ಒಡಿಶಾ ರಾಜ್ಯದಿಂದ ಗಾಂಜಾ ಖರೀದಿಸಿ ತಂದು ಇಲ್ಲಿಯ ನಾಗೇಂದ್ರನಮಟ್ಟಿಯಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 10 ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.
ಹಾವೇರಿ: ಒಡಿಶಾ ರಾಜ್ಯದಿಂದ ಗಾಂಜಾ ಖರೀದಿಸಿ ತಂದು ಇಲ್ಲಿಯ ನಾಗೇಂದ್ರನಮಟ್ಟಿಯಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, 10 ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಯ ನಾಗೇಂದ್ರನಮಟ್ಟಿ ನಿವಾಸಿಗಳಾದ ಕುರಿ ಸಾಕಾಣಿಕೆದಾರ ದಿಳ್ಳೆಪ್ಪ ಮಲ್ಲಪ್ಪ ಅಳಲಗೇರಿ (28), ಖಾಸಗಿ ಕಂಪನಿಯ ಸಿವಿಲ್ ಎಂಜಿನಿಯರ್ ರಾಜಾಸಾಬ್ ಬಾಬುಸಾಬ ನದಾಫ (27) ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ರಾಜಾಸಾಬ ನದಾಫ, ಬಾಲ್ಯ ಸ್ನೇಹಿತ ದಿಳ್ಳೆಪ್ಪ ಅಳಲಗೇರಿ ಇಬ್ಬರೂ ಸೇರಿಕೊಂಡು ಒಡಿಶಾ ರಾಜ್ಯದಿಂದ ಗಾಂಜಾ ಖರೀದಿಸಿ ಬೆಂಗಳೂರು ಮಾರ್ಗವಾಗಿ ರೈಲಿನ ಮೂಲಕ ಹಾವೇರಿಗೆ ತಂದಿದ್ದರು. ಗಾಂಜಾ ವಾಸನೆ ಬಾರದಂತೆ ತಡೆಯಲು ಗಾಂಜಾ ತುಂಬಿದ್ದ ಬ್ಯಾಗ್‌ಗೆ ಗಟ್ಟಿಯಾಗಿ ಟಿಸ್ಕೋ ಟೇಪ್ ಅಂಟಿಸಿದ್ದರು. ರೈಲು ನಿಲ್ದಾಣದಿಂದ ನಾಗೇಂದ್ರನಮಟ್ಟಿಗೆ ತೆಗೆದುಕೊಂಡು ಹೋಗಿ, ಹೊಸಕೇರಿಮಠ ದೇವಸ್ಥಾನ ಬಳಿಯ ಸಾಯಿ ಲೇಔಟ್‌ನಲ್ಲಿ ಮಾರಾಟಕ್ಕೆ ಮುಂದಾಗಿದ್ದರು. ಖಚಿತ ಮಾಹಿತಿ ಆಧರಿಸಿ ಶಹರ ಠಾಣೆಯ ಪೊಲೀಸರು ದಾಳಿ ನಡೆಸಿ, ಸುಮಾರು ₹5,38,500 ಮೌಲ್ಯದ 10.770 ಕೆಜಿ ಗಾಂಜಾ, 2 ಬ್ಯಾಗ್‌ಗಳು, ₹360 ನಗದು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ, ಶಹರ ಠಾಣೆ ಸಿಪಿಐ ಮೋತಿಲಾಲ್ ಪವಾರ, ಡಿಎಸ್‌ಬಿ ಇನ್‌ಸ್ಪೆಕ್ಟರ್ ಸಂತೋಷ ಪವಾರ ಉಪಸ್ಥಿತರಿದ್ದರು. ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಬಿ.ಜಿ. ದೊಡ್ಡಮನಿ, ಎಂ.ಜಿ. ವಗ್ಗಣ್ಣನವರ, ಎನ್.ಎನ್. ಶಿಶುವಿನಹಾಳ, ಸಿಬ್ಬಂದಿ ವರ್ಗದವರಾದ ಯಲ್ಲಪ್ಪ ತಹಸೀಲ್ದಾರ, ಕುಬೇರಪ್ಪ ಲಮಾಣಿ, ಮುತ್ತಪ್ಪ ಲಮಾಣಿ, ಚನ್ನಬಸಪ್ಪ ಆರ್.ಬಿ., ಚಂದ್ರಕಾಂತ ಎಲ್.ಆರ್., ಶಂಕರ ಲಮಾಣಿ, ಬಸವರಾಜ ಸಿಳ್ಳಿಕ್ಯಾತರ, ಮಂಜುನಾಥ ದೊಡ್ಡಮನಿ, ಮಾಲತೇಶ ಕಬ್ಬೂರ, ಮಾರುತಿ ಹಾಲಭಾವಿ, ಸತೀಶ ಮಾರುಕಟ್ಟೆ, ಶಂಕರ ಈರೇಶನವರ, ಸೂರಜ ಲಮಾಣಿ, ರಮ್ಯಾ ಬಿ.ಇ. ಪಾಲ್ಗೊಂಡಿದ್ದರು.ಮಾದಕ ವಸ್ತು ಜಪ್ತು, ಪ್ರಕರಣ ದಾಖಲು: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಇಲ್ಲಿಯವರೆಗೆ (ಎರಡೂವರೆ ತಿಂಗಳು) ಜಿಲ್ಲೆಯಲ್ಲಿ 5 ಪ್ರಕರಣ ದಾಖಲಾಗಿದ್ದು, 14 ಆರೋಪಿಗಳನ್ನು ಬಂಧಿಸಲಾಗಿದೆ. ಸುಮಾರು ₹10,58,900 ಮೌಲ್ಯದ 22.855 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸೇವನೆಗೆ ಸಂಬಂಧಿಸಿದಂತೆ 13 ಕೇಸ್‌ಗಳು ದಾಖಲಾಗಿದ್ದು, 18 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಯಶೋದಾ ವಂಟಗೋಡಿ ತಿಳಿಸಿದರು.
ಮಾದಕ ವಸ್ತುಗಳ ಸೇವನೆ ಕುರಿತು ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ನಡೆಸಲಾಗುತ್ತದೆ. ಅನುಮಾನ ಖಚಿತವಾದರೆ ಅಂತಹವರನ್ನು ವಶಕ್ಕೆ ಪಡೆದು, ಸನ್ಮಿತ್ರ ಯೋಜನೆಯಡಿ ಕಾಳಜಿ ವಹಿಸಲು ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗುತ್ತದೆ. ಮಾದಕ ವ್ಯಸನದಿಂದ ದೂರವಿರುವಂತೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಯಶೋದಾ ವಂಟಗೋಡಿ ಹೇಳಿದರು.ಇತ್ತೀಚೆಗೆ ಶಹರ ಪೊಲೀಸ್ ಠಾಣೆಯಲ್ಲಿ ಅಂಜುಮನ್ ಕಮಿಟಿ ಸದಸ್ಯರನ್ನು ಇನ್‌ಸ್ಪೆಕ್ಟರ್ ಅವರೇ ಸನ್ಮಾನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆಯುತ್ತಿದ್ದು, ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಪದೇ ಪದೇ ಈ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಅವರು ಹೇಳಿದರು.