ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಎರಡು ಕಾರ್‌ಗಳಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ₹ ೩೦ ಲಕ್ಷ ಮೌಲ್ಯದ ಗಾಂಜಾ ಜಪ್ತು ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಎರಡು ಕಾರ್‌ಗಳಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಅಂತಾರಾಜ್ಯ ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ₹ ೩೦ ಲಕ್ಷ ಮೌಲ್ಯದ ಗಾಂಜಾ ಜಪ್ತು ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ವಿಜಯಪುರ ತಾಲೂಕಿನ ಸಿಂದಗಿ ಕ್ರಾಸ್‌ದಿಂದ ಬುರಣಾಪುರದ ಮಾರ್ಗ ಮಧ್ಯೆ ಕಾರಿನಲ್ಲಿ ಗುರುವಾರ ತೆರಳುತ್ತಿದ್ದಾಗ ದಾಳಿ ನಡೆದಿದ್ದು, ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಚೆಲ್ಲೆಪಲ್ಲಿ ತಾಂಡಾದ ನಿವಾಸಿ ಸಂತೋಷ ನಾಗಶೆಟ್ಟಿ ರಾಠೋಡ(35), ಮಹಾರಾಷ್ಟ್ರದ ರುಮ್ಮನಗುಡ ತಾಂಡಾದ ಸಂಜು ಉರ್ಫ್ ಸಂಜೀವ ಕಿಶನ್ ಆಡೆ(33), ಸಂತೋಷ ಧನಸಿಂಗ್ ರಾಠೋಡ (38) ಎಂಬುವರನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಗಳಿಂದ ಒಟ್ಟು ೪೬.೬೭೬ ಕೆಜಿ ಗಾಂಜಾ, ಎರಡು ಕಾರು ಜಪ್ತು ಮಾಡಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಾದಕ ದ್ರವ್ಯ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ಸಿಂದಗಿ ಕ್ರಾಸ್ - ಬುರಾಣಪುರ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.ಸಿಇಎನ್ ಅಪರಾಧ ವಿಭಾಗದ ಡಿವೈಎಸ್ಪಿ ಸುನೀಲ ಕಾಂಬಳೆ, ಅಧಿಕಾರಿಗಳಾದ ರಮೇಶ ಅವಜಿ, ಮಲ್ಲಿಕಾರ್ಜುನ ತಳವಾರ, ಸಿಬ್ಬಂದಿಗಳಾದ ಆರ್.ಡಿ.ಅಂಜುಟಗಿ, ಆರ್.ಐ.ಲೋಣಿ, ಎಸ್.ಜಿ.ದಾನಪ್ಪಗೋಳ, ಆರ್.ಬಿ.ಕೋಳಿ, ಎಚ್.ಎನ್.ಬಾಗವಾನ, ಎಂ.ಎಂ.ಕುರುವಿನಶೆಟ್ಟಿ, ಎ.ಬಿ.ಗದ್ಯಾಳ, ಎಸ್.ಆರ್.ಬಡಚಿ, ಡಿ.ಆರ್.ಪಾಟೀಲ, ಎಂ.ಕೆ.ಹಾವಡಿ, ಎಸ್.ಕೆ.ಜೇವೂರ, ಮಲ್ಲು ಹೂಗಾರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಎಸ್ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಸೇರಿದಂತೆ ಮುಂತಾದವರು ಇದ್ದರು.