ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಬಹುಮಹಡಿ ಕಟ್ಟಡದ ಫ್ಲಾಟ್‌ನ ಪ್ಯಾಸೇಜ್‌ನಲ್ಲಿ ಇಟ್ಟಿದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ರುಪಾಯಿ ಹಾನಿಯಾಗಿರುವ ಘಟನೆ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಬಳಿ ಶನಿವಾರ ನಡೆದಿದೆ.ಕಾರ್ಕಳ ಬೈಪಾಸ್ ಬಳಿಯ ಶ್ರೀಕೃಷ್ಣ ಎನ್‌ಕ್ಲೇವ್ ಕಟ್ಟಡದ 4ನೇ ಮಹಡಿಯಲ್ಲಿ ಸುಮಾರು 6 ಪ್ಲಾಟ್‌ಗಳಿವೆ. ಉದಯ ಕೋಟ್ಯಾನ್ ಎಂಬವರ ಫ್ಲಾಟ್‌ನಲ್ಲಿ ಎಂದಿನಂತೆ ಗ್ಯಾಸ್ ತುಂಬಿದ ಸಿಲಿಡರ್‌ನ್ನು ಹೊರ ಭಾಗದಲ್ಲಿ ಇಡಲಾಗಿತ್ತು. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಹೊರಗಿಂದ ಬೆಂಕಿ ಕಾಣಿಸಿಕೊಂಡಿದೆ. ಅದನ್ನು ಕಂಡ ಉದಯ ಕೋಟ್ಯಾನ್ ಅವರಿಗೆ ಕೆಳಗೆ ಬರಲು ಸಾಧ್ಯವಾಗದೆ ಮನೆಯ ಮೇಲ್ಭಾಗಕ್ಕೆ ಓಡಿ ಹೋಗಿ ಸಹಾಯಕ್ಕಾಗಿ ರಸ್ತೆಯಲ್ಲಿ ಹೋಗುವವರನ್ನು ಬೊಬ್ಬೆ ಹಾಕಿ ಕರೆಯುತ್ತಿದ್ದರು.
ಮತ್ತೊಂದು ಫ್ಯ್ಲಾಟ್‌ನಲ್ಲಿರುವ ಪುತ್ತಬ್ಬ ಎಂಬವರ ಪತ್ನಿ, ಸೊಸೆ ಹೊಗೆ ಮತ್ತು ಬೆಂಕಿ ಕಂಡು ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಕೆಳಗೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಉದಯ ಕೋಟ್ಯಾನ್ ಅವರ ಮನೆಯ ಗೋಡೆಗಳು ಹಾಗೂ ಬಾಗಿಲು ಸಂಪೂರ್ಣ ಸುಟ್ಟು ಕರಕಲಾಗಿವೆ.ಸ್ಫೋಟದ ತೀವ್ರತೆಗೆ ಪಕ್ಕದ ಇನ್ನೊಂದು ಫ್ಲಾಟ್‌ನ ಬಾಗಿಲು ಒಡೆದು ಒಳಗಿರುವ ಪೀಠೋಪಕರಣಗಳು , ಬಟ್ಟೆಬರೆ, ಕಪಾಟುಗಳೆಲ್ಲ ಬೆಂಕಿಗಾಹುತಿಯಾಗಿವೆ. ಈ ಫ್ಲ್ಯಾಟ್‌ನಲ್ಲಿ ಯಾರೂ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಪುತ್ತಬ್ಬ ಅವರ ಮನೆಯೊಳಗೆ ಹೊಕ್ಕಿದ ಬೆಂಕಿ ಜ್ವಾಲೆಗೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಬಾಗಿಲು ಹಾಗೂ ಕಿಟಕಿ ಇನ್ನಿತರ ವಸ್ತುಗಳಿಗೆ ಹಾನಿಯಾಗಿದೆ.ಸ್ಫೋಟದ ಶಬ್ದ ಸುಮಾರು 2 ಕಿ.ಲೋ. ಮೀಟರ್ ದೂರದವರೆಗೆ ಕೇಳಿಸಿದ್ದು ಪಕ್ಕದ ಮನೆಗಳ ಜನರು ಬೆಚ್ಚಿಬಿದ್ದಿದ್ದಾರೆ. ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಕಳ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಕಳ ಪಿಎಸ್ಐ ಸಂದೀಪ್ ಶೆಟ್ಟಿ ಹಾಗೂ ಸುಬ್ರಮಣ್ಯ ಅವರು ಹೆಚ್ಚಿನ ಅನಾಹುತ ನಡೆಯದಂತೆ ಕ್ರಮ ಕೈಗೊಂಡಿದ್ದು ವಿದ್ಯುತ್ ವಯರ್‌ಗಳಲ್ಲಿ ವಿದ್ಯುತ್ ಸೋರಿಕೆ ಹಾಗೂ ಹೊಗೆ ತುಂಬಿ ಕೊಂಡಿರುವುದರಿಂದ ಸಾರ್ವಜನಿಕರಿಗೆ ಫ್ಲಾಟ್‌ನೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ.