ಕಸ ವಿಲೇವಾರಿ: ಆರ್‌ಎಫ್‌ಐಡಿ ನಿರುಪಯುಕ್ತ!

| Published : Oct 15 2023, 12:45 AM IST

ಸಾರಾಂಶ

ಯಾರು ತಮ್ಮ ಮನೆಗೆ ಕಸ ಸಂಗ್ರಹಕ್ಕೆ ಪೌರಕಾರ್ಮಿಕರು ಬಂದೇ ಇಲ್ಲ ಅಂತಾನೂ ಹೇಳಲು ಬರಲ್ಲ. ಕಸ ತೆಗೆದುಕೊಳ್ಳೋಕೆ ಹೋಗಿದ್ದೆ ಅವರೇ ಕೊಟ್ಟಿಲ್ಲ ಎಂದು ಪೌರಕಾರ್ಮಿಕರು ಸುಳ್ಳು ಹೇಳಲು ಆಸ್ಪದ ಇರಲ್ಲ ಎಂಬ ಕಾರಣಕ್ಕೆ ನಗರದಲ್ಲಿ ಈ ಟ್ಯಾಗ್‌ ಅಳವಡಿಸಲಾಗಿತ್ತು.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕಸ ವಿಲೇವಾರಿ ಸುಗಮವಾಗಲೆಂಬ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಅಳವಡಿಸಿದ್ದ "ಆರ್‌ಎಫ್‌ಐಡಿ ಟ್ಯಾಗ್‌ " ಇದೀಗ ನಿರುಪಯುಕ್ತವಾಗಿವೆ. ಸರಿಯಾಗಿ ರೀಡ್‌ ಆಗುತ್ತಿಲ್ಲ. ಇದಕ್ಕಾಗಿ ಖರ್ಚು ಮಾಡಿರುವ ₹43 ಕೋಟಿ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ!

ಆರ್‌ಎಫ್‌ಐಡಿ ಎಂದರೆ "ರೆಡಿಯೋ ಫ್ರಿಕ್ವೆನ್ಸಿ ಐಡಿಟೆಂಟಿಫಿಕೇಶನ್‌ ಟ್ಯಾಗ್‌ ". ಇದನ್ನು ಪ್ರತಿ ಮನೆಯ ಕಾಂಪೌಂಡ್‌, ಗೇಟ್‌ ಸೇರಿದಂತೆ ಆ ಮನೆಯವರಿಂದ ಕಸ ಶೇಖರಿಸುವ ಜಾಗೆಯಲ್ಲಿ ಅಳವಡಿಸಲಾಗಿದೆ. ಕಸ ಸಂಗ್ರಹಕ್ಕೆ ಹೋದ ಪೌರಕಾರ್ಮಿಕರ ಬಳಿ ಅದರ ರೀಡರ್‌ ಇರುತ್ತದೆ. ರೀಡರ್‌ನ್ನು ಆ ಟ್ಯಾಗ್‌ ಬಳಿ ಹಿಡಿದಾಗ ರೀಡ್‌ ಆಗುತ್ತದೆ. ಅದರ ಕಂಟ್ರೋಲ್‌ ರೂಂನಲ್ಲಿ ಆ ಮನೆಯಿಂದ ಕಸ ಸಂಗ್ರಹಿಸಲಾಗಿದೆ ಎಂಬುದು ದಾಖಲಾಗುತ್ತದೆ.

ಯಾರು ತಮ್ಮ ಮನೆಗೆ ಕಸ ಸಂಗ್ರಹಕ್ಕೆ ಪೌರಕಾರ್ಮಿಕರು ಬಂದೇ ಇಲ್ಲ ಅಂತಾನೂ ಹೇಳಲು ಬರಲ್ಲ. ಕಸ ತೆಗೆದುಕೊಳ್ಳೋಕೆ ಹೋಗಿದ್ದೆ ಅವರೇ ಕೊಟ್ಟಿಲ್ಲ ಎಂದು ಪೌರಕಾರ್ಮಿಕರು ಸುಳ್ಳು ಹೇಳಲು ಆಸ್ಪದ ಇರಲ್ಲ ಎಂಬ ಕಾರಣಕ್ಕೆ ನಗರದಲ್ಲಿ ಈ ಟ್ಯಾಗ್‌ ಅಳವಡಿಸಲಾಗಿತ್ತು.

