ಎಲ್ಲ ಸಂಸ್ಕಾರಗಳಲ್ಲಿ ಗರ್ಭ ಸಂಸ್ಕಾರ ಅತ್ಯಂತ ಮುಖ್ಯ

| Published : May 02 2025, 12:10 AM IST

ಸಾರಾಂಶ

ಎಲ್ಲ ಸಂಸ್ಕಾರಗಳಲ್ಲಿ ಗರ್ಭ ಸಂಸ್ಕಾರ ಅತ್ಯಂತ ಮುಖ್ಯವಾಗಿದೆ. ತಾಯಿ ಗರ್ಭಿಣಿಯಾಗಿದ್ದಾಗ ನನ್ನ ಮಗು ದೇಶಸೇವೆ ಮಾಡಬೇಕು, ಪರೋಪಕಾರಿ ಆಗಿರಬೇಕು, ಮಾನವೀಯತೆ ಗುಣ ಹೊಂದಿರಬೇಕು. ಸಮಾಜಕ್ಕೆ ಒಳ್ಳೆಯ ಆದರ್ಶ ವ್ಯಕ್ತಿ ಆಗಬೇಕೆಂಬುವುದನ್ನು ಗರ್ಭಿಣಿಯಾಗಿರುವಾಗ ನಿತ್ಯ ಮನದಲ್ಲಿ ಸಂಕಲ್ಪ ಮಾಡಿದರೇ ಆದರ್ಶ ಮಕ್ಕಳು ಜನಿಸುತ್ತಾರೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು ನುಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಮಹಿಷವಾಡಗಿ ಗ್ರಾಮದಲ್ಲಿ ಮಂಗಳವಾರ ನಡೆದ ಪಂಚಕಲ್ಯಾಣ ಮಹಾ ಮಹೋತ್ಸವದ ಗರ್ಭ ಕಲ್ಯಾಣ ಪೂರ್ವಾರ್ಧ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಣ್ಣಿಗೆ ಸಂಸ್ಕಾರ ಕೊಟ್ಟರೇ ಮಡಿಕೆಯಾಗುತ್ತದೆ. ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುತ್ತದೆ. ಎಲ್ಲರ ಜೀವನದಲ್ಲಿ ಸಂಸ್ಕಾರ ತುಂಬಾ ಮುಖ್ಯವಾಗಿದೆ. ಸಣ್ಣ ಬೀಜದಲ್ಲಿ ಹೇಗೆ ದೊಡ್ಡ ವೃಕ್ಷ ಇದೆಯೋ ಹಾಗೆಯೇ ಆತ್ಮದಲ್ಲಿ ಪರಮಾತ್ಮ ಇದ್ದಾನೆ. ಜೈನ ಧರ್ಮದ ಎಲ್ಲ ತೀರ್ಥಂಕರರು ವಿವಿಧ ವೃಕ್ಷದ ಕೆಳಗೆ ಕುಳಿತು ಧ್ಯಾನ ಮಾಡಿದ್ದಾರೆ. ಒಂದು ವೃಕ್ಷ ನಾಟಿ ಮಾಡಿದರೇ 108 ಪಂಚಕಲ್ಯಾಣ ಪೂಜೆ ಮಾಡಿದಂತೆ. ನಮಗೆ ಆಮ್ಲಜನಕ ಒದಗಿಸುವ ಗಿಡ ಮರಗಳನ್ನು ಬೆಳೆಸಬೇಕು ಎಂದರು.ಶ್ರೀ 108 ಉತ್ತಮಸಾಗರ ಮುನಿ ಮಹಾರಾಜರು ಮಾತನಾಡಿ, ಭೂಮಿಯಲ್ಲಿ ಒಳ್ಳೆಯ ಬೀಜ ಬಿತ್ತಿದರೆ ಒಳ್ಳೆಯ ಬೆಳೆ ಬರುತ್ತದೆ. ಹಾಗೆಯೇ ಒಳ್ಳೆಯ ಸಂಸ್ಕಾರ ಎಲ್ಲಡೆ ಪಸರಿಸಿದರೆ ಒಳ್ಳೆಯ ನಾಗರಿಕರು ದೊರೆಯುತ್ತಾರೆ. ಸಂಸ್ಕಾರ ಸಂಸ್ಕೃತಿ ಬೆಳೆಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದರು.

105 ಕರುಣಾಮತಿ ಮಾತಾಜಿ ಮಾತನಾಡಿ, ಭಾರತದ ಭವ್ಯವಾದ ಧರ್ಮವನ್ನು ಎಲ್ಲರೂ ಪಾಲಿಸಬೇಕು. ಸಂಸ್ಕಾರ ಎಂಬುವುದು ತಾಯಿಯ ಗರ್ಭದಿಂದಲೇ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ 105 ದರ್ಶನ ಭೂಷಣಮತಿ ಮಾತಾಜಿ, 105 ಜ್ಞಾನ ಭೂಷಣಮತಿ ಮಾತಾಜಿ, 105 ಚಾರಿತ್ರ್ಯ ಭೂಷಣಮತಿ ಮಾತಾಜಿ ಹಾಗೂ ಇತರರು ಇದ್ದರು. ಗರ್ಭ ಕಲ್ಯಾಣ ಪೂರ್ವಾರ್ಧ ಕಾರ್ಯಕ್ರಮದ ವಿವಿಧ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಪಾಕಿಸ್ತಾನಿ ಭಯೋತ್ಪಾದಕರು ಭಾರತೀಯರ ಜೀವ ತೆಗೆಯುವ ಮನಸ್ಥಿತಿಯಿಂದ ಹೊರ ಬರಬೇಕು. ಅಹಿಂಸೆ ಸೌಹಾರ್ದತೆಯಿಂದ ಬಾಳುವುದು ಭಾರತೀಯ ನೆಲದ ಗುಣ ಧರ್ಮವಾಗಿದೆ. ನೀಚ ಕೃತ್ಯ ಮಾಡಿ ಸುಸಂಸ್ಕೃತ ಭಾರತೀಯರ ತಾಳ್ಮೆಯನ್ನು ಪರೀಕ್ಷಿಸಬಾರದು.

- ಆಚಾರ್ಯ ಶ್ರೀ 108 ಕುಲರತ್ನ ಭೂಷಣ ಮುನಿ ಮಹಾರಾಜರು,

ಹಳಿಂಗಳಿ ಭದ್ರಗಿರಿ ಬೆಟ್ಟ.