ಸಾರಾಂಶ
ರಾಣಿಬೆನ್ನೂರು: ಬೆಳ್ಳುಳ್ಳಿ ನಮ್ಮ ರಾಜ್ಯದ ಪ್ರಮುಖ ಮಸಾಲೆ ಬೆಳೆಗಳಲ್ಲಿ ಒಂದಾಗಿದೆ ಎಂದು ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ ಎಚ್.ಎಮ್. ಹೇಳಿದರು. ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಬಸವಂತಪ್ಪ ಜಾಪಾಳಿ ಇವರ ಕ್ಷೇತ್ರದಲ್ಲಿ ಬೆಳ್ಳುಳ್ಳಿ ಬೆಳೆಯ ಸಮಗ್ರ ಬೆಳೆ ನಿರ್ವಹಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾವಯವ ಪದಾರ್ಥಗಳಿಂದ ಕೂಡಿದ ಸಾಧಾರಣ ಕಪ್ಪು ಅಥವಾ ನೀರು ಬಸಿದು ಹೋಗುವ ಗೋಡು ಮಣ್ಣಿನಲ್ಲಿ ಬೆಳ್ಳುಳ್ಳಿಯು ಚೆನ್ನಾಗಿ ಬೆಳೆಯುತ್ತದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಬೆಳ್ಳುಳ್ಳಿ ಬೆಳೆಯಲ್ಲಿ ಡಿಡಬ್ಲೂಡಿ, ಜಿ-1 ಎಂಬ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ಇದು ರಾಣಿಬೆನ್ನೂರು ಲೋಕಲ್ ತಳಿಗಿಂತ ಅಧಿಕ ಇಳುವರಿ ನೀಡುವ ಗುಣವನ್ನು ಹೊಂದಿದೆ. ಸಾಮಾನ್ಯವಾಗಿ ಬೆಳ್ಳುಳ್ಳಿಯಲ್ಲಿ ತಿರುಚು ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು ಇದನ್ನು ಗಿಡದ ತುದಿಯು ಸುತ್ತಿಕೊಂಡತ್ತಾಗಿ ಬಾಗಿರುವ ಚಿಹ್ನೆಯ ಮೂಲಕ ಕಂಡುಕೊಳ್ಳಬಹುದು. ಇದರ ನಿರ್ವಹಣೆಗೆ ಬೋರಾನ್ ಪೂರೈಕೆ ಮಾಡಲು ಸಿಂಪರಣೆ ಮೂಲಕ ಶೇ. 0.2ರ ಸಾಲಿಬೊರ್ ನೀಡಬೇಕು (2 ಗ್ರಾಂ ಪ್ರತಿ ಲೀಟರ್ ನೀರಿಗೆ). ಬಿತ್ತನೆ ಸಮಯದಲ್ಲಿ ಟ್ರೈಕೋಡರ್ಮಾ ಮತ್ತು ಸೋಡೊಮೊನಾಸ್ ಪ್ರತಿ ಎಕರೆಗೆ 2 ಕೆ.ಜಿ. ಜೊತೆಗೆ ಸುಮಾರು 4 ಕೆ.ಜಿ. ಯಷ್ಟು ಜಿಂಕ್ ಸಲ್ಫೇಟ್ ಮತ್ತು ಸಲ್ಫರ್‌ನ್ನು ಬಿತ್ತನೆ ಸಮಯದಲ್ಲಿ ನೀಡಬೇಕು. ಹೆಕ್ಸಾಕೋನೋಜೊಲ್ ಶಿಲೀಂಧ್ರನಾಶಕವನ್ನು ಪ್ರತಿ ಲೀಟರ್ ನೀರಿಗೆ 1 ಮಿ.ಲೀ ಯಂತೆ ಬೆರೆಸಿ ಬಿತ್ತನೆ ಮಾಡಿದ 45 ಮತ್ತು 60 ದಿನಗಳ ನಂತರ ಸಿಂಪಡಿಸಬೇಕು. ಮುಂಗಾರು ಮಳೆ ಅಧಿಕವಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವ ಕ್ಷೇತ್ರ‍್ರಗಳಲ್ಲಿ ಸಾರಜನಕ ಹಾಗೂ ಪೊಟ್ಯಾಷ್ ಪೂರೈಕೆ ಮಾಡಲು ಸಿಂಪರಣೆ ಮೂಲಕ ಶೇ. 0.5ರ ಪೊಟ್ಯಾಸಿಯಂ ನೈಟ್ರೇಟ್ ನೀಡಬೇಕು (5 ಗ್ರಾಂ ಪ್ರತಿ ಲೀಟರ್ ನೀರಿಗೆ) ಅಥವಾ ಶೇ. 0.5 ರ 19:19:19 (5 ಗ್ರಾಂ/ಲೀಟರ್ ನೀರಿಗೆ) ಸಿಂಪರಣೆ ಮಾಡಬೇಕು. ಇದರಿಂದ ಗಡ್ಡೆ ಗಾತ್ರ ಸಹ ದೊಡ್ಡದಾಗುವುದರಿಂದ ರೈತರಿಗೆ ಲಾಭದಾಯಕವಾಗುತ್ತದೆ ಎಂದರು.ಕೇಂದ್ರದ ಬೇಸಾಯಶಾಸ್ತ್ರ, ವಿಷಯತಜ್ಞೆ ಡಾ. ಸಿದ್ದಗಂಗಮ್ಮ ಕೆ. ಆರ್ ಮಾತನಾಡ, ಬೆಳ್ಳುಳ್ಳಿ ಬೆಳೆಯಲ್ಲಿ ಕಳೆ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತು ಹಾಗೂ ಇತರೆ ಮುಂಗಾರು ಬೆಳೆಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ತರಬೇತಿಯಲ್ಲಿ ಗ್ರಾಮದ ಬೆಳ್ಳುಳ್ಳಿ ಬೆಳೆಯುತ್ತಿರುವ 18 ಜನ ರೈತರು ಪಾಲ್ಗೊಂಡಿದ್ದರು.