ಪ್ರಾಯೋಗಿಕವಾಗಿ 2019ರಲ್ಲಿ 4 ವಾರ್ಡ್‌ಗಳಲ್ಲಿ 10 ಸಾವಿರ ಟ್ಯಾಗ್‌ ಅಳವಡಿಸಲಾಗಿತ್ತು. 2020-21ರಲ್ಲಿ 2.12 ಲಕ್ಷ ಆಸ್ತಿಗಳಿಗೆ ಟ್ಯಾಗ್‌ ಅಳವಡಿಸಲಾಗಿತ್ತು. ಸದ್ಯ 3.83 ಲಕ್ಷ ಆಸ್ತಿಗಳಿವೆ. ಇನ್ನು ಎಲ್ಲೆಡೆ ಅಳವಡಿಸಲು ಸಾಧ್ಯವೇ ಆಗಿಲ್ಲ. ಆದರೆ ಕೆಲವೊಂದಿಷ್ಟು ಕಿತ್ತುಕೊಂಡು ಹೋಗಿದ್ದರೆ, 30 ಸಾವಿರಕ್ಕೂ ಅಧಿಕ ಡ್ಯಾಮೇಜ್‌ ಆಗಿವೆ. ಅಬ್ಬಬ್ಬಾ ಎಂದರೆ 1.60 ಲಕ್ಷ ಆಸ್ತಿಗಳಲ್ಲಿ ಟ್ಯಾಗ್‌ಗಳಿರಬಹುದು ಎಂಬುದು ಪಾಲಿಕೆಯ ಲೆಕ್ಕ.

ರೀಡರ್‌ ಸರಿಯಿಲ್ಲ:

ರೀಡರ್‌ಗಳು ಸರಿಯಾಗಿ ಕೆಲಸ ಮಾಡಲ್ಲ. ಎಷ್ಟೊತ್ತು ಹಿಡಿದರೂ ರೀಡ್‌ ಆಗಲ್ಲ. ಜತೆಗೆ ಬ್ಯಾಟರಿ ಸಮಸ್ಯೆ ಸಿಕ್ಕಾಪಟ್ಟೆ ಇದೆ. ಹತ್ತು ಮನೆಗಳಿಗೂ ರೀಡ್‌ ಆಗುವಂತಹ ಬ್ಯಾಟರಿಗಳಿಲ್ಲ. ಹೀಗಾಗಿ, ಇವುಗಳನ್ನು ಬಳಸುವುದನ್ನೇ ಬಿಟ್ಟಿದ್ದೇನೆ. ಯಾರಾದರೂ ಮನೆಯವರು ಕೇಳಿದಾಗ ಮಾತ್ರ ರೀಡ್‌ ಮಾಡಿದಂತೆ ಮಾಡುತ್ತೇವೆ ಎಂಬುದು ಹೆಸರು ಹೇಳಲು ಇಚ್ಛಿಸದ ಪೌರಕಾರ್ಮಿಕರ ಮಾತು.

ಕಸ ಸಂಗ್ರಹ ಮಾಡುವುದು ಪಾಲಿಕೆಯ ಪೌರಕಾರ್ಮಿಕರು, ಇವುಗಳನ್ನು ಅಳವಡಿಸಿ 4 ವರ್ಷವಾದರೂ ಈಗಲೂ ಮಾನಿಟಿರಿಂಗ್‌ ಮಾಡುವುದು ಸ್ಮಾರ್ಟ್‌ಸಿಟಿಯಲ್ಲಿ. ಹೀಗಾಗಿ, ಅವರು ಹೇಳಿದ್ದೇ ಲೆಕ್ಕ. ಇವರು ಕೇಳಿದ್ದೆ ಲೆಕ್ಕ. ಸ್ಮಾರ್ಟ್‌ಸಿಟಿ ಅಧಿಕಾರಿ ವರ್ಗ ಎಲ್ಲವೂ ಸರಿಯಿದೆ ಎಂದು ವರದಿ ಕೊಡುತ್ತದೆ. ಪಾಲಿಕೆಯವರು ಆಯ್ತು ಎಂದುಕೊಂಡು ಒಪ್ಪಿಕೊಳ್ಳುತ್ತಾರೆ. ಆದರೆ, ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಕೆಯಿಂದ ನಯಾ ಪೈಸೆಯಷ್ಟು ಉಪಯೋಗವಾಗಿಲ್ಲ. ಸ್ಮಾರ್ಟ್‌ಸಿಟಿ ದುಡ್ಡು ಖರ್ಚಾಗಿದೆ ಅಷ್ಟೇ ಎಂದು ಪಾಲಿಕೆ ಸದಸ್ಯರೇ ಆರೋಪಿಸುತ್ತಾರೆ.

