ಹಾವೇರಿ: ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಯುದ್ಧದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಹೋಟೆಲ್ ಉದ್ಯಮ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಕಟ್ಟಿಗೆ ಒಲೆಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಸೌದೆಗೆ ಬೇಡಿಕೆ ಏಕಾಏಕಿ ಹೆಚ್ಚಿದ ಹಿನ್ನೆಲೆಯಲ್ಲಿ ಅಕ್ರಮವಾಗಿ ಮರ ಕಡೆಯುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಬೃಹತ್ ನಗರಗಳಲ್ಲಿ ಪರ್ಯಾಯ ಇಂಧನ ವ್ಯವಸ್ಥೆ ಇಲ್ಲದೆ ಕೇವಲ ಎಲ್‌ಪಿಜಿ ಮೇಲೆ ಅವಲಂಬಿತವಾಗಿರುವ ಹೋಟೆಲ್ ಉದ್ಯಮ ಬಹುತೇಕ ನೆಲ ಕಚ್ಚಿದೆ. ಆದರೆ ಹಾವೇರಿ ಸೇರಿದಂತೆ ದ್ವಿತೀಯ ಮತ್ತು ತೃತೀಯ ಹಂತದ ನಗರಗಳಲ್ಲಿ ಈಗಲೂ ಸೌದೆ ಒಲೆಯ ಬಳಕೆ ಸಾಕಷ್ಟಿದೆ. ಅಡುಗೆ ಅನಿಲ ಸಿಲಿಂಡರ್ ಕೊರತೆಯ ಹಿನ್ನೆಲೆಯಲ್ಲಿ ಬಹುತೇಕ ಹೋಟೆಲ್ ಮತ್ತು ಆಹಾರ ತಯಾರಿಕಾ ಉದ್ಯಮಗಳಲ್ಲಿ ಹಳೇಯ ಮಾದರಿಯಾದ ಸೌದೆ ಒಲೆ ಮತ್ತೆ ಉರಿಯತೊಡಗಿದೆ.ನಮ್ಮಲ್ಲಿ ಕಳೆದ ಮೂರು ದಿನಗಳಿಂದ ಸೌದೆ ಒಲೆಯಲ್ಲಿ ಅಡುಗೆ ಸಿದ್ಧಪಡಿಸುತ್ತಿದ್ದೇವೆ. ಸಿಬ್ಬಂದಿಯೂ ಸಹ ಅನಿವಾರ್ಯವಾಗಿರುವುದರಿಂದ ಒಪ್ಪಿಕೊಂಡಿದ್ದಾರೆ. ಆದರೆ ಬಹಳ ದಿನ ಹೀಗೇ ನಡೆಸುವುದು ಕಷ್ಟ ಎಂದು ನಗರದ ಹೋಟೆಲ್ ಒಂದರ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಬಹಳಷ್ಟು ಗ್ರಾಮೀಣ ಭಾಗದ ಮನೆಗಳಲ್ಲೂ ಸಹ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಕೊರತೆಯಾಗಬಹುದು ಎಂಬ ಆತಂಕದಿಂದ ತುರ್ತು ಅಗತ್ಯವಿದ್ದಾಗ ಮಾತ್ರ ಗ್ಯಾಸ್ ಬಳಕೆ ಮಾಡುವ ಮುಂಜಾಗೃತೆ ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ಹಲವಾರು ಮನೆಗಳಲ್ಲಿ ಮತ್ತೇ ಸೌದೆ ಒಲೆಯಲ್ಲಿ ಅಡುಗೆ ತಯಾರಿ ಶುರುವಾಗಿದೆ. ಅರಣ್ಯ ಇಲಾಖೆ ಕಟ್ಟೆಚ್ಚರ: ಜಿಲ್ಲೆಯಲ್ಲಿ ಸುಮಾರು 43 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಇದ್ದು, ಅರಣ್ಯ ರಕ್ಷಣೆಗೆ ಸಿಬ್ಬಂದಿ ಕೊರತೆಯೂ ಇದೆ. ಅಲ್ಲದೇ 3 ಸಾವಿರ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಅತಿಕ್ರಮಣ ಪ್ರಕರಣಗಳಿವೆ. ಇನ್ನು, ಬೇಸಿಗೆ ತೀವ್ರವಾಗಿರುವ ಕಾರಣ ಅರಣ್ಯಕ್ಕೆ ಬೆಂಕಿ ಬೀಳುವ ಪ್ರಕರಣಗಳು ಘಟಿಸುವ ಸಾಧ್ಯತೆ ಇದ್ದು ಇಲಾಖೆ ಈ ಬಗ್ಗೆ ಕಟ್ಟೆಚ್ಚರ ವಹಿಸಿದೆ. ಇದೆಲ್ಲದರ ನಡುವೆ ಪ್ರಸ್ತುತ ಗ್ಯಾಸ್ ಸಿಲಿಂಡರ್ ಅಭಾವದಿಂದ ಸೌದೆಗೆ ಬೇಡಿಕೆ ಹೆಚ್ಚಿರುವುದು ಇಲಾಖೆಯ ಅಧಿಕಾರಿಗಳ ನಿದ್ದೆಗೆಡಿಸಿದೆ. ಅಕ್ರಮವಾಗಿ ಮರ ಕಡಿಯುವ ಆತಂಕವಿರುವ ಕಾರಣ ಇಂಥ ಪ್ರಕರಣಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.ಗ್ಯಾಸ್ ಏಜೆನ್ಸಿಗಳಲ್ಲಿ ನೂಕು ನುಗ್ಗಲು: ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗೆ ಸದ್ಯ ಅಷ್ಟಾಗಿ ಕೊರತೆಯಾಗದಿದ್ದರೂ ಅನಗತ್ಯ ಗಾಬರಿಯ ಪರಿಣಾಮ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಸ್ ಸಿಲಿಂಡರ್ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದಾರೆ. ಏಕಾಏಕಿ ಹೆಚ್ಚಿದ ಬುಕ್ಕಿಂಗ್‌ನಿಂದ ಗ್ಯಾಸ್ ಕಂಪನಿಗಳ ಸರ್ವರ್ ಡೌನ್ ಆಗಿದೆ. ಇದರಿಂದ ಜನ ಹಾವೇರಿಯ ಗ್ಯಾಸ್ ಏಜೆನ್ಸಿಗಳಿಗೆ ನೇರವಾಗಿ ನುಗ್ಗಿ ಸಿಲಿಂಡರ್ ಕೊಡುವಂತೆ ದುಂಬಾಲು ಬೀಳುತ್ತಿದ್ದಾರೆ. ಹೀಗಾಗಿ ಗ್ಯಾಸ್ ಏಜೆನ್ಸಿಗಳಲ್ಲಿ ಗ್ರಾಹಕರ ದಟ್ಟಣೆ ಏಕಾಏಕಿ ಹೆಚ್ಚಿರುವುದು ಕಂಡು ಬರುತ್ತಿದೆ. ಗ್ಯಾಸ್ ಸಿಲಿಂಡರ್ ಕೊರತೆ ಇರುವುದರಿಂದ ಅರಣ್ಯ ಸಚಿವರು ಅಕ್ರಮ ಮರ ಕಡಿತವಾಗದಂತೆ ಎಚ್ಚರವಹಿಸುವಂತೆ ಆದೇಶ ಮಾಡಿದ್ದಾರೆ. ಇದಕ್ಕೂ ಪೂರ್ವದಲ್ಲೇ ಜಿಲ್ಲೆಯ ಎಲ್ಲ ವಲಯ ಅರಣ್ಯಾಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೆ. ಸದ್ಯ ಯಾವುದೇ ಅಕ್ರಮ ಮರ ಕಡಿತ ಪ್ರಕರಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ ಎಂದು ಹಾವೇರಿ ಡಿಎಫ್‌ಓ ಅಕ್ಷಯ ಪ್ರಕಾಶಕರ್ಡಿ ಹೇಳಿದರು.ಗ್ಯಾಸ ಕೊರತೆ: ಹಾವೇರಿ ಜಿಲ್ಲೆಯಲ್ಲಿ ಮರ ಕಡಿತ ತಡೆಗೆ ಕಟ್ಟೆಚ್ಚರ
ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಯುದ್ಧದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಹೋಟೆಲ್ ಉದ್ಯಮ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಕಟ್ಟಿಗೆ ಒಲೆಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಸೌದೆಗೆ ಬೇಡಿಕೆ ಏಕಾಏಕಿ ಹೆಚ್ಚಿದ ಹಿನ್ನೆಲೆಯಲ್ಲಿ ಅಕ್ರಮವಾಗಿ ಮರ ಕಡೆಯುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.