ಕಸದ ರಾಶಿ: ಐದು ಕಡೆ ಸಿಸಿ ಕೆಮರಾ ಅಳವಡಿಸಲು ಬೆಳುವಾಯಿ ಗ್ರಾಮಸಭೆ ನಿರ್ಣಯ

| Published : Mar 14 2025, 12:34 AM IST

ಕಸದ ರಾಶಿ: ಐದು ಕಡೆ ಸಿಸಿ ಕೆಮರಾ ಅಳವಡಿಸಲು ಬೆಳುವಾಯಿ ಗ್ರಾಮಸಭೆ ನಿರ್ಣಯ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಐದು ಕಡೆಗಳಲ್ಲಿ ಇದಕ್ಕಾಗಿ ಸಿಸಿ ಕೆಮರಾ ಅಳವಡಿಸುತ್ತೇವೆ. ಮುಂದಿನ ದಿನಗಳಲ್ಲಿ ಅಗತ್ಯವಿದ್ದ ಕಡೆಗಳಲ್ಲಿ ಕ್ಯಾಮರಗಳನ್ನು ಅಳವಡಿಸಲು ಬೆಳುವಾಯಿ ಗ್ರಾಮ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ನಡೆದ 2024-25ನೇ ಸಾಲಿನ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮದ ಶುಚಿತ್ವ, ನೂತನ ಅಂಗನವಾಡಿ ಬೇಡಿಕೆ, ಚಿರತೆ ಕಾಟ ಸಹಿತ ಹಲವು ವಿಚಾರಗಳ ಚರ್ಚೆ ನಡೆಯಿತು.

ಘನ ತ್ಯಾಜ್ಯ ನಿರ್ವಹಣೆ-ಸ್ವಚ್ಛ ಬೆಳುವಾಯಿ ಎನ್ನುವ ಪರಿಕಲ್ಪನೆಯಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ವಚ್ಛತೆ, ಕಸ ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಪಿಡಿಒ ಭೀಮ ಬಿ.ನಾಯಕ್ ಹೇಳಿದರು.

ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಐದು ಕಡೆಗಳಲ್ಲಿ ಇದಕ್ಕಾಗಿ ಸಿಸಿ ಕೆಮರಾ ಅಳವಡಿಸುತ್ತೇವೆ. ಮುಂದಿನ ದಿನಗಳಲ್ಲಿ ಅಗತ್ಯವಿದ್ದ ಕಡೆಗಳಲ್ಲಿ ಕ್ಯಾಮರಗಳನ್ನು ಅಳವಡಿಸಲಾಗುವುದು. ಯಾರಾದರೂ ಕಸ ಬಿಸಾಡುವುದು ಕಂಡು ಬಂದಲ್ಲಿ ಅಂತವರಿಗೆ ದಂಢ ವಿಧಿಸಲಾಗುವುದು. ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ಈಗಾಗಲೇ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸಹಕರಿಸುತ್ತಿದ್ದು, ಪ್ರತಿಯೊಬ್ಬ ಗ್ರಾಮಸ್ಥರು ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಸುರೇಶ್ ಪೂಜಾರಿ ಹೇಳಿದರು.

ಸ್ವಚ್ಛತಾ ವಾಹನ ಈಗಾಗಲೇ ಕಾರ್ಯಾಚರಿಸುತ್ತಿದ್ದು, ರೂಟ್ ಮ್ಯಾಪ್ ಮಾಡುವಂತೆ ಆಯಾ ವಾರ್ಡ್‌ ಸದಸ್ಯರಿಗೆ ತಿಳಿಸಲಾಗಿದೆ. ಅವರಿಂದ ಮಾಹಿತಿ ಸಂಗ್ರಹಿಸಿ, ಪರಿಶೀಲಿಸಿದ ಬಳಿಕ ರೂಟ್ ಮ್ಯಾಪ್‌ನ ಅನುಗುಣವಾಗಿ ಸ್ವಚ್ಛತಾ ವಾಹನ ಕಾರ್ಯನಿರ್ವಹಿಸಲಿದೆ. ಪರಿಣಾಮಕಾರಿಯಾಗಿ ಸ್ವಚ್ಛತೆಯ ಯೋಜನೆ ಜಾರಿಗೊಳಿಸಲು ಪಂಚಾಯಿತಿ ಬದ್ಧವಾಗಿದೆ ಎಂದು ಪಿಡಿಒ ತಿಳಿಸಿದರು.

ಕಾನದಲ್ಲಿ 400ಕ್ಕೂ ಅಧಿಕ ಮನೆಗಳಿದ್ದು, ಈಗಾಗಲೇ ಒಂದು ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದೆ. ಸುಮಾರು 200 ಮನೆಗಳನ್ನು ಒಳಗೊಂಡಿರುವ ಒಂದು ಭಾಗದಲ್ಲಿ ಮಳೆಗಾಲದಲ್ಲಿ ಹೊಳೆಯಿಂದಾಗಿ ಮಕ್ಕಳಿಗೆ, ಪೋಷಕರಿಗೆ ಈಗ ಇರುವ ಅಂಗನವಾಡಿ ಕೇಂದ್ರವನ್ನು ದಾಟಲು ಕಷ್ಟಕರವಾಗುತ್ತಿದೆ. ಸಮಸ್ಯೆ ಹೋಗಲಾಡಿಸಲು ಈ ಭಾಗಕ್ಕೆ ಮತ್ತೊಂದು ಅಂಗನವಾಡಿ ಕೇಂದ್ರದ ಅವಶ್ಯಕತೆ ಇದೆ. ಇದಕ್ಕೆ ಪಂಚಾಯಿತಿಯಿಂದ ಸ್ಥಳ ಗುರುತಿಸಬೇಕೆಂದು ಸದಸ್ಯ ಭರತ್ ಶೆಟ್ಟಿ ಆಗ್ರಹಿಸಿದರು.

ಸ್ಥಳ ಗುರುತಿಸುವ ಮೊದಲು, ಆ ಭಾಗದಲ್ಲಿ ಅಂಗನವಾಡಿಗೆ ಬರುವಂತಹ ಮಕ್ಕಳ ಸಮೀಕ್ಷೆಯಾಗಬೇಕು. ಆ ಬಳಿಕ ಸರ್ಕಾರದಿಂದ ಅಂಗನವಾಡಿ ಕೇಂದ್ರ ಮಂಜೂರಾಗಬೇಕು. ಬಳಿಕ ಸ್ಥಳ ಗುರುತಿಸಬಹುದು. ಜನಪ್ರತಿನಿಧಿಗಳು ಸರ್ಕಾರದ ಮುಂದೆ ಬೇಡಿಕೆಯನ್ನಿಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಕಾತ್ಯಾಯಿನಿ ತಿಳಿಸಿದರು.

ಸಿಆರ್‌ಪಿ ದಿನಕರ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಸಾಲ್ಯಾನ್, ಸದಸ್ಯರು, ಆರೋಗ್ಯ ಇಲಾಖೆ, ಪಶುವೈದ್ಯಕೀಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಮೇಶ್ ಬಂಗೇರ ವಾರ್ಡ್ ಸಭೆಗಳ ಮಾಹಿತಿ ನೀಡಿದರು.