್ತಾರೆ ಡಿಎಚ್‌ಒ ಡಾ.ವೈ.ರಮೇಶಬಾಬು.