ಸಾರಾಂಶ
ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ; ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಹಾಗೂ ಇತರ ಪ್ರದೇಶಗಳ ಜನಜೀವನ ಹಸನಗೊಳಿಸಬೇಕಾದ ತಾಲೂಕಿನ ಗರ್ಭಗುಡಿ ಪಿಕಪ್ ಕಂ ಬ್ರಿಡ್ಜ್ ಕಾಮಗಾರಿ ನನೆಗುದಿಗೆ ಬಿದ್ದು ವರ್ಷಗಳೇ ಕಳೆದಿವೆ. ಕಾಮಗಾರಿ ಪುನಾರಂಭ ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ತಾಲೂಕಿನ ಗರ್ಭಗುಡಿ ಗ್ರಾಮ ಮತ್ತು ರಾಣಿಬೆನ್ನೂರು ತಾಲೂಕಿನ ಬೇಲೂರು ಗ್ರಾಮಗಳ ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಿಸಿ ನದಿಯ ಎರಡೂ ಕಡೆಯ ದಂಡೆಗಳಲ್ಲಿ ಪಂಪ್‌ಸೆಟ್ ಅಳವಡಿಸಿ ನೀರನ್ನು ಮೇಲಕ್ಕೆ ಏರಿಸಿ ಅಲ್ಲಿಂದ ಕಾಲುವೆಗಳ ಮೂಲಕ ಹರಿಸಿ ಹರಪನಹಳ್ಳಿ, ರಾಣಿಬೆನ್ನೂರು ತಾಲೂಕುಗಳ ಸುಮಾರು 3756 ಎಕರೆ ಜಮೀನಿಗೆ ನೀರುಣಿಸಲು ಯೋಜನೆ ರೂಪಿಸಲಾಗಿದೆ.
₹51 ಕೋಟಿ ಯೋಜನೆ:ಸುಮಾರು ₹51 ಕೋಟಿಗೆ ಕ್ರಿಯಾ ಯೋಜನೆ ರೂಪುಗೊಂಡು ಅಮೃತ ಕನ್‌ಸ್ಟ್ರಕ್ಷನ್‌ಗೆ ಗುತ್ತಿಗೆ ನೀಡಿದ್ದು, ಅವರು ಉಪ ಗುತ್ತಿಗೆ ನೀಡಿದರು. ಆಗ ಉಪಗುತ್ತಿಗೆ ಪಡೆದವರು ಕೊನೆಗೂ ಕೆಲಸ ಆರಂಭಿಸಿದರು.
ಮೊದಲಿಗೆ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು 2 ವರ್ಷ ಸಮಯ ತೆಗೆದುಕೊಂಡು ನಂತರ ಇನ್ನು 2 ವರ್ಷ ಸಮಯ ವಿಸ್ತರಿಸಿಕೊಂಡರು. ಶೇ.30ರಷ್ಟು ಭಾಗ ಕೆಲಸ ಮುಗಿಸಿ ಸರ್ಕಾರದಿಂದ ಹಣ ಬಿಡುಗಡೆಗೊಂಡಿಲ್ಲ ಎಂದು ಎರಡೂವರೆ ವರ್ಷದಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.ಈ ಕುರಿತು ಅನೇಕರು ಹೋರಾಟ ಮಾಡಿದರೂ ಈವರೆಗೂ ಪ್ರಯೋಜನ ಆಗಿಲ್ಲ. ನದಿಯಲ್ಲಿ ನೀರು ಇಲ್ಲದಾಗ, ಅಂದರೆ ಬೇಸಿಗೆ ಸಮಯದಲ್ಲಿ ಕಾಮಗಾರಿ ನಡೆಸಲು ಅನುಕೂಲ. ಆದರೆ ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಹಂತದಲ್ಲೂ ಕಾಮಗಾರಿ ಆರಂಭಗೊಂಡಿಲ್ಲ. ಕ್ರಿಯಾಯೋಜನೆ ಮೊತ್ತ ಸಹ ಹೆಚ್ಚಾಗುತ್ತಾ ಹೋಗುವುದು ಸಹಜ. ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಗರ್ಭಗುಡಿ ಪಿಕಪ್ ಕಂ ಬ್ರಿಡ್ಜ್ ಯೋಜನೆ ಸಾಕಾರಗೊಳ್ಳಬೇಕಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ತೀವ್ರ ಗಮನ ಹರಿಸಬೇಕಿದೆ.
ಗುತ್ತಿಗೆದಾರರಿಗೆ ಬಾಕಿ ಹಣ ಇತ್ತೀಚೆಗೆ ಬಿಡುಗಡೆಯಾಗಿದೆ. ಇನ್ನೂ ₹5 ಕೋಟಿ ಬಾಕಿ ಇದೆ. ನಾವು ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೇವೆ. ಅವರು ಸಹ ನಮಗೆ ಬಾಕಿ ಇರುವುದಕ್ಕೆ ನೋಟಿಸ್ ಕೊಟ್ಟಿದ್ದಾರೆ. ದರ ಕುರಿತು ಆಕ್ಷೇಪವಿದೆ. ಸರ್ಕಾರದ ಮಟ್ಟದಲ್ಲಿ ಸಭೆ ಮಾಡಿ ಸಮಸ್ಯೆ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ನವೀನಕುಮಾರ.