ಸಾರಾಂಶ
ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಮಧ್ಯೆ ಆರಂಭವಾದ ಗಲಾಟೆ ಯುವಕನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಮಧ್ಯೆ ಆರಂಭವಾದ ಗಲಾಟೆ ಯುವಕನ ಸಾವಿನಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಸುಶಾಂತ ಸುಭಾಷ ಪಾಟೀಲ (20) ಹತ್ಯೆಯಾದ ಯುವಕ. ಓಂಕಾರ ಸುಭಾಷ ಪಾಟೀಲ (23) ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಕೆಲಸ ಮಾಡದೇ ಸುತ್ತಾಡುತ್ತಿದ್ದ ಇಬ್ಬರಿಗೂ ಪೋಷಕರು ಬುದ್ದಿಮಾತು ಹೇಳಿದ್ದಾರೆ. ಇದೇ ವಿಚಾರವಾಗಿ ಇಬ್ಬರು ಸಹೋದರರ ಮಧ್ಯೆ ಗಲಾಟೆಯಾಗಿದೆ. ರಾತ್ರಿ ವೇಳೆ ಮನೆಯ ಸ್ಟೇರ್ ಕೇಸ್ ಮೇಲೆ ಗಾಂಜಾ ಸೇವಿಸಲು ಹೋಗಿದ್ದ ವೇಳೆ ಮತ್ತೆ ಗಾಂಜಾ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ. ಎರಡನೇ ಮಹಡಿ ಮೇಲೆ ನೂಕಾಟ, ತಳ್ಳಾಟ ನಡೆದಿದ್ದು, ಇಬ್ಬರು ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಸುಶಾಂತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಓಂಕಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.