ರಾಜ್ಯ ಸರ್ಕಾರವು ಪಾರ್ವತಿ ಅವರಿಗೆ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರು. ನೀಡತೊಡಗಿತು. ಸುಮಾರು ಹತ್ತು ತಿಂಗಳ ಹಣವನ್ನು ಜಮೆ ಮಾಡಿ 2 ದನಗಳನ್ನು ಖರೀದಿಸಿ ಸ್ವದ್ಯೋಗ

ಉಡುಪಿ: ಜಿಲ್ಲೆಯ ಹಿಲಿಯಾಣ ಗ್ರಾಮದ ಕಾರಿಕೊಡ್ಲು ಎಂಬಲ್ಲಿನ ಬಡ ಮಹಿಳೆ ಪಾರ್ವತಿ ಬಾಯಿ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ, ಗಂಡನ ದುಡಿಮೆಯಿಂದ ನಾಲ್ವರ ಜೀವನ ಸಾಗುತಿತ್ತಾದರೂ ಮಕ್ಕಳ ಶಿಕ್ಷಣಕ್ಕೆ ಮತ್ತು ಔಷಧಕ್ಕೆ ಆರ್ಥಿಕ ತೊಂದರೆಯಾಗಿತ್ತು.

ಈ ಸಂದರ್ಭ ರಾಜ್ಯ ಸರ್ಕಾರವು ಪಾರ್ವತಿ ಅವರಿಗೆ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರು. ನೀಡತೊಡಗಿತು. ಸುಮಾರು ಹತ್ತು ತಿಂಗಳ ಹಣವನ್ನು ಜಮೆ ಮಾಡಿ 2 ದನಗಳನ್ನು ಖರೀದಿಸಿ ಸ್ವದ್ಯೋಗ ಆರಂಭಿಸಿದರು.ಈಗ ಪಾರ್ವತಿ ಅವರು ಹಾಲು ಮಾರಿ ಪ್ರತಿ ತಿಂಗಳು ಹತ್ತಾರು ಸಾವಿರ ರು. ಸಂಪಾದಿಸುತ್ತಾರೆ, ಮಕ್ಕಳನ್ನು ಶಾಲೆಗೆ ಕಳುಹಿಸುತಿದ್ದಾರೆ. ಒಳ್ಳೆಯ ಬಟ್ಟೆಬರೆಗಳ‍ನ್ನು ತೆಗೆಸಿಕೊಟ್ಟಿದ್ದಾರೆ. ತಾವು ಕೂಡ ಶಕ್ತಿ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಓಡಾಡುತಿದ್ದಾರೆ. ಆರ್ಥಿಕವಾಗಿ ತಮ್ಮ ಕುಟುಂಬ ಸ್ವಾವಲಂಭಿಯಾಗಿದೆ ಎನ್ನುತ್ತಾರೆ ಪಾರ್ವತಿ ಬಾಯಿ.

ಇದೇ ರೀತಿ ಕೋಡಿ ಗ್ರಾಮದ ಹೊಸಬೆಂಗ್ರೆಯ ನೇತ್ರಾವತಿ ಅವರು ಕೂಡ ಗೃಹಲಕ್ಷ್ಮೀ ಯೋಜನೆಯಡಿ ಒಂದಷ್ಟು ಹಣವನ್ನು ಜಮೆ ಮಾಡಿ ಹತ್ತಿಯಿಂದ ದೀಪದ ಬತ್ತಿ ತಯಾರಿಸುವ ಯಂತ್ರವನ್ನು ಖರೀದಿಸಿ, ಬತ್ತಿ ತಯಾರಿಸಿ ಅಂಗಡಿಗಳಿಗೆ ಮಾರಿ, ಪ್ರತಿ ತಿಂಗಳು ಆದಾಯ ಗಳಿಸುತಿದ್ದಾರೆ ಮತ್ತು ತನ್ನಿಬ್ಬರು ಮಕ್ಕಳೊಂದಿಗೆ ಸ್ವಾವಲಂಭಿ ಬದುಕು ನಡೆಸುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಿಂದ ಮನೆಗೆ ಉಚಿತ್ ವಿದ್ಯುತ್ ದೊರೆಯುತ್ತಿರುವುದು ಕೂಡ ಅವರ ಸ್ವದ್ಯೋಗಕ್ಕೆ ಇನ್ನಷ್ಟು ಬಲ ತುಂಬಿದೆ.ದೂರದ ಹಾವೇರಿಯಿಂದ ಉಡುಪಿಗೆ ಉದ್ಯೋಗಕ್ಕಾಗಿ ವಲಸೆ ಬಂದ ಕುಸುಮಾ ಮಡಿವಾಳ ಕೂಡ ಗೃಹಲಕ್ಷ್ಮೀ ಯೋಜನೆ ಫಲಾನುಭವಿಯಾಗಿದ್ದಾರೆ. ಅವರು ಆದಿಉಡುಪಿಯ ಹೊಟೇಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಾ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿದ್ದಾರೆ, ಮನೆಯಲ್ಲಿ ಬಹಳ ಸಮಯದಿಂದ ಮಕ್ಕಳ ಬಟ್ಟೆಬರೆ ಪುಸ್ತಕಗಳನ್ನಿಟ್ಟುಕೊಳ್ಳುವುದಕ್ಕೆ ಬೀರುವಿನ ತುರ್ತು ಅಗತ್ಯವಿತ್ತು, ಗೃಹಲಕ್ಷ್ಮೀ ಯೋಜನೆಯಲ್ಲಿ 4 ತಿಂಗಳ ಹಣದಿಂದ ಬೀರುವನ್ನು ಖರೀದಿಸಿದ ಕುಸುಮಾ 12 ತಿಂಗಳ ಹಣದಿಂದ ಮಕ್ಕಳಿಗೆ ಚಿನ್ನಾಭರಣಗಳನ್ನು ಖರೀದಿಸಿದ್ದಾರೆ, ಇನ್ನೂ ಕೆಲವು ತಿಂಗಳ ನಂತರ ತನಗೂ ಸ್ವಲ್ಪ ಚಿನ್ನ ಖರೀದಿಸಬೇಕು ಎಂಬ ಆಸೆಯಲ್ಲಿದ್ದಾರೆ.