ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ ಪುನಾರಾಂಭಕ್ಕೆ ಆಗ್ರಹ

| Published : Feb 26 2025, 01:07 AM IST

ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ ಪುನಾರಾಂಭಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನನೆಗುದಿಗೆ ಬಿದ್ದಿರುವ ತಾಲೂಕಿನ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ ಪುನಾರಾಂಭಕ್ಕೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಂಗಳವಾರ ಧರಣಿ ನಡೆಸಿದರು.

ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಧರಣಿ । ಸರ್ಕಾರದ ವಿರುದ್ಧ ಆಕ್ರೋಶಕನ್ನಡಪ್ರಭ ವಾರ್ತೆ ಹರಪನಹಳ್ಳಿ

ನನೆಗುದಿಗೆ ಬಿದ್ದಿರುವ ತಾಲೂಕಿನ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ ಪುನಾರಾಂಭಕ್ಕೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮಂಗಳವಾರ ಧರಣಿ ನಡೆಸಿದರು.

ಎಐಕೆಎಸ್‌ ಜಿಲ್ಲಾದ್ಯಕ್ಷ ಗುಡಿಹಳ್ಳಿ ಹಾಲೇಶ ಮಾತನಾಡಿ, ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರ ಕನಸ್ಸಿನ ಕೂಸೆಂದು ಹೇಳಲಾಗುವ ಈ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಯೋಜನೆ ಜೆ.ಎಚ್‌. ಪಾಟೇಲ್‌ ಅವರಿಂದ ಈವರೆಗೂ ಅನೇಕ ಮುಖ್ಯಮಂತ್ರಿಗಳು ಬಂದು ಹೋದರೂ ಪೂರ್ಣಗೊಂಡಿಲ್ಲ ಎಂದು ದೂರಿದರು.

ಸುಮಾರು 4600 ಹೆಕ್ಟೇರ್‌ ಭೂಮಿ ನೀರಾವರಿಗೆ ಒಳಪಟ್ಟು ರೈತರ ಬದುಕು ಹಸನಾಗುತ್ತದೆ, ಇಲ್ಲಿ ನಿರ್ಮಾಣವಾಗುವ ಪಿಕಪ್‌ ನಲ್ಲಿ 50 ದಶಲಕ್ಷ ಘನ ಅಡಿಯಷ್ಟು ನೀರು ಸಂಗ್ರಹವಾಗುವುದರಿಂದ ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗುತ್ತದೆ ಎಂದರು.

ಹಾವೇರಿ ಜಿಲ್ಲೆಗೆ ಈ ಭಾಗದ ಜನರು ಸಂಚಾರ ಮಾಡಲು ಇಲ್ಲಿ ನಿರ್ಮಾಣವಾಗುವ ಬ್ರಿಡ್ಜ್‌ ಹತ್ತಿರವಾಗಿಸುತ್ತದೆ. ತಾಲೂಕಿನ 132 ಗ್ರಾಮಗಳಿಗೆ ಕುಡಿಯುವ ನೀರು ಕೊಡಬಹುದು ಇಂತಹ ಮಹತ್ತರ ಯೋಜನೆಯ ಕಾಮಗಾರಿ ಅಪೂರ್ಣಗೊಂಡು ನನೆಗುದಿಗೆ ಬಿದ್ದಿದೆ ಎಂದು ಹೇಳಿದರು.

ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಉರುಳಿವೆ. ಆದ್ದರಿಂದ ಕಾಮಗಾರಿ ಪುನರಾರಂಭಿಸುವಂತೆ ತಾಲೂಕಿನ 37 ಗ್ರಾಮ ಪಂಚಾಯ್ತಿಗಳಲ್ಲಿ ಪಕ್ಷ ಬೇಧ ಮರೆತು ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಂಡು ಸಭಾ ನಡಾವಳಿ ಮೂಲಕ ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಆದರೂ ಈವರೆಗೂ ಸರ್ಕಾರ ಇತ್ತ ಗಮನ ಕೊಡುತ್ತಾ ಇಲ್ಲ ಎಂದು ಆರೋಪಿಸಿದರು.

ಸ್ಥಳೀಯ ರಾಜಕಾರಣಿಗಳು ಪ್ರತಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ ವಿಚಾರವನ್ನು ಪ್ರಸ್ತಾಪಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ಈ ಕಾಮಗಾರಿ ಪೂರ್ಣ ಮಾಡಿದರೆ ಕೃಷಿಗೆ ನೀರಾದರೆ, ರಾಣೆಬೆನ್ನೂರು ತಾಲೂಕು ಸೇರಿದಂತೆ ಹಾವೇರಿ ಜಿಲ್ಲೆಯ ಅನೇಕ ಗ್ರಾಮಗಳು ನಮ್ಮ ಭಾಗದ ಜನರಿಗೆ ಸಂಚರಿಸಲು ಹತ್ತಿರವಾಗುತ್ತವೆ ಎಂದು ಅವರು ತಿಳಿಸಿದರು.

ಆದ್ದರಿಂದ ಇಲ್ಲಿಯ ಶಾಸಕರು, ಅಧಿಕಾರಿಗಳು ಸ್ಘಗಿತಗೊಂಡಿರುವ ಗರ್ಭಗುಡಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಾಮಗಾರಿ ಪುನಾರಾಂಬಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಉಪವಿಭಾಗಾಧಿಕಾರಿ ಚಿದಾನಂದಗುರುಸ್ವಾಮಿ ಧರಣಿ ಸ್ಥಳ‍ಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಎಚ್‌.ಎಂ. ಮಹೇಶ್ವರಸ್ವಾಮಿ, ಎ.ಎಂ. ವಿಶ್ವನಾಥ, ಎ.ದುರುಗಪ್ಪ, ಹನುಮಂತನಾಯ್ಕ, ದುಗ್ಗಾವತ್ತಿ ಹನುಮಂತಪ್ಪ, ರಮೇಶನಾಯ್ಕ, ಅಭಿಷೇಕ ಬಣಕಾರ, ಅರಸೀಕೆರೆ ರಂಗಪ್ಪ, ಪರಶುರಾಮ, ಕರಿಯಪ್ಪ, ಉಚ್ಚಂಗಿದುರ್ಗ ಚೌಡಪ್ಪ, ಬಳಿಗಾನೂರು ಕೊಟ್ರೇಶ, ಹರಿಯಮ್ಮನಹಳ್ಳಿ ಬಸವರಾಜ, ಹಲಗಿ ಸುರೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.