ಪುತ್ತೂರು ವಿಧಾನ ಸಭಾ ವ್ಯಾಪ್ತಿಯಲ್ಲಿನ ಪುತ್ತೂರು ಬಸ್ ನಿಲ್ದಾಣದ ಬಳಿ ರು. 2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಾಂಗ್ರೆಸ್ ಭವನಕ್ಕೆ ಶಿಲನ್ಯಾಸ

ಪುತ್ತೂರು: ರಾಜ್ಯದಲ್ಲಿ ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಬಡವರಿಗೆ ಪಂಚ ಗ್ಯಾರಂಟಿಗಳನ್ನು ನೀಡಲು ಸಾಧ್ಯವಾಗಿದೆ. ಇದನ್ನು ಸಹಿಸದ ಬಿಜೆಪಿಗರು ಟೀಕೆಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹೊಡೆದರೂ ಮತ್ತೆ ಸರ್ಕಾರ ತರೋದು ನಮಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ರಾತ್ರಿ ಪುತ್ತೂರು ವಿಧಾನ ಸಭಾ ವ್ಯಾಪ್ತಿಯಲ್ಲಿನ ಪುತ್ತೂರು ಬಸ್ ನಿಲ್ದಾಣದ ಬಳಿ ರು. 2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಾಂಗ್ರೆಸ್ ಭವನಕ್ಕೆ ಶಿಲನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಪುತ್ತೂರಿನಲ್ಲಿ ಇಂದು ಕಾಂಗ್ರೆಸ್ ಭವನ ಕಚೇರಿ ಮಾಡುವುದಕ್ಕಲ್ಲ, ಕಾಂಗ್ರೆಸ್ ದೇವಸ್ಥಾನದ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿದೆ. ಈ ಕಟ್ಟಡವು ಕಾಂಗ್ರೆಸ್ ಕಾರ್ಯಕರ್ತರ ದೇವಸ್ಥಾನವಾಗಿದೆ. ಇದರಲ್ಲಿ ಎಲ್ಲಾ ಕಾರ್ಯಕರ್ತರ ಹಕ್ಕು ಇರಬೇಕು ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರಿಂದಲೂ ದೇಣಿಗೆ ಸಂಗ್ರಹಿಸಿ ಈ ಕಟ್ಟಡ ಪೂರ್ಣಗೊಳಿಸಲಾಗುತ್ತದೆ ಎಂದರು. ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆ ತಂದಿರುವುದು ಕೇವಲ ಕಾಂಗ್ರೆಸ್‌ಗರಿಗೆ ಮಾತ್ರ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದ್ದರು. ಆದರೆ ಎಲ್ಲರಿಗಾಗಿ ಈ ಯೋಜನೆ ತಂದಿದ್ದೇವೆ. ಇದನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ. ಟೀಕೆ ಮಾಡುವವರು ಯೋಜನೆ ನಮಗೆ ಬೇಡ ಎಂದು ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು. ಆಸೆ ಪಡುವುದು ತಪ್ಪಲ್ಲ: ಮಾಧ್ಯಮಗಳು ಭಿನ್ನಾಭಿಪ್ರಾಯ, ಗುಂಪುಗಾರಿಕೆ ಎಂದೆಲ್ಲಾ ಹೇಳುತ್ತಿದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆಗಳಿಲ್ಲ. ಹೈಕಮಾಂಡ್ ಹೇಳಿದ ಹಾಗೆ ನಾವು ಮಾಡುವುದು ಬಿಟ್ಟರೆ ಬೇರೆ ಏನೂ ಇಲ್ಲ. ಯಾವುದೇ ಆಸೆ ಪಡುವುದು ತಪ್ಪಲ್ಲ. ಅದಕ್ಕಾಗಿ ಪ್ರಾರ್ಥಿಸಬೇಕು. ಪ್ರಯತ್ನ ವಿಫಲ ಆಗಬಹುದು ಆದರೆ ಪ್ರಾರ್ಥನೆ ಎಂದಿಗೂ ವಿಫಲವಾಗದು ಎಂದು ನುಡಿದರು.

ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿಯು ಕಾಂಗ್ರೆಸ್ ಪರ ವಾತಾವರಣ ಇರಲಿದೆ ಎಂದರು. ಪುತ್ತೂರು ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ವತಿಯಿಂದ 10 ಲಕ್ಷ ನೀಡುವುದಾಗಿ ಅವರು ಘೋಷಣೆ ಮಾಡಿದರು. ಮುಂದೆ ತಾಪಂ ಜಿಪಂ ಹಾಗೂ ಗ್ರಾಮಪಂಚಾಯತ್ ಚುನಾವಣೆ ಬರಲಿದೆ. ಕಾರ್ಯಕರ್ತರು ತಮ್ಮ ನಡುವೆ ಇರುವ ಗೊಂದಲಗಳು ಇರುವುದು ಸಹಜ. ಆದರೆ ಪಕ್ಷದ ಸಂಘಟನೆ ವಿಚಾರ ಬಂದಾಗ ಅದೆಲ್ಲವನ್ನೂ ಬಿಟ್ಟು ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಮತದಾರದ ಹಕ್ಕನ್ನು ಕಸಿದುಕೊಳ್ಳುವ ಕೆಲಸ, ಕಾಂಗ್ರೇಸ್ ಪಕ್ಷದ ಓಟನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಿದೆ ಇದರ ಬಗ್ಗೆ ನಾವು ಜಾಗೃತರಾಗಬೇಕು ಎಂದರು.ಮಾಜಿ ಸಚಿವ ಬಿ, ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿದರು. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಕೆ.ಪಿ.ಸಿಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು.ಟಿ ತೌಸೀಫ್, ಪಕ್ಷದ ಪ್ರಮುಖರಾದ ಉಷಾ ಅಂಚನ್, ಎಚ್, ಮಹಮ್ಮದ್ ಅಲಿ, ಅಮಳ ರಾಮಚಂದ್ರ, ಅಬ್ದುಲ್ ರಹಮಾನ್ ಅಝಾದ್, ಜೋಕಿಂ ಡಿಸೋಜ, ಫಾರೂಕ್ ಪೆರ್ನೆ, ಎಂ.ಎಸ್ ಮಹಮ್ಮದ್, ಕಾವು ಹೇಮನಾಥ ಶೆಟ್ಟಿ, ಶಾಲೆಟ್ ಪಿಂಟೋ,ಮಮತಾ ಗಟ್ಟಿ, ಅಬ್ದುಲ್ ನೆಲಪ್ಪಾಡ್, ಡಾ.ರಘು, ಯು.ಟಿ.ತೌಸೀಫ್, ಪದ್ಮರಾಜ್ ಪೂಜಾರಿ, ಅನಿತಾ ಹೇಮನಾಥ, ನೂರುದ್ಧೀನ್ ಸಾಲ್ಮರ, ಉಮಾನಾಥ ಶೆಟ್ಟಿ ಪೆರ್ನೆ, ರವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ನಿರೂಪಿಸಿದರು. ವಿಟ್ಲ ಬ್ಲಾ್ಕ ಅದ್ಯಕ್ಷ ಪದ್ಮನಾಭ ಪೂಜಾರಿ ವಂದಿಸಿದರು.