ಒಟ್ಟಿನಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಕೆ ಕಿಂಚಿತ್ತೂ ಉಪಯೋಗವಾಗಿಲ್ಲ ಎಂಬುದು ಕಸ ಸಂಗ್ರಹದ ವೇಳೆ ಒಂದು ಸುತ್ತು ಹಾಕಿದರೆ ಖಚಿತವಾಗುತ್ತದೆ.

ಈಗಲೂ ಕಾಲಮಿಂಚಿಲ್ಲ. ಆರ್‌ಎಫ್‌ಐಡಿಯಲ್ಲಿ ದೋಷಗಳನ್ನು ಸರಿಪಡಿಸಿ ಸರಿಯಾಗಿ ನಿರ್ವಹಣೆ ಮಾಡಬೇಕು. ರೀಡರ್‌, ಟ್ಯಾಗ್‌, ಬ್ಯಾಟರಿ ಸೇರಿದಂತೆ ಸಂಬಂಧಪಟ್ಟ ಪರಿಕರಗಳಲ್ಲಿನ ದೋಷಗಳನ್ನು ಸರಿಪಡಿಸಬೇಕು ಎಂದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.

ನಗರದಲ್ಲಿ 3.83 ಲಕ್ಷ ಆಸ್ತಿಗಳಲ್ಲಿ 2.12 ಲಕ್ಷ ಆಸ್ತಿಗಳಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ ಅಳವಡಿಸಲಾಗಿದೆ. ಕೆಲವೊಂದಿಷ್ಟು ಡ್ಯಾಮೇಜ್‌ ಆಗಿವೆ. ಕೆಲವೊಂದಿಷ್ಟು ರೀಡ್‌ ಆಗಲ್ಲ. ಸಣ್ಣ ಪುಟ್ಟ ದೋಷಗಳಿರುವುದು ನಿಜ. ಇವುಗಳನ್ನು ಸ್ಮಾರ್ಟ್‌ಸಿಟಿ ಅವರೇ ನಿರ್ವಹಣೆ ಮಾಡುತ್ತಾರೆ ಎಂದು ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮಲ್ಲಿಕಾರ್ಜುನ ತಿಳಿಸುತ್ತಾರೆ.

ಈ ಕುರಿತು ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಆರ್‌ಎಫ್‌ಐಡಿಯಿಂದ ನಯಾಪೈಸೆಯಷ್ಟು ಉಪಯೋಗವಾಗಿಲ್ಲ. ಯಾವ ಟ್ಯಾಗ್‌ ಸರಿಯಾಗಿ ರೀಡ್‌ ಆಗುವುದೇ ಇಲ್ಲ. ಪೌರಕಾರ್ಮಿಕರಾದರೂ ಏನು ಮಾಡುತ್ತಾರೆ. ಹಾಗೆ ಮಾಡಿದಂಗೆ ಮಾಡಿ ಮುಂದೆ ಹೋಗುತ್ತಾರಷ್ಟೇ. ಇದಕ್ಕಾಗಿ ಹಾಕಿದ್ದ 43 ಕೋಟಿ ವ್ಯರ್ಥವಾದಂತಾಗಿದೆ ಎಂದಿದ್ದಾರೆ.

ನಮ್ಮ ಮನೆಗೂ ಆರ್‌ಎಫ್‌ಐಡಿ ಅಳವಡಿಸಿದ್ದಾರೆ. ಪ್ರಾರಂಭದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕಳೆದ ಕೆಲದಿನಗಳಿಂದ ಅದು ರೀಡ್‌ ಆಗುತ್ತಿಲ್ಲ. ಅದನ್ನು ರೀಡ್‌ ಮಾಡುವ ಗೋಜಿಗೂ ಪೌರಕಾರ್ಮಿಕರು ಹೋಗಿಯೇ ಇಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ಮೃತ್ಯುಂಜಯ ಪಾಟೀಲ.