ಸಾರಾಂಶ
ವೆಂಕಟಾಪತಿ ಬಾವಿಯಲ್ಲಿ ಏಳು ಶಿಲಾಕಂಬಗಳಲ್ಲಿನ ನಾದ ಒಂದೊಂದು ರೀತಿ ನುಡಿಯುವುದು, ವಿಶ್ವವಿಖ್ಯಾತ ಪರಂಪರೆಯಲ್ಲಿ ಇದೇ ಬಾವಿಯ ಕಲಾಕೃತಿಯು ಪ್ರಥಮ ಸ್ಥಾನ ಪಡೆದುಕೊಂಡಿದೆ.
ಕನಕಗಿರಿ: ಇಲ್ಲಿನ ಕನಕಗಿರಿ ಉತ್ಸವ ಸ್ಥಳ ವೀಕ್ಷಣೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ನಳಿನ್ ಅತುಲ್ ನೇತೃತ್ವದ ಅಧಿಕಾರಿಗಳ ತಂಡಕ್ಕೆ ಸಚಿವ ಶಿವರಾಜ ತಂಗಡಗಿ ಕನಕಗಿರಿ ಐತಿಹ್ಯದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿ ಉತ್ತಮ ಗೈಡ್ ಎನಿಸಿಕೊಂಡರು.ವೇದಿಕೆ, ಹೆಲಿಪ್ಯಾಡ್, ಪಾರ್ಕಿಂಗ್ ಹಾಗೂ ಊಟೋಪಚಾರದ ವ್ಯವಸ್ಥೆಗೆ ಸ್ಥಳ ಪರಿಶೀಲಿಸಿದ ಅಧಿಕಾರಿಗಳಿಗೆ ಸಚಿವರು ಕನಕಗಿರಿಯನ್ನಾಳಿದ ಅರಸರ ಹಾಗೂ ಪರಂಪರೆಯ ಕುರಿತು ಮಾಹಿತಿ ನೀಡಿದರು.ವೆಂಕಟಾಪತಿ ಬಾವಿಯಲ್ಲಿ ಏಳು ಶಿಲಾಕಂಬಗಳಲ್ಲಿನ ನಾದ ಒಂದೊಂದು ರೀತಿ ನುಡಿಯುವುದು, ವಿಶ್ವವಿಖ್ಯಾತ ಪರಂಪರೆಯಲ್ಲಿ ಇದೇ ಬಾವಿಯ ಕಲಾಕೃತಿಯು ಪ್ರಥಮ ಸ್ಥಾನ ಪಡೆದುಕೊಂಡಿದೆ. ನಿಧಿ ಆಸೆಗೆ ದುಷ್ಕರ್ಮಿಗಳು ಈ ಕಲಾತ್ಮಕ ಬಾವಿಯನ್ನು ಹಾಳು ಮಾಡುತ್ತಿದ್ದಾರೆಂದು ಸಚಿವ ತಂಗಡಗಿ ಬೇಸರ ವ್ಯಕ್ತಪಡಿಸಿದರು.
ಇನ್ನು ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿದಾಗಲೂ ಪ್ರಾಂಗಣದ ಸರದಿಯಲ್ಲಿರುವ ಬ್ರಹ್ಮ, ಗೋಪಾಲಕೃಷ್ಣ, ಪನ್ನಿದ್ಧರಾಳ್ವರ್, ಪ್ರಾಣದೇವರು, ಪರಮೇಶ್ವರ, ಗರುಡ ದೇಗುಲಗಳ ದರ್ಶನ ಮಾಡಿಸಿದರು. ನಂತರ ಕನಕಾಚಲ ದೇಗುಲದೊಳಗೆ ತೆರಳಿ ವಿಜಯನಗರ ಅರಸರ ಸಾಮಂತ ನಾಯಕರ ಆಳ್ವಿಕೆಯಲ್ಲಿ ಈ ದೇಗುಲ ನಿರ್ಮಾಣವಾಗಿದೆ. ಅದರಲ್ಲಿ ಉಡಚಪ್ಪ, ಪರಸಪ್ಪ ನಾಯಕರು ಪಾತ್ರವನ್ನು ವಿವರಿಸಿದರು.ಅಧಿಕಾರಿಗಳಿಗೆ ಸಚಿವ ತಂಗಡಗಿ ೨೦ ನಿಮಿಷಕ್ಕೂ ಹೆಚ್ಚು ಕಾಲ ಕನಕಗಿರಿ ಇತಿಹಾಸ ಕುರಿತು ಸಮರ್ಪಕ ಮಾಹಿತಿ ನೀಡುವಲ್ಲಿ ತಲ್ಲೀನರಾಗಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾದಾಗಿನಿಂದ ಇತಿಹಾಸವನ್ನು ಅಧ್ಯಯನ ಮಾಡಿತ್ತಿದ್ದೇನೆ. ಅದರಂತೆ ಕನಕಗಿರಿ-ಹಂಪಿ ಇತಿಹಾಸ ತಿಳಿದುಕೊಂಡಿರುವೆ. ಡಿಸಿ, ಎಸಿ, ಸಿಇಒ ಅವರಿಗೆ ಕನಕಗಿರಿ ಇತಿಹಾಸದ ಕುರಿತು ಗೈಡ್ ಮಾಡಿರುವೆ. ಉತ್ಸವಕ್ಕೆ ಆಗಮಿಸುವ ಗಣ್ಯರಿಗೂ ಕನಕಗಿರಿ ಇತಿಹಾಸ ತಿಳಿಸುವೆ ಎನ್ನುತ್ತಾರೆ ಸಚಿವ ಶಿವರಾಜ ತಂಗಡಗಿ.