ಮಲಗುಂದ ಗ್ರಾಮದಲ್ಲಿ ಗರುಡನಂದಿಗಂಭ ಶಾಸನ ಪತ್ತೆ

| Published : Feb 06 2025, 12:18 AM IST

ಸಾರಾಂಶ

ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ಶಾಸನ ಇರುವ ಒಂದು ವಿಶೇಷ ಗರುಡನಂದಿ ಕಂಬ ಪತ್ತೆಯಾಗಿದೆ.

ಹಾವೇರಿ: ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ಶಾಸನ ಇರುವ ಒಂದು ವಿಶೇಷ ಗರುಡನಂದಿ ಕಂಬ ಪತ್ತೆಯಾಗಿದೆ. ಇದೊಂದು ಗ್ರಾಮದತ್ತಿ ನಿಮಿತ್ತ ನಿರ್ಮಿಸಿದ ಕಂಬವಾಗಿದೆ ಎಂದು ಕಮಲಾಪುರ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ. ಆರ್. ಶೇಜೇಶ್ವರ ತಿಳಿಸಿದ್ದಾರೆ.

ಇತ್ತೀಚೆಗೆ ಮಲಗುಂದ ಗ್ರಾಮಕ್ಕೆ ಕ್ಷೇತ್ರ ಕಾರ್ಯ ನಿಮಿತ್ತ ಹೋದಾಗ ಈ ಶಾಸನ ಪತ್ತೆಯಾಗಿದ್ದು, ಶಿಷ್ಟ ಶಿಲೆಯಲ್ಲಿ ನಿರ್ಮಿತವಾದ ಈ ಕಂಬದ ಮೇಲ್ಭಾಗದಲ್ಲಿ ಪಶ್ಚಿಮಾಭಿಮುಖವಾಗಿ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ನಂದಿಯ ದುಂಡುಶಿಲ್ಪದ ಕೆಳಗಿನ ಪಟ್ಟಿಯಲ್ಲಿ ಗರುಡನ ಉಬ್ಬುಶಿಲ್ಪ ಕೆತ್ತಲಾಗಿದೆ. ಗರುಡ ಶಿಲ್ಪದ ಇಕ್ಕೆಲಗಳಲ್ಲಿ ವಿಷ್ಣುವಿನ ಸಂಕೇತವಾಗಿ ಶಂಖ ಹಾಗೂ ಚಿತ್ರಗಳನ್ನು ಚಿತ್ರಿಸಿದ್ದನ್ನು ಇಲ್ಲಿ ಕಾಣಬಹುದು. ನಂದಿ ಹಾಗೂ ಗರುಡ ಈಶಕೇಶವರ ವಾಹನಗಳು. ಅವುಗಳನ್ನು ಸಮೀಕರಿಸಿ ಕಂಬ ನಿರ್ಮಿತವಾಗಿದೆ. ಈ ಕಂಬ 165 ಸೆಂಟಿ ಮೀಟರ್ ಎತ್ತರ ಹಾಗೂ 14 ಸೆಂಟಿ ಮೀಟರ್ ಅಗಲವಿದೆ. ಕಂಬದ ಪೂರ್ವ ಮುಖದ ಸಮತಟ್ಟಿನಲ್ಲಿ 05 ಸಾಲಿನ ಕನ್ನಡ ಲಿಪಿಯ ಹಾಗೂ ಕನ್ನಡ ಭಾಷೆಯ ಶಾಸನವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಶಾಸನದಲ್ಲಿ ಹರಿಹರದೇವರ ಹಳ್ಳಿ ಮಲ್ಲಿಗುಂದ ಎಂಬ ಧರ್ಮಸ್ಥಳವನ್ನು ಹಾಳು ಮಾಡಿದವನ ಸಂತಾನ ಹಾನಿಯಾಗುತ್ತದೆ ಎಂದು ಬರೆಯಲಾಗಿದೆ. ಶೈವ ಹಾಗೂ ವೈಷ್ಣವ ಸಮಯಗಳ ಭಾವೈಕ್ಯತೆಯ ಹರಿಹರರ ಪ್ರತಿರೂಪ ಗರುಡನಂದಿ ಕಂಬವನ್ನು ನೆಟ್ಟು ಅದಕ್ಕೆ ಮಲ್ಲಿಗುಂದವನ್ನು ದತ್ತಿ ಬಿಡಲಾಗಿದೆ. ಕಂಬವನ್ನು ನೆಟ್ಟ ಧರ್ಮಸ್ಥಳವನ್ನು ಹಾಳು ಮಾಡಿದವನ ವಂಶ ಹಾಳಾಗುತ್ತದೆ ಎಂಬ ಶಾಪಾಶಯವನು ಇಲ್ಲಿ ಹೇಳಲಾಗಿದೆ. ದತ್ತಿಯ ಹಕ್ಕು, ದತ್ತಿಗ್ರಾಮ, ಹರಿಹರ ದೈವ ಹಾಗೂ ಶಾಪಾಶಯ ಈ ಎಲ್ಲ ವಿವರಗಳನ್ನು ಚಿಕ್ಕದಾಗಿ ''ಕನ್ನಡಿಯಲ್ಲಿ ಕರಿ ಹಿಡಿದಂತೆ'' ಶಾಸನದಲ್ಲಿ ತರಲಾಗಿದೆ. ಇದು ಕ್ರಿ.ಶ. 13ನೇ ಶತಮಾನದ ಸೇವುಣರ ಕಾಲದ ಶಾಸನವಾಗಿದೆ.

