ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇತ್ತೀಚೆಗಷ್ಟೇ ಟೀಸರ್ ಹಾಗೂ ಹಾಡುಗಳಿಂದ ಕ್ರೇಜ್ ಹುಟ್ಟಿಸಿರುವ ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನ-ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.ಈ ಚಿತ್ರಕ್ಕೆ ನನ್ನ ಅಕ್ಕನ ನೆನಪಿಗಾಗಿ ಗೌರಿ ಎಂಬ ಶೀರ್ಷಿಕೆ ಇಡಲಾಗಿದೆ. ಆದರೆ, ಇದು ಗೌರಿ ಜೀವನಾಧಾರಿತ ಚಿತ್ರವಲ್ಲ. ಅವಳ ಆತ್ಮಕತೆಯೂ ಅಲ್ಲ, ಗೌರಿ ಎಂಬುವುದು ಒಂದು ಪಾತ್ರ ಮಾತ್ರ. ಇದು ಕಮರ್ಷಿಯಲ್ ಸಿನಿಮಾವಾದರೂ ಉತ್ತಮ ಸಂದೇಶವನ್ನು ನೀಡಲಾಗಿದೆ. ಈ ಚಿತ್ರಕ್ಕೆ ನನ್ನ ಸಿನಿಮಾ ಜೀವನದ ಅನುಭವವನ್ನು ಧಾರೆ ಎರೆದಿದ್ದೇನೆ. ಕಷ್ಟಪಟ್ಟು, ಇಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಈ ಚಿತ್ರದಲ್ಲಿ ಹಿರಿಯ ನಟರೂ ಇದ್ದಾರೆ. ಜೊತೆಗೆ ಬಹುತೇಕ ಯುವ ಪ್ರತಿಭೆ ಗಳಿಂದಲೇ ಈ ಚಿತ್ರ ಮೂಡಿ ಬಂದಿದೆ. ನಾಯಕನ ಪಾತ್ರದಲ್ಲಿ ನನ್ನ ಮಗ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿಯ ಪಾತ್ರದಲ್ಲಿ ಕಿರುತೆರೆಯ ನಟಿ ಸಾನ್ಯ ಅಯ್ಯರ್ ಅಭಿನಯಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬುಧವಾರ ಪ್ರೆಸ್‌ಟ್ರಸ್ಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದು ನೈಜ ಘಟನೆಯನ್ನು ಆಧಾರಿಸಿದೆ. ಅಕ್ಕನ ನೆನಪಿನಲ್ಲಿ ಈ ಹೆಸರು ಇಟ್ಟಿದ್ದೇನೆ. ಹಾಗೆ ನೋಡಿದರೆ, ಅಕ್ಕ ಗೌರಿ ಕುರಿತ ಚಲನಚಿತ್ರ ಮಾಡುವುದು ತುಂಬ ಕಷ್ಟ ಎಂದು ಸ್ಪಷ್ಟನೆ ನೀಡಿದರು.ಶಿವಮೊಗ್ಗ ಜಿಲ್ಲೆ ನಮ್ಮ ತವರೂರು. ನಮ್ಮ ಮೂಲ ಬೇರುಗಳು ಇಲ್ಲಿವೆ. ಈ ಜಿಲ್ಲೆಯ ಜನರ ಆಶೀರ್ವಾದ ನನ್ನ ಪುತ್ರ ಮೇಲೆ ಬೇಕಿದೆ. ಅದೇ ಕಾರಣಕ್ಕೆ ಗೌರಿ ಚಿತ್ರದ ಪ್ರಚಾರ ಕಾರ್ಯವನ್ನು ಮೊಟ್ಟ ಮೊದಕ ಬಾರಿಗೆ ಶಿವಮೊಗ್ಗದಿಂದಲೇ ಆರಂಭಿಸುತ್ತಿದ್ದೇವೆ. ಲಂಕೇಶ್ ಅವರಂತಹ ಶ್ರೇಷ್ಟ ಪರ್ತಕರ್ತ, ಲೇಖಕ, ಚಿತ್ರ ನಿರ್ದೇಶಕನನ್ನು ಕೊಟ್ಟ ನೆಲವಿದು. ಅವರ ಪುತ್ರನಾಗಿ ನಾನು ತಂದೆಯವರ ಆಶೀರ್ವಾದ, ಮಾರ್ಗದರ್ಶನದ ಮೂಲಕವೇ ಪತ್ರಕರ್ತನಾಗಿ, ಚಿತ್ರ ನಿರ್ದೇಶಕ ನಾಗಿ, ನಿರ್ಮಾಪಕ ನಾಗಿ ಗುರುತಿಸಿಕೊಂಡಿದ್ದು ನಿಮಗೆಲ್ಲ ಗೊತ್ತಿದೆ. ಅಂತೆಯೇ ನನ್ನ ಪುತ್ರ ಸಮರ್ಜಿತ್ ಕೂಡ ಚಿತ್ರ ರಂಗಕ್ಕೆ ಪ್ರವೇಶಿಸುತ್ತಿದ್ದಾರೆ ಎಂದರು.
ನನ್ನ ಮಗ ಸಮರ್ಜಿತ್ ನಾಯಕನಾಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ಸಾನ್ಯಾ ಅವರ ಅಭಿನಯ ಕೂಡ ಉತ್ತಮವಾಗಿದೆ. ಗೌರಿ ಚಿತ್ರ ಯಾವುದಕ್ಕೂ ಕಡಿಮೆ ಇಲ್ಲದೆ ಅದ್ದೂರಿಯಾಗಿ ಮೂಡಿಬಂದಿದೆ. ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ ಎಂದು ಮನವಿ ಮಾಡಿದರು.ನಾಯಕ ನಟ ಸಮರ್ಜಿತ್ ಲಂಕೇಶ್, ನಟಿ ಸಾನ್ಯಾ ಅಯ್ಯರ್ ಮಾತನಾಡಿ, ಈ ಚಿತ್ರಕ್ಕೆ ಬಹುದೊಡ್ಡ ತಾರಗಣವಿದೆ. ಒಳ್ಳೆಯ ಸಂಗೀತವಿದೆ, ಉತ್ತಮ ಸಂದೇಶವಿದೆ, ಕನ್ನಡ ಚಿತ್ರವನ್ನು ನೋಡುವುದರ ಮೂಲಕ ನಮ್ಮನ್ನು ಪ್ರೋತ್ಸಹಿಸಬೇಕು ಎಂದರು.