ಸಾಮಾಜಿಕ ಸ್ಥಿತಿಗತಿ ಹಾಗೂ ಆರ್ಥಿಕ ಮಾನದಂಡಗಳ ನಡುವೆ ಅಂತರ: ಪಿ.ಆರ್‌.ಬಸವರಾಜ್‌

| Published : Mar 20 2024, 01:18 AM IST

ಸಾಮಾಜಿಕ ಸ್ಥಿತಿಗತಿ ಹಾಗೂ ಆರ್ಥಿಕ ಮಾನದಂಡಗಳ ನಡುವೆ ಅಂತರ: ಪಿ.ಆರ್‌.ಬಸವರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಮಾನದಂಡಗಳು ದೇಶದ ಆರ್ಥಿಕ ಸ್ಥಿತಿಗತಿಗಳಿಗೆ ಪೂರಕವಾಗದಿರುವುದೇ ಎಲ್ಲ ಸಮಸ್ಯೆಗಳಿಗೂ ಕಾರಣ ಎಂದು ನ್ಯಾಷನಲ್‌ ಇನ್ಸ್‌ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಆರ್. ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಾಮಾಜಿಕ ಮಾನದಂಡಗಳು ದೇಶದ ಆರ್ಥಿಕ ಸ್ಥಿತಿಗತಿಗಳಿಗೆ ಪೂರಕವಾಗದಿರುವುದೇ ಎಲ್ಲ ಸಮಸ್ಯೆಗಳಿಗೂ ಕಾರಣ ಎಂದು ನ್ಯಾಷನಲ್‌ ಇನ್ಸ್‌ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಆರ್. ಬಸವರಾಜು ಅಭಿಪ್ರಾಯಪಟ್ಟರು.

ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಬದಲಾವಣೆಗಾಗಿ ಸಹಭಾಗಿತ್ವದ ಭವಿಷ್ಯ ಎಂಬ ಪರಿಕಲ್ಪನೆಯಲ್ಲಿ ‘ವಿಶ್ವ ಸಮಾಜಕಾರ್ಯ ದಿನ- 2024 ’ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಂಜಾಬ್‌ ರಾಜ್ಯದ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ಪ್ರಮಾಣವು ಶೇ.65.5 ರಷ್ಟಿದೆ. ಭಾರತದ ಗ್ರಾಮೀಣ ಭಾಗದಲ್ಲಿ ಬಡತನ, ಮೂಲ ಸೌಕರ್ಯಗಳಾದ ಶುದ್ಧ ನೀರು ಮತ್ತು ನೈರ್ಮಲ್ಯದ ಕೊರತೆ, ಅಸಮರ್ಪಕ ಆರೋಗ್ಯ ಸೌಲಭ್ಯಗಳು, ಅನಕ್ಷರತೆ, ನಿರುದ್ಯೋಗ ಮತ್ತು ಕೃಷಿ ಸವಾಲುಗಳು ಇಂದಿಗೂ ಚಾಲ್ತಿಯಲ್ಲಿವೆ. ಇಂತಹ ಸಮಸ್ಯೆಗಳನ್ನು ಸವಾಲುಗಳಾಗಿ ತೆಗೆದುಕೊಂಡು ಪರಿಹಾರ ನೀಡಬೇಕಾದವರು ಸಮಾಜಕಾರ್ಯದವರು ಎಂದು ತಿಳಿಸಿದರು.

ಸಮಾಜಮುಖಿ ಕಾರ್ಯಗಳನ್ನು ಶಿಬಿರಗಳ ಮೂಲಕ ಬಗೆಹರಿಸುವ ಕಾರ್ಯವಾಗಬೇಕು. ನಗರ ಪ್ರದೇಶದ, ಮೂಲಭೂತ ಸೌಕರ್ಯ ವಂಚಿತ ಪ್ರದೇಶಗಳಲ್ಲಿ ಶಿಬಿರಗಳನ್ನು ಏರ್ಪಡಿಸಬೇಕು.ಅಲ್ಲಿನ ಸವಾಲುಗಳನ್ನು ಸಮಸ್ಯೆಗಳೆಂದು ಭಾವಿಸದೇ, ದೇಶದ ಅಭಿವೃದ್ಧಿಗಾಗಿ ದುಡಿಮೆ ಎಂದು ಕಾರ್ಯನಿರ್ವಹಿಸಬೇಕು ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಶಿಕ್ಷಣ ಮತ್ತು ಸಮಾಜದ ನಡುವಿನ ಉತ್ತಮ ಸಂಪರ್ಕ ಕೊಂಡಿ . ನಾವು ಬಹು ಆಯಾಮದ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಒಂದು ಕಡೆ ಸುಧಾರಿಸುತ್ತಿದ್ದೇವೆ, ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ ಸಮತೋಲನ ಸಾಧಿಸಲು ನಮಗೆ ಸಮಸ್ಯೆಗಳಿವೆ ಎಂದರು.

ಸಮಾಜಕಾರ್ಯ ವಿದ್ಯಾರ್ಥಿಗಳು ಗ್ರಾಮೀಣ ಸ್ಥಿತಿಗತಿಗಳಿಗೆ ತೆರೆದುಕೊಳ್ಳಬೇಕು. ಅಭಿವೃದ್ಧಿಯ ಶೂನ್ಯ ಸಂಪರ್ಕವಿರುವ ಗ್ರಾಮಗಳನ್ನು ಸುಧಾರಿಸುವ ಸವಾಲುಗಳನ್ನು ತೆಗೆದುಕೊಳ್ಳಬೇಕು. ಬದಲಾವಣೆ ತರಲು ನಾವು ಮೊದಲು ಬದಲಾಗಬೇಕು ಎಂದು ತಿಳಿಸಿದರು.

ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಮಾಜದ ವಿಭಿನ್ನ ಮಾನದಂಡಗಳ ಮೇಲೆ ತಯಾರಿಸಿದ್ದ ಮಾದರಿಗಳನ್ನು ವೀಕ್ಷಿಸಿದರು. ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ. ಬಿ. ರಮೇಶ್ ಮಾತನಾಡಿ, ಸಹಯೋಗ, ಸುಸ್ಥಿರತೆ, ಸ್ಥಳೀಯ ಸಂಪರ್ಕದಿಂದ ಸಮಾಜವನ್ನು ಅರ್ಥಮಾಡಿಕೊಳ್ಳುವುದು, ಮಹಿಳೆಯರ ಉನ್ನತಿ, ಮಾನಸಿಕ ಅಸ್ವಸ್ಥರ ಮತ್ತು ವಿಶೇಷಚೇತನರ ಮೇಲೆ ಕಾಳಜಿ ಇರಬೇಕುಎಂದರು.

ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಸ್ನಾತಕೋತ್ತರ ಸಮಾಜಕಾರ್ಯಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಜಿ. ಪರಶುರಾಮ ಉಪಸ್ಥಿತರಿದ್ದರು.