ಹರಿಹರ ದೇವರು ಎಂದರೆ ಇದೇ ಗರುಡನಂದಿಗಂಬ. ಹರಿಹರರ ದೇವಾಲಯನ್ನು ಕಟ್ಟಲು ಅಸಾಧ್ಯವಾದಾಗ ಅವರ ವಾಹನಗಳ ಗುರುತು ಹಾಕಿ ಕಂಬವನ್ನು ನೆಡಲಾಗುತ್ತಿತ್ತು. ದೇವಾಲಯ ನಿರ್ಮಾಣ ಬಹುವೆಚ್ಚದ್ದು. ಕಂಬ ನಿರ್ಮಾಣ ಕಡಿಮೆ ಖರ್ಚಿನದು. ಹಾಗಾಗಿ ಕನ್ನಡಿಗರು ಸರಳ ನಿಲುಗಂಬದ ಬಯಲು ಆಲಯವನ್ನು ನಿರ್ಮಿಸಿಕೊಂಡರು. ಮಲಗುಂದದ ಗರುಡನಂದಿಕಂಬ ಇದಕ್ಕೊಂದು ಉದಾಹರಣೆ.

ಧರ್ಮಸಮನ್ವಯ ಕಂಬ

ಹರಿ ಮತ್ತು ಹರ ಅವತಾರವಾದ ಹರಿಹರೇಶ್ವರ ದೈವವು ಒಂದು ಧರ್ಮಸಮಾಗಮದ ದೇವರಾಗಿದೆ. ಪ್ರಾಚೀನ ಚತುಸ್ಸಮಯಗಳಲ್ಲಿ ಪ್ರಮುಖವಾದ ಶೈವ ಹಾಗೂ ವೈಷ್ಣವ ಸಮಯಗಳು ಒಂದೇ ಎಂಬಂತೆ ಸಾರುತ್ತಿದೆ. ಅಂತೆಯೇ ವಿಷ್ಣುವಾಹನವಾದ ಗರುಡವನ್ನು ಹಾಗೂ ಶಿವನ ವಾಹನವಾದ ನಂದಿಯನ್ನು ಒಟ್ಟೊಟ್ಟಿಗೆ ಸಮೀಕರಿಸಿ ಕಂಬವನ್ನು ಕೆತ್ತುವ ಸಂಪ್ರದಾಯ ತುಂಗಭದ್ರ ಎಡ ಹಾಗೂ ಬಲದಂಡೆ ಊರುಗಳಲ್ಲಿ ಕಂಡುಬರುತ್ತದೆ. ಹರಿಹರ ತಾಲೂಕಿನ ಬಿಳಸನೂರು. ರಾಣಿಬೆನ್ನೂರು ತಾಲೂಕಿನ ಗುಡ್ಡದಹೊಸಳ್ಳಿ, ನದಿಹರಳಹಳ್ಳಿ, ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ಇದೇ ತರಹದ ಗರುಡ ನಂದಿಗಂಬಗಳು ಕಂಡುಬರುತ್ತವೆ. ಈ ಕಂಬಗಳು ಕನ್ನಡ ಸಂಸ್ಕೃತಿಯ ವಿಶೇಷ ಎಂದು ತಿಳಿಸಿದ್ದಾರೆ.

ಕ್ಷೇತ್ರ ಕಾರ್ಯದಲ್ಲಿ ನೆರವಾದ ಡಾ. ಚಾಮರಾಜ ಕಮ್ಮಾರ, ಡಾ. ರವಿಕುಮಾರ ಕೆ. ನವಲಗುಂದ, ಡಾ. ಜಗದೀಶ ಅವರಿಗೆ ಹಾಗೂ ಮಲಗುಂದದ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದ್ದಾರೆ.