ಸಾರಾಂಶ
ಆಶಾಕಿರಣ ಯೋಜನೆ ದೃಷ್ಟಿದೋಷ ಹೊಂದಿದ ಅನೇಕ ಜನಸಾಮಾನ್ಯರ ಪಾಲಿಗೆ ಬೆಳಕಾಗಲಿದ್ದು, 2.45 ಲಕ್ಷ ಮಂದಿಗೆ ಉಚಿತ ಕನ್ನಡಕ ವಿತರಣೆ ಯೋಜನೆಯನ್ನು ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಎಲ್ಲ ವಯಸ್ಸಿನವರಿಗೆ ಕಣ್ಣಿನ ತಪಾಸಣೆ ಮಾಡಿ ದೃಷ್ಟಿ ದೋಷ ನಿವಾರಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ‘ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ’ ಘೋಷಣೆಯಡಿ 8 ಜಿಲ್ಲೆಗಳಲ್ಲಿ ದೃಷ್ಟಿದೋಷ ಹೊಂದಿರುವ ಸುಮಾರು 2.45 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಕ್ಕೆ ಹಾವೇರಿಯಲ್ಲಿ ಫೆ.18ರಂದು ಸಂಜೆ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶಾಕಿರಣ ಯೋಜನೆ ದೃಷ್ಟಿದೋಷ ಹೊಂದಿದ ಅನೇಕ ಜನಸಾಮಾನ್ಯರ ಪಾಲಿಗೆ ಬೆಳಕಾಗಲಿದ್ದು, ಯೋಜನೆಯನ್ನು ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದರು.
ಆಶಾಕಿರಣ ಯೋಜನೆಯಡಿ ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲ ಜನರ ಕಣ್ಣಿನ ತಪಾಸಣಾ ಕಾರ್ಯವನ್ನು ಆಶಾ ಕಾರ್ಯಕರ್ತೆಯರು ನಡೆಸಿದ್ದರು. ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 56, 59, 036 ಜನರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಲಾಗಿತ್ತು.
ಅವರಲ್ಲಿ 8,28, 884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಕಂಡುಬಂದಿದ್ದು, ದ್ವಿತೀಯ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2,45,588 ಮಂದಿಗೆ ದೃಷ್ಟಿದೋಷ ಇರುವುದು ಪತ್ತೆಯಾಗಿದೆ.
2,45,588 ಜನರಿಗೂ ಉಚಿತ ಕನ್ನಡಕ ಒದಗಿಸುವ ಕಾರ್ಯ ಫೆ.18ರಿಂದ ಪ್ರಾರಂಭವಾಗಲಿದೆ. ಅಲ್ಲದೆ 39,336 ಜನರಿಗೆ ಕಣ್ಣಿನ ಪೊರೆ ತೊಂದರೆ ಕಂಡು ಬಂದಿದ್ದು, ಇವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನೂ ಕೂಡಾ ಉಚಿತವಾಗಿ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಮಕ್ಕಳಿಂದ ಹಿಡಿದು ವಯೋವೃದ್ದರ ವರೆಗೂ ಎಲ್ಲರ ಕಣ್ಣಿನ ತಪಾಸಣೆಯನ್ನು ಆರೋಗ್ಯ ಇಲಾಖೆ ಜನರ ಮನೆಬಾಗಿಲಿಗೆ ಹೋಗಿ ಆರೋಗ್ಯ ಸೇವೆ ಒದಗಿಸುತ್ತಿದೆ. ಈ ಬಳಿಕ ಕಣ್ಣಿನ ತೊಂದರೆ ಇದ್ದವರು ಎರಡನೇ ಹಂತದಲ್ಲಿ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
ಇಲ್ಲಿ ನೇತ್ರಾಧಿಕಾರಿಗಳು ಪರೀಕ್ಷೆ ಮಾಡಿ ಉಚಿತ ಕನ್ನಡಕವನ್ನು ನೀಡುತ್ತಾರೆ. ಕಣ್ಣಿನ ಪೊರೆ ಇರುವವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅಥವಾ ನೋಂದಾಯಿತ ಸ್ವಯಂ ಸೇವಾ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಗೆ ಮುನ್ನ ಸಚಿವ ದಿನೇಶ್ ಗುಂಡೂರಾವ್ ಅವರು ಬಸವಣ್ಣನ ಭಾವಚಿತ್ರ ಅನಾವರಣಗೊಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು, ಜಿ.ಪಂ. ಸಿಇಒ ಡಾ.ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮಹಪಾತ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಇದ್ದರು.