ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯಲ್ಲಿ ಸಿಲಿಂಡರ್ ಅನಿಲ ಸೋರಿಕೆಯಿಂದ ಹತ್ತಿದ ಬೆಂಕಿಗೆ ಹೊಟೇಲ್ ಕಾರ್ಮಿಕನೋರ್ವ ಗಂಭೀರ ಗಾಯಗೊಂಡ ಪರಿಣಾಮ ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬನಹಟ್ಟಿಯ ಬಸ್ ನಿಲ್ದಾಣ ಎದುರಿನ ಸುಖಸಾಗರ ಹೋಟೆಲ್‌ನಲ್ಲಿ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಹೋಟೆಲ್‌ನಲ್ಲಿ ಭಾರೀ ಶಬ್ದ ಕೇಳಿಬಂದಿದ್ದರಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಾಗೂ ಗ್ರಾಹಕರು ಭಯಗೊಂಡು ಹೊರಗೆ ಓಡಿ ಬಂದರು.ನಡೆದಿದ್ದೇನು ?: ಪ್ರಾಥಮಿಕ ತನಿಖೆಯ ಮಾಹಿತಿ ಪ್ರಕಾರ ಹೋಟೆಲ್‌ನ ಕೆಳ ಮಹಡಿಯಲ್ಲಿ ಸಿಲಿಂಡರ್ ಇಡಲಾಗುತ್ತಿತ್ತು. ಒಳಭಾಗದ ಅಡುಗೆ ಕೋಣೆಯಲ್ಲಿ 3-4 ಸಿಲಿಂಡರ್ ಇಡಲಾಗಿತ್ತು. ಬೆಳಗ್ಗೆಯಿಂದಲೂ ಗ್ಯಾಸ್ ವಾಸನೆ ಬರುತ್ತಿದ್ದರಿಂದ ಸಿಬ್ಬಂದಿ ಅನುಮಾನ ಬಂದು ಅಡುಗೆ ಕೋಣೆಗೆ ಹೋಗಿ ಚೆಕ್ ಮಾಡಿದ್ದು, ಅಲ್ಲಿದ್ದ ಮೂರು ಸಿಲಿಂಡರ್ ಉರಿಯುತ್ತಿದ್ದವು. ಅನಿಲ ಸೋರಿಕೆಯ ಯಾವುದೇ ಕುರುಹು ಸಿಕ್ಕಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹೋಟೆಲ್ ಮಾಲೀಕರು ಕರೆಂಟ್ ಸ್ವಿಚ್ಡ್ ಆಫ್ ಮಾಡಿದ್ದಾರೆ. ಪೈಪ್ ನಲ್ಲಿ ಸಮಸ್ಯೆಯಾಗಿರಬಹುದು ಎಂದು ರಿಪೇರಿ ಮಾಡುವವರನ್ನು ಕರೆಸಲು ಪ್ರಯತ್ನಿಸಿದ್ದಾರೆ. ಅಷ್ಟರೊಳಗೆ ಕೆಳಗಿರುವ ಕೋಣೆಗೆ ಹೋಗಿ ನೋಡುವಂತೆ ಸಿಬ್ಬಂದಿಯೊಬ್ಬನನ್ನು ಕಳಿಸಿದ್ದು, ಈತ ಕೋಣೆಗೆ ಹೋಗುತ್ತಲೆ ಸಿಗರೇಟ್ ಸೇದಲು ಬೆಂಕಿ ಗೀರಿದ್ದಾನೆ. ತಕ್ಷಣ ಬೆಂಕಿ ಆವರಿಸಿಕೊಂಡಿದ್ದು, ಸಿಬ್ಬಂದಿಗೆ ಬೆಂಕಿ ತಗುಲಿ ಹೊರಗೆ ಓಡಿ ಬಂದಿದ್ದಾನೆ. ಕೂಡಲೇ ಅಂಬ್ಯುಲೆನ್ಸ್, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ. ಗಾಯಾಳುವನ್ನು ತಕ್ಷಣ ಬಾಗಲಕೊಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಲಿಂಡರ್ ಸೋರಿಕೆಯಾದ ಕೋಣೆ ಕೆಳಮಹಡಿಯಲ್ಲಿದ್ದು, ರಾತ್ರಿಯಿಂದಲೇ ತುಂಬಿದ್ದ ಸಿಲಿಂಡರ್ ನಿಂದ ಸೋರಿಕೆಯಾಗಿದೆ. ಬೆಂಕಿ ಆವರಿಸುತ್ತಲೇ ಭಾರೀ ಶಬ್ದ ಕೇಳಿಬಂದಿದ್ದು, ಕೋಣೆಯ ಕಿಟಕಿ ಗ್ಲಾಸ್ ಹಾಗೂ ಇತರೆ ವಸ್ತುಗಳು ಒಡೆದುಬಿದ್ದಿವೆ. ರಾತ್ರಿಯಿಡೀ ಸೋರಿಕೆಯಾಗಿದ್ದರೂ ಮೇಲಿನ ಅಡುಗೆ ಕೋಣೆಯಲ್ಲಿ ಮೂರು ಗ್ಯಾಸ್ ಉರಿಯುತ್ತಿದ್ದರೂ ಯಾವುದೇ ಅಪಾಯ ಆಗಿಲ್ಲ. ಒಂದು ವೇಳೆ ಮೇಲಿನ ಗ್ಯಾಸ್ ಗಳಿಗೆ ಬೆಂಕಿ ಆವರಿಸಿದ್ದರೆ ಇವು ಸ್ಫೋಟಗೊಂಡು ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಈ ದುರಂತ ತಪ್ಪಿದೆ.ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.