ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಬಸವಣ್ಣ ಸಾಂಸ್ಕೃತಿಕ ನಾಯಕರಾದರೆ, ಮಹದೇಶ್ವರರು ಜನಪದದ ಅಗ್ರಗಣ್ಯ ನಾಯಕ, ಎಲ್ಲಾ ಜನಾಂಗದ ಆರಾಧ್ಯ ದೈವ ಎಂದು ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕ ಮತ್ತು ಸಾಹಿತಿ ಅಂಶಿ ಪ್ರಸನ್ನಕುಮಾರ್ ತಿಳಿಸಿದರು.
ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠ, ಚಾಮರಾಜನಗರ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರೊ. ಎಸ್. ಶಿವರಾಜಪ್ಪ ಅವರ ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ ಗ್ರಂಥ ವಿಶ್ಲೇಷಣೆ ಮತ್ತು ವ್ಯಕ್ತಿತ್ವ ವಿಕಸನ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರುಮಹದೇಶ್ವರ ಕಾವ್ಯಕ್ಕೆ ಅಗ್ರಸ್ಥಾನ:
ಜನಪದ ಕಾವ್ಯಗಳಲ್ಲಿ ಮಹದೇಶ್ವರ ಕಾವ್ಯಕ್ಕೆ ಅಗ್ರಸ್ಥಾನವಿದೆ. ಶ್ರೀ ಶೈಲದಿಂದ ಬಂದು ಕತ್ತಲ ರಾಜ್ಯದ ಹಲವು ಕಡೆ ಸಂಚಾರ ಮಾಡಿ ಮಲೆಮಹದೇಶ್ವರ ಬೆಟ್ಟದಲ್ಲಿ ಬೆಳಕು ಮೂಡಿಸಿದ್ದಾರೆ. ಬೇಡಗಂಪಣರ ಒಲವು ಗಳಿಸಿ ಸಾಲೂರು ಶ್ರೀಗಳನ್ನು ಗುರುವಾಗಿ ಸ್ವೀಕರಿಸಿ ತಮ್ಮ ಕಾಯಕದ ಮೂಲಕ ಪ್ರಸಿದ್ಧರಾಗಿದ್ದರು ಎಂದು ತಿಳಿಸಿದರು. ಶಿಕ್ಷಕ, ಸಾಹಿತಿ ಬಿ.ಎಸ್. ವಿನಯ್ ಗ್ರಂಥ ವಿಶ್ಲೇಷಣೆ ಮಾಡಿ ಮಾತನಾಡಿ, ಪ್ರೊ. ಎಸ್. ಶಿವರಾಜಪ್ಪ ಅವರ ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ ಗ್ರಂಥದಲ್ಲಿ ಮಹದೇಶ್ವರರನ್ನು ದೇವರಿಗಿಂತ ಅವರನ್ನು ಸಮಾಜ ಸುಧಾರಕರನ್ನಾಗಿಸಿದ್ದಾರೆ ಇದು ವ್ಯಕ್ತಿತ್ವ ವಿಕಸನಕ್ಕೂ ಆದರ್ಶವಾಗಿದೆ ಎಂದರು.ಪ್ರೊ.ಎಸ್. ಶಿವರಾಜಪ್ಪ ಮಾದಪ್ಪನ ಕಾಡಿನವರು ಆದ್ದರಿಂದ ಸಂಶೋಧನೆ ಮೂಲಕ ಮಹದೇಶ್ವರನ ಇತಿಹಾಸದ ನೆಲೆಯನ್ನು ಹುಡುಕಿ ನಿಖರವಾಗಿ ಜನಪದ ಕಾವ್ಯದ ಮೂಲಕ ಸತ್ಯ ಸಂಗತಿಯನ್ನು ಹುಡುಕಿಕೊಟ್ಟಿದ್ದಾರೆ ಎಂದರು.ಅತೀ ದೊಡ್ಡ ಮಹಾಕಾವ್ಯ:
ಮಹದೇಶ್ವರ ಜನಪದ ಕಾವ್ಯ ಅತಿ ದೊಡ್ಡ ಮಹಾಕಾವ್ಯ. ವಿಶ್ವಮಟ್ಟದಲ್ಲಿ ಎರಡನೇ ಕಾವ್ಯ. ಇದನ್ನು ಸಮಗ್ರವಾಗಿ ಅಧ್ಯಯನ ಮಾಡಿದರೆ ಪ್ರಪಂಚದ ಮೊದಲ ಕಾವ್ಯವಾಗುತ್ತದೆ. ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗ ಮೂರು ಜಾನಪದ ಮಹತ್ವದ ಕಾವ್ಯಗಳು ಚಾಮರಾಜನಗರ ಜಿಲ್ಲೆಯ ಒಂದು ಪ್ರದೇಶದಲ್ಲೇ ಹುಟ್ಟಿರುವುದು ಹೆಮ್ಮೆಯ ವಿಚಾರ ಎಂದರು.ಮಹದೇಶ್ವರರು ಧಾರ್ಮಿಕ ನಾಯಕರಲ್ಲದೆ, ಸಮಾಜ ಸುಧಾರಕರು, ಕೊಂದು ತಿನ್ನುವುದನ್ನು ಬಿಡಿಸಿ ಬೆಳೆದು ತಿನ್ನುವ ವ್ಯವಸಾಯದ ಕಾಯಕ ಕಲಿಸಿ ಕೊಟ್ಟರು. ಅನಾಗರೀಕರಂತಿದ್ದ ಜನರನ್ನು ಹೇಗೆ ಸುಧಾರಿಸಿದರು ಎಂಬುದನ್ನು ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ ಗ್ರಂಥದಲ್ಲಿ ಲೇಖಕರು ಸಮಗ್ರವಾಗಿ ಚಿತ್ರಿಸಿದ್ದಾರೆ ಎಂದರು.
ಮಾದಪ್ಪನ ಕಾವ್ಯ ಪ್ರತಿಯೊಬ್ಬರಲ್ಲೂ ಕಾಣಲು ದೇವರ ಗುಡ್ಡರು ಕಾರಣ. ಶಿವರಾಜಪ್ಪನವರು ಮಹದೇಶ್ವರ ಬೆಟ್ಟವನ್ನು ಹತ್ತಿರದಿಂದ ನೋಡಿದ್ದರಿಂದ ಮಹದೇಶ್ವರ ಮಹಿಮೆಯನ್ನು ಕಟ್ಟಿಕೊಟ್ಟಿದ್ದಾರೆ, ಇದು ಒಂದು ರೀತಿಯ ಜ್ಞಾನವಂತ ಸಂಸ್ಕೃತಿಯನ್ನು ನೀಡುತ್ತದೆ ಎಂದರು.ಮಹದೇಶ್ವರರು ಜಾತಿ ಬೇಧ ಮಾಡಲಿಲ್ಲ. ಆದ್ದರಿಂದ ಎಲ್ಲಾ ಜಾತಿಯವರಿಗೆ ಮಹದೇಶ್ವರ ಆರಾಧ್ಯ ದೈವ, ಮಲೆ ಮಹದೇಶ್ವರ ಕೊಂಗಳ್ಳಿ ಮಲ್ಲಪ್ಪ, ಮುಡೂಕುತೊರೆ ಮಲ್ಲಪ್ಪ ಈ ನೆಲದಲ್ಲಿ ಬಾಳಿ ಬದುಕಿದ ಸಮಾಜ ಸುಧಾರಕರು. ಮಹದೇಶ್ವರರು ಪ್ರಾಣಿಗಳ ಮತ್ತು ಮನುಷ್ಯ ಸಂಬಂಧ ಎಂತಹದ್ದು ಎಂಬುದಕ್ಕೆ ೭೭ ಹುಲಿಗಳಿಗೆ ಹೆಸರಿಟ್ಟು ಕರೆಯುತ್ತಿದ್ದರು. ಅದೇ ರೀತಿ ೭೭ ಮಲೆಗಳಿಗೂ ಒಂದೊಂದು ಹೆಸರಿದೆ. ಇದನ್ನು ಶಿವರಾಜಪ್ಪನವರು ತಮ್ಮ ಗ್ರಂಥದಲ್ಲಿ ಸವಿವರವಾಗಿ ತಿಳಿಸಿದ್ದಾರೆ. ಅದೇ ರೀತಿ ಮಹದೇಶ್ವರರು ಬಂದ ಹಾದಿಯಲ್ಲಿ ಮಾಡಿದ ಪವಾಡಗಳು ಎನ್ನುವುದಕ್ಕಿಂತ ಕಾಯಕದ ಮಹತ್ವವನ್ನು ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ ಇದು ಕೇವಲ ಗ್ರಂಥವಲ್ಲ ಜ್ಞಾನ ಕೋಶ ಎಂದರು.
ಗ್ರಂಥ ಕತೃ ಮಾತನಾಡಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಚಾಮರಾಜನಗರ ಜಿಲ್ಲೆ ಬೆಲ್ಲದ ಅಚ್ಚು ಇದ್ದಂತೆ ಯಾವ ಭಾಗ ತಿಂದರೂ ಸಿಹಿಯಾಗಿರುತ್ತದೆ. ಅಂತಹ ಸೊಗಡು ಈ ಭಾಗದ ಜನರಲ್ಲಿ ಇದೆ ಎಂದರು.ಮಹದೇಶ್ವರರ ಪವಾಡ ಮತ್ತು ಮಹಿಮೆಯನ್ನು ವಿದ್ಯಾರ್ಥಿಗಳು ತಂದೆತಾಯಿ ಮತ್ತು ಅಣ್ಣ ತಮ್ಮಂದರಿಗೆ ತಿಳಿಸಬೇಕು. ನೀವು ತಿಳಿದುಕೊಂಡರೆ ಸಮಾಜಕ್ಕೆ ಉತ್ತಮ ಮಾಹಿತಿಯ ನೀಡಲು ಸಾಧ್ಯ. ಶಿಕ್ಷಕರು ಯುವ ಜನಾಂಗ ತಯಾರಿಸುವ ಶಿಲ್ಪಿಗಳು. ಕ್ರಿಯಾಶೀಲರಾಗಿ, ಹೊಸ ಅಲೋಚನೆ ತಿಳಿದುಕೊಂಡರೆ. ಉತ್ತಮ ಜನಾಂಗ ರೂಪಿಸಲು ಸಾಧ್ಯವಾಗುತ್ತದೆ. ಸೃಜನಶೀಲ ಸಾಹಿತ್ಯದ ಕಿಡಿ ಹಚ್ಚುವ ಕೆಲಸ ಮಾಡಬೇಕು. ವ್ಯಕ್ತಿತ್ವ ವಿಕಸನ ಮೂಲಕ ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ಜಾತಿ ವರ್ಗ ಮೀರಿ ನಿಂತ ನಾಯಕ:ಮಹದೇಶ್ವರರು ಜಾತಿ ವರ್ಗವನ್ನು ಮೀರಿ ನಿಂತ ನಾಯಕ. ಶೂನ್ಯ ಸಿಂಹಾಸನದ ಅಧಿಪತಿ ಸ್ಥಾನ ಬಿಟ್ಟು ಹೋಗಿದ್ದಾರೆ. ಮಲೆಮಹದೇಶ್ವರ ಮಹಿಮೆಯನ್ನು ಹುಡುಕಾಟದಲ್ಲಿ ದಾಖಲಿಸಿದ್ದೇನೆ. ಸಂಶೋಧನೆಗೆ ಸಾಕಷ್ಟು ವಿಚಾರ ಇದೆ. ಮಲೆ ಮಹದೇಶ್ವರ ಜನರ ಅಸ್ತಿ. ಜನರ ಹೃದಯದಲ್ಲಿ ಇದ್ದಾರೆ. ಇನ್ನೂ ಹೆಚ್ಚಿನ ಸಂಶೋಧನೆ ಮೂಲಕ ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಮಲೆ ಮಹದೇಶ್ವರ ಜನಪದ ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆದಿರುವ ಡಾ. ಎಂ. ಮಹೇಶ್ ಚಿಕ್ಕಲ್ಲೂರು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ದುಗ್ಗಹಟ್ಟಿ ಮಲ್ಲಿಕಾರ್ಜುನಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ಸಿ. ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿಗಳು, ಶಿಕ್ಷಕರು ಇತಿಹಾಸ ಪರಂಪರೆ ಬಗ್ಗೆ ತಿಳಿದುಕೊಳ್ಳಬೇಕುಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗಬೇಕಾದರೆ. ಸಾಹಿತ್ಯ, ಸಂಸ್ಕೃತಿ, ಇತಿಹಾಸ ಪರಂಪರೆ ಬಗ್ಗೆ ತಿಳಿದುಕೊಳ್ಳಬೇಕು. ಕ್ರೀಡೆ, ಸಾಂಸ್ಕೃತಿಕ ಪ್ರತಿಯೊಂದು ವಿಚಾರದಲ್ಲೂ ತಿಳಿವಳಿಕೆ ಮುಖ್ಯ ಎಂದು ಕನ್ನಡಪ್ರಭ ಕಾರ್ಯನಿರ್ವಾಹಕ ಸಂಪಾದಕ ಮತ್ತು ಸಾಹಿತಿ ಅಂಶಿ ಪ್ರಸನ್ನಕುಮಾರ್ ತಿಳಿಸಿದರು. ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠ, ಚಾಮರಾಜನಗರ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರೊ. ಎಸ್. ಶಿವರಾಜಪ್ಪ ಅವರ ಮಾದೇಶ್ವರರ ಸಾಹಿತ್ಯಿಕ ನೆಲೆಗಳ ಹುಡುಕಾಟ ಗ್ರಂಥ ವಿಶ್ಲೇಷಣೆ ಮತ್ತು ವ್ಯಕ್ತಿತ್ವ ವಿಕಸನ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭವಿಷ್ಯದ ಜನಾಂಗ ನಿರ್ಮಾಣ ಮಾಡುವ ಶಿಕ್ಷಕರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಅರಿವಿರಬೇಕು. ವಿದ್ಯಾರ್ಥಿಗಳ ಆಸಕ್ತಿ ಕ್ಷೇತ್ರ ಗುರುತಿಸಿ ಪ್ರೋತ್ಸಾಹಿಸಬೇಕೆಂದರು.ವ್ಯಕ್ತಿತ್ವ ವಿಕಸನಕ್ಕೆ ಪಠ್ಯ ಒಂದೇ ಸಾಲದು, ಪಠ್ಯೇತರ ಚಟುವಟಿಕೆಗಳು ಅತಿ ಮುಖ್ಯ, ಜನಪದದ ನಾಯಕರು, ವ್ಯಕ್ತಿತ್ವ ವಿಕಸನಕ್ಕೆ ಆದರ್ಶವಾಗಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ನಿರಂತರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿಕಸನ ಗುಣಾತ್ಮಕವಾಗಿರಬೇಕು. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು. ಭವಿಷ್ಯದ ಮಕ್ಕಳನ್ನು ತಯಾರು ಮಾಡಬೇಕಾದರೆ ಸಕಾರಾತ್ಮಕವಾಗಿ ಒಳ್ಳೆಯ ಕನಸು ಕಾಣಬೇಕೆಂದರು.
ಭ್ರಮೆ ಮತ್ತು ವಾಸ್ತವದ ಬಗ್ಗೆ ಅರಿವಿರಬೇಕು. ನಮ್ಮಿಂದ ಸಾಧ್ಯವಿಲ್ಲ ಎಂದುಕೊಳ್ಳಬಾರದು. ಶಿಕ್ಷಕರಿಗೆ ದೂರದೃಷ್ಟಿ ಇರಬೇಕು. ಸಫಲತೆ ಕಾಣಬೇಕಾದರೆ ತಲುಪುವ ಗುರಿ ಮುಖ್ಯ. ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಣ ಒತ್ತಡದಿಂದ ಕೂಡಿರಬಾರದು. ಆಸಕ್ತಿಯಿಂದ ಕೂಡಿರಬೇಕು. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವ ಗುಣ ಅಳವಡಿಸಿ ಕೊಂಡರೆ ಯಶಸ್ಸು ಕಾಣಲು ಸಾಧ್ಯ ಎಂದರು.ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪತ್ರಿಕೆ ಮತ್ತು ಗ್ರಂಥಗಳನ್ನು ಓದಬೇಕು. ಆಗ ಮಾತ್ರ ಜ್ಞಾನರ್ಜನೆಯಾಗುತ್ತದೆ. ಗೂಗಲ್ ಮೊರೆ ಹೋದರೆ ಅದು ಕ್ಷಣಮಾತ್ರದಲ್ಲಿ ಮಾಯವಾಗುತ್ತದೆ. ಓದುವುದರಿಂದ ಜ್ಞಾನಾರ್ಜನೆಯಾಗುತ್ತದೆ ಎಂದರು.