ಹೆದ್ದಾರಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ

| Published : May 17 2024, 12:34 AM IST

ಸಾರಾಂಶ

ಈಗಾಗಲೇ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಸುತ್ತಮುತ್ತಲಿನ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಇದೇ ರಸ್ತೆಯಲ್ಲಿ ಜಾನುವಾರುಗಳೊಂದಿಗೆ ಓಡಾಡುತ್ತಾರೆ. ಗಾಜಿನ ಚೂರುಗಳು ಕಾಲುಗಳಿಗೆ ತಗುಲಿದರೆ ಅಪಾಯ ಗ್ಯಾರಂಟಿ ಎಂದು ಸ್ಥಳೀಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮುಳಬಾಗಿಲು

ನಗರದ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ಹಾಗೂ ನರಸಿಂಹ ತೀರ್ಥ ಬೈಪಾಸ್ ಮಧ್ಯದ ಮುಖ್ಯ ಹೆದ್ದಾರಿಯಲ್ಲಿ ಸುತ್ತಮುತ್ತಲಿನ ವ್ಯಾಪಾರಿಗಳು ಕಸದ ತ್ಯಾಜ್ಯ ಹಾಗೂ ಮದ್ಯಪಾನದ ಖಾಲಿ ಬಾಟಲುಗಳನ್ನು ರಸ್ತೆಯ ಪಕ್ಕದಲ್ಲಿಯೇ ರಾಶಿ ರಾಶಿಯಾಗಿ ಸುರಿಯುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ಭಯಪಡುವಂತಾಗಿದೆ ಎಂದು ಸಾರ್ವಜನಿಕರು ಹೇಳಿದರು.

ಮುಳಬಾಗಿಲು ನಗರದಿಂದ ಹೊಸ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ಹಾಗೂ ನರಸಿಂಹ ತೀರ್ಥದ ಮುಂಭಾಗದ ಮುಖ್ಯ ರಸ್ತೆಯ ಸುತ್ತಮುತ್ತಲಿನ ನಾನಾ ವ್ಯಾಪಾರಿಗಳು ಪ್ಲಾಸ್ಟಿಕ್ ತ್ಯಾಜ್ಯ, ಮಾಂಸಹಾರದ ತ್ಯಾಜ್ಯವನ್ನು ರಾಶಿ ರಾಶಿಯಾಗಿ ಸುರಿಯುತ್ತಿದ್ದಾರೆ,ಅಲ್ಲದೇ, ಸಾವಿರಾರು ಮದ್ಯಪಾನದ ಖಾಲಿ ಬಾಟಲುಗಳನ್ನು ಟ್ರ್ಯಾಕ್ಟರುಗಳಲ್ಲಿ ತಂದು ಸುರಿದಿದ್ದು, ಗಾಳಿಗೆ ಕಸ ಕಡ್ಡಿ ವಾಹನ ಸವಾರರ ಮೇಲೆ ಬೀಳುತ್ತಿದ್ದರೆ, ಒಡೆದ ಗಾಜಿನ ಚೂರುಗಳು ಪಾದಚಾರಿ ಮಾರ್ಗದಲ್ಲಿ ಬಿದ್ದಿವೆ. ಇದರಿಂದ ಪಾದಚಾರಿಗಳು ನಡೆಯಲಾಗದೇ ಸಂಕಷ್ಟಕ್ಕೆ ಸಿಲುಕಿದರೆ ವಾಹನ ಸವಾರರು ಕಸ ಕಡ್ಡಿಗಳಲ್ಲಿಯೇ ಸಂಚರಿಸುವಂತಾಗಿದೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಸುತ್ತಮುತ್ತಲಿನ ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಇದೇ ರಸ್ತೆಯಲ್ಲಿ ಜಾನುವಾರುಗಳೊಂದಿಗೆ ಓಡಾಡುತ್ತಾರೆ. ಗಾಜಿನ ಚೂರುಗಳು ಕಾಲುಗಳಿಗೆ ತಗುಲಿದರೆ ಅಪಾಯ ಗ್ಯಾರಂಟಿ ಎಂದು ಸ್ಥಳೀಯರು ಹೇಳಿದರು.

ಕೂಡಲೇ ನಗರಸಭೆಯ ಅಧಿಕಾರಿಗಳು ಗಮನ ಹರಿಸಿ ತ್ಯಾಜ್ಯವನ್ನು ಸುರಿಯುತ್ತಿರುವವರಿಗೆ ಸ್ವಚ್ಛತೆ ಕಾಪಾಡುವಂತೆ ಆದೇಶಿಸಬೇಕು ಎಂಬುದು ವಾಹನ ಸವಾರರು, ಪಾದಚಾರಿಗಳ ಆಗ್ರಹವಾಗಿದೆ.

ಈ ಸಂಬಂಧ ನಗರಸಭೆಯ ನೋಡಲ್ ಅಧಿಕಾರಿ ಸುನಿಲ್ ಕುಮಾರ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ತ್ಯಾಜ್ಯವನ್ನು ರಸ್ತೆಯ ಬದಿ ಹಾಕುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ, ಕೂಡಲೇ ಪರಿಶೀಲಿಸಲಾಗುವುದು ಎಂದು ಹೇಳಿದರು.