ಸಾರಾಂಶ
೭ ಗ್ರಾಮ ಪಂಚಾಯಿತಿ ಸದಸ್ಯರನ್ನು ಪೊಲೀಸ್ ಸರ್ಪಗಾವಲಿನಲ್ಲಿ ಹಳೆಯ ಗ್ರಾಮ ಪಂಚಾಯಿತಿಯಲ್ಲಿ ಕೂಡಿ ಹಾಕಿ, ಹೊಸ ಗ್ರಾಪಂ ಕಟ್ಟಡ ಉದ್ಘಾಟಿಸಿದ ಪ್ರಸಂಗ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸವಣೂರು: ೭ ಗ್ರಾಮ ಪಂಚಾಯಿತಿ ಸದಸ್ಯರನ್ನು ಪೊಲೀಸ್ ಸರ್ಪಗಾವಲಿನಲ್ಲಿ ಹಳೆಯ ಗ್ರಾಮ ಪಂಚಾಯಿತಿಯಲ್ಲಿ ಕೂಡಿ ಹಾಕಿ, ಹೊಸ ಗ್ರಾಪಂ ಕಟ್ಟಡ ಉದ್ಘಾಟಿಸಿದ ಪ್ರಸಂಗ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದಲ್ಲಿ ನಡೆದಿದೆ.
೧೩ ಸದಸ್ಯರನ್ನು ಹೊಂದಿರುವ ಕುಣಿಮೆಳ್ಳಿಹಳ್ಳಿ ಗ್ರಾಪಂನಲ್ಲಿ 7 ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಗ್ರಾಪಂನ ನೂತನ ಕಟ್ಟಡ ಉದ್ಘಾಟಿಸಿದ್ದಾರೆ ಎಂದು ಅಧ್ಯಕ್ಷ ಸುರೇಶ ಸೂರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಗ್ರಾಪಂ ಅಧ್ಯಕ್ಷ ಸುರೇಶ ಸೂರದ ವಿರುದ್ಧ ಅವಿಶ್ವಾಸ ಗೊತ್ತುವಳಿಗಾಗಿ ಈಗಾಗಲೇ ಸದಸ್ಯರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅವಿಶ್ವಾಸ ಗೊತ್ತುವಳಿ ದಿನಾಂಕ ನಿಗದಿ ಮೊದಲು ಅಧ್ಯಕ್ಷ ಸೂರದ ಅವರು ಗ್ರಾಪಂ ನೂತನ ಕಟ್ಟಡ ಉದ್ಘಾಟನೆಗೆ ಮುಂದಾಗಿದ್ದು ಅವಾಂತರಕ್ಕೆ ಕಾರಣವಾಗಿದೆ.ಗ್ರಾಪಂ ನೂತನ ಕಟ್ಟಡ ಉದ್ಘಾಟನೆಗಾಗಿ ದಿನಾಂಕ ನಿಗದಿಗಾಗಿ ಜ. ೨೧ರಂದು ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಆದರೆ ಮೂವರು ಸದಸ್ಯರು ಮಾತ್ರ ಹಾಜರಿದ್ದರು. ಕೋರಂ ಭರ್ತಿಯಾಗದ ಹಿನ್ನೆಲೆಯಲ್ಲಿ ಸಭೆ ರದ್ದುಪಡಿಸಲಾಗಿತ್ತು. ಮುಂದೆ ಮತ್ತೆ ಸಭೆ ನಡೆಯಲಿಲ್ಲ. ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ಕುರಿತು ಮಾಹಿತಿ ಹೊರಬಿದ್ದ ತಕ್ಷಣ ೮ ಗ್ರಾಪಂ ಸದಸ್ಯರು ಅಧಿಕಾರಿಗಳಿಗೆ ದೂರು ಸಲ್ಲಿಸಿದರು.
ಶಾಸಕರು, ಅಧಿಕಾರಿಗಳು ಸಮಾರಂಭ ರದ್ದುಗೊಳಿಸಲು ಸೂಚಿಸಿದ್ದರು. ಆದರೆ, ಫೆ. ೧ರಂದು ಉದ್ಘಾಟನೆಗೆ ಸಿದ್ಧತೆ ನಡೆದಿತ್ತು. ಅಧ್ಯಕ್ಷ ಸುರೇಶ ಸೂರದ ಶಾಸಕ ಯಾಸೀರ್ ಅಹ್ಮದ್‌ಖಾನ್ ಪಠಾಣ ಅವರನ್ನೂ ಆಹ್ವಾನಿಸಿದ್ದರು. ಜ. ೩೧ರಂದು ರಾತ್ರಿ ಸಿದ್ಧತೆ ಕೈಗೊಳ್ಳುವುದನ್ನು ಕಂಡ ೭ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಆದರೆ ಶಾಸಕ ಯಾಸೀರಅಹ್ಮದಖಾನ್ ಪಠಾಣ ಅವರು ಪೊಲೀಸ್ ಸರ್ಪಗಾವಲಿನಲ್ಲಿ ಆಗಮಿಸಿ, ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿದ್ದು, ಉಳಿದ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.ಡಿವೈಎಸ್‌ಪಿ ಕೆ.ವಿ. ಗುರುಶಾಂತಪ್ಪ, ಪಿಐ ಆನಂದ ಒನಕುದ್ರೆ, ಸುರೇಶ ಕುಂಬಾರ, ಪಿಎಸ್‌ಐ ಮೇಘರಾಜ ದೊಡ್ಡಮನಿ, ಪರಶುರಾಮ ಕಟ್ಟಿಮನಿ ಹಾಗೂ ವಿವಿಧ ಅಧಿಕಾರಿಗಳು ಇದ್ದರು.
ಸದಸ್ಯರಿಗೆ ದಿಗ್ಬಂಧನ: ವಿರೋಧ ವ್ಯಕ್ತಪಡಿಸಿದ್ದ ಗ್ರಾಪಂ ಉಪಾಧ್ಯಕ್ಷೆ ನಿರ್ಮಲಾ ಭಜಂತ್ರಿ, ನಿಂಗಪ್ಪ ಚಿಗಳ್ಳಿ, ರಾಜು ಕಡ್ಡಿಯವರ, ಯಲ್ಲಪ್ಪ ಗುಡ್ಡಪ್ಪನವರ, ಗೀತಾ ಗಾಳಿಗೌಡ್ರ, ಹೂವಕ್ಕ ಪಲ್ಲೇದ, ಸಂಗನಗೌಡ ಹೊಂಬರಡಿ ಸೇರಿದಂತೆ ೭ ಸದಸ್ಯರನ್ನು ಗ್ರಾಪಂ ಹಳೆಯ ಕಟ್ಟಡದಲ್ಲಿ ಕೂಡಿ ಹಾಕಲಾಗಿತ್ತು. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳಿದ್ದು, ಸದಸ್ಯರು ಸಮಾರಂಭಕ್ಕೆ ತೆರಳದಂತೆ ನೋಡಿಕೊಂಡರು. ಶಾಸಕರು ಆಗಮಿಸಿದ ಬಳಿಕ ವಿರೋಧಿಸಿದ್ದ ಸದಸ್ಯರ ಮನವೊಲಿಸಿ ಸಮಾರಂಭಕ್ಕೆ ಆಹ್ವಾನಿಸುತ್ತಾರೆ ಎನ್ನುವ ನಂಬಿಕೆ ಹುಸಿಯಾಗಿದ್ದು, ಅವರಲ್ಲಿ ಬೇಸರ ತಂದಿತು.